ರಾಯಚೂರು: ತಾಲ್ಲೂಕಿನ ಗುರ್ಜಾಪುರದಲ್ಲಿ (Gurjapur Barriage) ಕೃಷ್ಣಾ ನದಿಗೆ (Krishna River) ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ನ 104 ಕ್ರಸ್ಟ್ಗೇಟ್ಗಳನ್ನು ತೆರೆಯಲು ಸಾಧ್ಯವಾಗದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.73 ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಕ್ರಸ್ಟ್ಗೇಟ್ಗಳ ಮೇಲೆ ಒತ್ತಡವೂ ಹೆಚ್ಚಾಗಿದೆ. ಕ್ರಸ್ಟ್ಗೇಟ್ ತೆರೆಯಲು ಇದು ತಾಂತ್ರಿಕ ಅಡಚಣೆ ತಂದೊಡ್ಡಿದೆ.
ಒಟ್ಟು 194 ಕ್ರಸ್ಟ್ಗೇಟ್ಗಳಿರುವ ಗುರ್ಜಾಪುರ ಬ್ಯಾರೇಜ್ನ ಸಂಗ್ರಹ ಸಾಮರ್ಥ್ಯ 1.5 ಟಿಎಂಸಿ ಅಡಿ. ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ನೀರು ಪೂರೈಸಲೆಂದು ಈ ಬ್ಯಾರೇಜ್ ನಿರ್ಮಿಸಲಾಗಿದೆ. ಪೈಕಿ 90 ಗೇಟ್ಗಳನ್ನು ಮಾತ್ರ ಈವರೆಗೆ ತೆರೆಯಲು ಸಾಧ್ಯವಾಗಿದೆ. ಬ್ಯಾರೇಜ್ನ ಕ್ರಸ್ಟ್ಗೇಟ್ಗಳು ಸ್ಟ್ರಕ್ ಆಗಿರುವ ಹಿನ್ನೆಲೆಯಲ್ಲಿ ಆರ್ಟಿಪಿಎಸ್ ಅಧಿಕಾರಿಗಳ ತಂಡ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು ಪ್ರಯತ್ನಗಳನ್ನು ಮುಂದುವರಿಸಿದೆ.
ಇದೀಗ ಕ್ರಸ್ಟ್ಗೇಟ್ ತೆರೆಯಲು ಕೇರಳದಿಂದ ನಾಲ್ವರು ಮುಳುಗುತಜ್ಞರ ತಂಡವನ್ನು ಕರೆಸಲಾಗಿದೆ. ಮತ್ತೊಂದೆಡೆ ಜೆಸಿಬಿ ಬಳಸಿಕೊಂಡು ಗೇಟ್ ತೆರೆಯುವ ಪ್ರಯತ್ನವೂ ನಡೆಯುತ್ತಿದೆ. ಕ್ರಸ್ಟ್ಗೇಟ್ ತೆರೆಯಲು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಅಧಿಕಾರಿಗಳ ಎಡವಟ್ಟಿನಿಂದಾಗಿ ಈಗಾಗಲೇ ಸಾವಿರಾರು ಎಕರೆ ಕೃಷಿಭೂಮಿ ಜಲಾವೃತವಾಗಿದೆ ಎಂದು ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ರೈತರು ದೂರಿದ್ದಾರೆ. ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಯಾಗುವ ಮೊದಲು ಬ್ಯಾರೇಜ್ನ ಗೇಟ್ ತೆರೆಯಬೇಕಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ.
ಗುರ್ಜಾಪುರ ಬ್ಯಾರೇಜ್ನಲ್ಲಿರುವ ಕ್ರೇನ್ಗಳ ಹೈಡ್ರೋ ಒತ್ತಡ ಸಹಿಷ್ಣುತೆ ಸಾಮರ್ಥ್ಯ ಕೇವಲ 2 ಟನ್ ಇದೆ. ಆದರೆ ಪ್ರಸ್ತುತ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಒತ್ತಡವು ಕ್ರಸ್ಟ್ಗ್ರೇಟ್ಗಳ ಸಮೀಪ 10 ಟನ್ ದಾಟಿದೆ. ಹೀಗಾಗಿ ಕ್ರಸ್ಟ್ಗೇಟ್ ತೆರೆಯಲು ಅಧಿಕಾರಿಗಳು ಪರದಾಡುವಂತಿದೆ.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳಲ್ಲಿಯೂ ದೋಷ
ಹೊಸಪೇಟೆ: ತುಂಗಭದ್ರಾ ಜಲಾಶಯದ ಮೂರು ಕ್ರಸ್ಟ್‌ಗೇಟ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ನದಿಗೆ ನೀರು ಹರಿಸಲು ಅಡಚಣೆ ಉಂಟಾಗಿದೆ. 105.78 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 95 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. 1.50 ಕ್ಯೂಸೆಕ್ ಹರಿದು ಬರುತ್ತಿದ್ದು, ನದಿಗೆ ಅಷ್ಟೇ ಪ್ರಮಾಣದ ನೀರು ಹರಿಸಲಾಗುತ್ತಿದೆ. ಅಣೆಕಟ್ಟೆಯಲ್ಲಿ ಒಟ್ಟು 33 ಕ್ರಸ್ಟ್‌ಗೇಟ್‌ಗಳಿವೆ. ಈ ಪೈಕಿ 1, 21 ಹಾಗೂ 33ನೇ ಕ್ರಸ್ಟ್‌ಗೇಟ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅವುಗಳನ್ನು ತೆರೆಯಲು ಈವರೆಗೆ ಸಾಧ್ಯವಾಗಿಲ್ಲ.
Published On - 2:39 pm, Sun, 17 July 22