ಬೆಳಗಾವಿ: ರಾಜ್ಯದಲ್ಲಿ ವರುಣನ ಆರ್ಭಟ ದಿನೇ ದಿನೇ ಹೆಚ್ಚಾಗುತ್ತಿದೆ. ಮಳೆಯಿಂದಾಗಿ ಗೋಕಾಕ್ ನಲ್ಲಿ ಗುಡ್ಡ ಕುಸಿದು ಬಂಡೆಗಲ್ಲು ಉರುಳುತ್ತಿವೆ. ಇದರಿಂದ ಜನ ಭಯಭೀತರಾಗಿದ್ದಾರೆ. ಮಳೆಯ ಪರಿಣಾಮ ನಿನ್ನೆ ಗೋಕಾಕ್ ನ ಮಲ್ಲಿಕಾರ್ಜುನ ಬೆಟ್ಟದಲ್ಲಿ ಜೋಡಿ ಬಂಡೆಗಲ್ಲು 8 ಅಡಿ ಕೆಳಗೆ ಜಾರಿತ್ತು ಇಂದು ಮತ್ತೆ 5 ಅಡಿ ಜಾರಿವೆ. ರಾತ್ರಿ ಮಳೆ ಆರ್ಭಟ ಹೆಚ್ಚಾಗಿದ್ದು, ಬಂಡೆ ಬೀಳುವ ಆತಂಕದಲ್ಲಿ ಗೋಕಾಕ್ ನಗರದ ಜನ ಇದ್ದಾರೆ.
ಹಿಗಾಗಿ ಎನ್ಡಿಆರ್ಎಫ್, ನಗರಸಭೆಯಿಂದ ಸತೀಶ ಜಾರಕಿಹೊಳಿ ಫೌಂಡೇಶನ್ ನೇತೃತ್ವದಲ್ಲಿ ಇಂದಿನಿಂದ ಆಪರೇಷನ್ ಬಂಡೆ ಕಾರ್ಯಾಚರಣೆ ಶುರುವಾಗಿದೆ. ತೆರವುಕಾರ್ಯಕ್ಕಾಗಿ 25 ಜನರು ಬಳಗೊಂಡಿರುವ ಪುಣೆಯ NDRF ತಂಡ ಗೋಕಾಕ್ ನಗರಕ್ಕೆ ಬಂದಿಳಿದಿದೆ. ಇಳಕಲ್, ಕೊಲ್ಲಾಪುರದಲ್ಲಿ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡೋ ಕಾರ್ಮಿಕರು ತಮ್ಮ ಕೆಲಸ ಶುರುಮಾಡಿದ್ದಾರೆ. ಪ್ರೆಶರ್ ಮಷಿನ್, ಹಿಟಾಚಿ, ಕಲ್ಲು ಕರಗಿಸಲು ಬಳಸುವ ಪೌಡರ್ ಬಳಸಿ ಮಲ್ಲಿಕಾರ್ಜುನ ಬೆಟ್ಟದಲ್ಲಿ ಇರೋ ಎರಡು ಬೃಹತ್ ಬಂಡೆಗಳನ್ನು ತೆರವುಗೊಳಿಸಲು ಸಿದ್ಧತೆ ನಡೆದಿದೆ.
ಆಪರೇಷನ್ ಬಂಡೆ ಕಾರ್ಯಾಚರಣೆಯಲ್ಲಿ ಕ್ರೆಡಿಟ್ ವಾರ್
ಆಪರೇಷನ್ ಬಂಡೆ ಕಾರ್ಯಾಚರಣೆಯಲ್ಲಿ ಹಿಟಾಚಿ ಮೇಲೆ ಸತೀಶ್ ಜಾರಕಿಹೊಳಿ ಫೋಟೋ ಬ್ಯಾನರ್ ಹಾಕಲಾಗಿದೆ. ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿಯೂ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಮುಂಬರುವ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಗೆ ಸಾಥ್ ನೀಡಿದ್ದು, ಬಂಡೆಗಲ್ಲು ಸರಿಪಡಿಸಿದ್ದು ನಾವೇ ಎಂದು ಕ್ರೆಡಿಟ್ ಪಡೆಯಲು ಪ್ಲಾನ್ ಮಾಡಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
110ಟನ್ ಗಾತ್ರದ ಬಂಡೆಗಲ್ಲು ಒಡೆಯಲು ಹರಸಾಹಸ
ಬಂಡೆಗಲ್ಲಿನ ನಾಲ್ಕು ಭಾಗದಲ್ಲಿ ಸುರಂಗ ಕೊರೆದು ನಂತರ ಬಂಡೆಗಲ್ಲನ್ನು ಚೂರು ಮಾಡಲು ಸಿಬ್ಬಂದಿಗಳು ಸಿದ್ಧತೆ ನಡೆಸಿದ್ದಾರೆ. ಗೋಕಾಕ್ ನ ಕಲ್ಲುಗಾರಿಕೆ ಕಾರ್ಮಿಕ ಆರೀಪ್ ಪಿರ್ಜಾದೆ ನೇತೃತ್ವದಲ್ಲಿ ರಾಜಸ್ಥಾನ ಮೂಲದ ಮೋಹನ್, ಪ್ರಭು, ರಾಮ್ ರಿಂದ ಡ್ರಿಲ್ಲಿಂಗ್ ನಡೆಯುತ್ತಿದ್ದು, ಇಳಕಲ್ ಮೂಲದ ಕಿಶೋರ್, ಗುಂಡು ಚವ್ಹಾಣ, ಉಮೇಶ್ ರಾಠೋಡ ಜೊತೆಯಾಗಿದ್ದಾರೆ. ಡ್ರಿಲ್ಲಿಂಗ್ ಮಷೀನ್. ಕಾಂಪ್ರೆಸರ್, ಡ್ರಿಲ್ಲಿಂಗ್ ವ್ಯಾಬ್ರೇಟರ್, ಕ್ರ್ಯಾಕ್ ಪೌಡರ್, ಪೈಪ್ ಮೂಲಕ ಏರ್ ಕಂಪ್ರೇಸರ್ ಬಳಕೆ ಮಾಡಲಾಗುತ್ತಿದೆ. ಸಿಬ್ಬಂದಿಗಳಿಂದ ಹಿಂಬದಿಯ ಬಂಡೆಗೆ ನಾಲ್ಕು ಭಾಗದಲ್ಲಿ ಐದು ಅಡಿಯಷ್ಟು ಸುರಂಗ ತೆಗೆಲಾಗುತ್ತಿದೆ.
ಎನ್.ಡಿ.ಆರ್.ಎಪ್ ತಂಡದ ಮತ್ತು ಇಂಜಿನಿಯರ್, ತಜ್ಞರ ಸಹಾಯದಿಂದ ಕಾರ್ಯಾಚರಣೆ ನಡೆಯುತ್ತಿದೆ. ಬಂಡೆ ಮುಂಭಾಗದಲ್ಲಿ ಗುಂಡಿ ತೆಗೆದು ಬಂಡೆ ಜಾರಿದ್ರೂ ಗುಂಡಿಯಲ್ಲಿ ಬೀಳುವ ಹಾಗೆ ಮಾಡಲಾಗುತ್ತೆ. ಬಂಡೆ ಒಡೆಯುವ ಕುರಿತು ಎರಡು ಮಾದರಿಯಲ್ಲಿ ಪ್ಲಾನಿಂಗ್ ಮಾಡಲಾಗುತ್ತೆ. ಕೆಮಿಕಲ್ ಹಾಕಿ ಬಂಡೆಯನ್ನ ಇರುವ ಸ್ಥಳದಲ್ಲಿ ಕರಗಿಸುವುದು ಅಥವಾ ಬಂಡೆ ಒಡೆಯುವ ತಜ್ಞರಿಂದ ಬಂಡೆಯನ್ನ ಒಡೆದು ಚೂರು ಮಾಡಿ ತೆಗೆದ ಗುಂಡಿಯಲ್ಲಿ ಹಾಕುವುದು. ಎರಡರಲ್ಲಿ ಎನ್.ಡಿ.ಆರ್.ಎಪ್ ಸಿಬ್ಬಂದಿಗಳು ಸೂಚಿಸಿದ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಬೆಳಗಾವಿ ಜಿಲ್ಲೆಯ ಗೋಕಾಕ್ ನ ಮಲ್ಲಿಕಾರ್ಜುನ ಬೆಟ್ಟದಲ್ಲಿ ತಹಶಿಲ್ದಾರ ಪ್ರಕಾಶ್ ಟಿವಿ9 ಗೆ ಮಾಹಿತಿ ನೀಡಿದ್ದಾರೆ.
ಆಪರೇಷನ್ ಬಂಡೆಯ ಒಂದು ಭಾಗ ಒಡೆದ ಸಿಬ್ಬಂದಿ
ಬಿರುಸಿನಿಂದ ಸಾಗಿದ್ದ ಬಂಡೆ ತೆರವು ಕಾರ್ಯಾಚರಣೆ ಕೆಲ ಸಮಯದ ವರೆಗೆ ಸ್ಥಗಿತಗೊಂಡಿತ್ತು ನಂತರ ಸಿಬ್ಬಂದಿ ಬಂಡೆಯ ಒಂದು ಭಾಗ ಒಡೆದ ಡ್ರಿಲ್ ಮಾಡಿ ಡೈನಮೇಟ್ ಇಟ್ಟು ಬಂಡೆ ಒಡೆದಿದ್ದಾರೆ. ಬಂಡೆಗಲ್ಲಿನ ನಾಲ್ಕು ಭಾಗದಲ್ಲಿ ಐದು ಅಡಿಯಷ್ಟು ರಂಧ್ರ ಆಗಿದ್ದು, ಬಂಡೆಯ ಒಂದು ಭಾಗ ಯಶಸ್ವಿಯಾಗಿ ಒಡೆದಿದೆ.
Published On - 10:20 am, Wed, 23 October 19