ರಾಯಚೂರಿನ ಹಟ್ಟಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಹಣ ವಸೂಲಿ; ರೇಷನ್ ಚೀಟಿಗೆ 40 ರೂ ಫಿಕ್ಸ್, ಹಣ ಇಲ್ದಿದ್ರೆ ಅಕ್ಕಿಯಿಲ್ಲ, ಬೇಳೆ ಇಲ್ಲ!

ಅದು ಬಡವರ ಹೊಟ್ಟೆ ತುಂಬಿಸುವ ಮಹತ್ವದ ಯೋಜನೆ. ಒಂದು ರೂಪಾಯಿಯನ್ನು ಪಡಯದೇ ಸರ್ಕಾರ ಪಡಿತರ ನೀಡುತ್ತಿದೆ. ಆದ್ರೆ, ಗಡಿ ಜಿಲ್ಲೆ ರಾಯಚೂರಿನಲ್ಲಿ ಕೆಲ ನ್ಯಾಯ ಬೆಲೆ ಅಂಗಡಿಯವರು ಬಡವರಿಂದ ಹಣ ವಸೂಲಿಗಿಳಿದಿದ್ದು, ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ‌.

ರಾಯಚೂರಿನ ಹಟ್ಟಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಹಣ ವಸೂಲಿ; ರೇಷನ್ ಚೀಟಿಗೆ 40 ರೂ ಫಿಕ್ಸ್, ಹಣ ಇಲ್ದಿದ್ರೆ ಅಕ್ಕಿಯಿಲ್ಲ, ಬೇಳೆ ಇಲ್ಲ!
ರಾಯಚೂರು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ವಸೂಲಿ ಆರೋಪ
Edited By:

Updated on: Feb 03, 2024 | 3:01 PM

ರಾಯಚೂರು, ಫೆ.03: ರಾಜ್ಯದಲ್ಲಿ ಬಡವರ ಹೊಟ್ಟೆ ತುಂಬಿಸಲೆಂದೇ ಸರ್ಕಾರ ಪ್ರತಿ ತಿಂಗಳು ಸಂಪೂರ್ಣ ಉಚಿತವಾಗಿ ರೇಷನ್ ಕೊಡುತ್ತಿದೆ. ಪ್ರತಿ ತಿಂಗಳು ಅಕ್ಕಿ ಸೇರಿದಂತೆ ಗೋಧಿ, ಬೇಳೆ ಹೀಗೆ ಇನ್ನಿತರ ಪದ್ದಾರ್ಥವನ್ನ ಸರ್ಕಾರವೇ ಜನರಿಗೆ ನೀಡುತ್ತದೆ. ಈ ಮೂಲಕ ಬಡವರು, ಬಲ್ಲಿದರು ಮೂರು ಹೊತ್ತು ಊಟ ಮಾಡುತ್ತಿದ್ದಾರೆ. ಆದ್ರೆ, ಗಡಿ ಜಿಲ್ಲೆ ರಾಯಚೂರಿನಲ್ಲಿ ನ್ಯಾಯ ಬೆಲೆ ಅಂಗಡಿ(Nyaya bele angadi)ಗಳಲ್ಲಿ ಮಹಾನ್ ಮೋಸ‌ ನಡೆಯಿತ್ತಿರುವ ಆರೋಪ ಕೇಳಿ ಬಂದಿದೆ. ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಬಹುತೇಕ ನ್ಯಾಯ ಬೆಲೆ ಅಂಗಡಿಗಳಲ್ಲಿ ಬಡವರು ರೇಷನ್ ಪಡೆಯಬೇಕೆಂದರೆ ಪ್ರತಿ ಚೀಟಿಗೆ 40 ರೂ. ಕೊಡಲೇಬೇಕು.

ವರದಿ ಬೆನ್ನಲ್ಲೇ ಅಲರ್ಟ್​ ಆದ ಅಧಿಕಾರಿಗಳು

ಅಮಾಯಕ ಜನರು ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ತಾವು ದುಡಿದ ದುಡ್ಡಲ್ಲಿ ಸರ್ಕಾರದ ಉಚಿತ ಅಕ್ಕಿಗೂ 40 ರೂ ಕೊಡುತ್ತಿದ್ದಾರೆ. ಹೀಗೆ ಜನರಿಂದ ಬಸವರಾಜ ಎನ್ನುವ ವ್ಯಕ್ತಿ ನ್ಯಾಯ ಬೆಲೆ ಅಂಗಡಿಯಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಆಧರಿಸಿ ಟಿವಿ9 ಸುದ್ದಿ ಬಿತ್ತರಿಸಿತ್ತು. ಇದರ ಭಾಗವಾಗಿ ಈಗ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈ ಕುರಿತು ಮಾತನಾಡಿದ ಲಿಂಗಸುಗೂರು ಸಹಾಯಕ ಆಯುಕ್ತ ಅವಿನಾಶ್ ಶಿಂಧೆ, ಹಟ್ಟಿ ಪಟ್ಟಣದಲ್ಲಿ ಹಣ ವಸೂಲಿ ಮಾಡಿ ರೇಷನ್ ಕೊಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಅಕ್ಕಿ ಬದಲು ಹಣ ನೀಡುವುದರ ವಿರುದ್ಧ ಸಿಡಿದ ಪಡಿತರ ವಿತರಕರು: ಇಂದು ರಾಜ್ಯಾದ್ಯಂತ ನ್ಯಾಯಬೆಲೆ‌ ಅಂಗಡಿಗಳು ಬಂದ್

ಇದು ಬರೀ ಬಸವರಾಜ್​ಗೆ ಸೇರಿದ ನ್ಯಾಯ ಬೆಲೆ ಅಂಗಡಿಯ ಕಥೆಯಲ್ಲ. ಈ ಭಾಗದ ಬಹುತೇಕ ನ್ಯಾಯ ಬೆಲೆ ಅಂಗಡಿಗಳ ಕರಾಳ ಮುಖ ಇದು. ತೂಕ ಇಲ್ಲ, ರೂಲ್ಸ್ ಇಲ್ಲ, 40 ರೂ. ಕೊಟ್ಟರೆ ಮಾತ್ರ ರೇಷನ್ ಎಂದು ಸರ್ಕಾರದ ಮಹತ್ವದ ಯೋಜನೆಯ ಉದ್ದೇಶವನ್ನೇ ಮರೆತಿದ್ದಾರೆ. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಅಧಿಕಾರಿಗಳು ಹಟ್ಟಿ ಪಟ್ಟಣದ ನ್ಯಾಯ ಬೆಲೆ ಅಂಗಡಿಗಳ ವಾಸ್ತವ ಸ್ಥಿತಿ, ಹಣ ವಸೂಲಿ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಆಹಾರ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಎಂಬುವವರು ಆದೇಶಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ