ರಾಮನಗರ: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಅನುಷ್ಠಾನದಲ್ಲಿ (ಪಿಎಂಎಂವಿವೈ) ರಾಮನಗರ ಜಿಲ್ಲೆಯು ಇಡೀ ರಾಜ್ಯದಲ್ಲಿಯೇ ಸತತ ಏಳನೇ ಬಾರಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕಳೆದ 2020ರ ಜುಲೈ ನಿಂದ 2021ರ ಜನವರಿ ತಿಂಗಳ ವರೆಗೆ ಮೊದಲನೇ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಇಡೀ ರಾಜ್ಯಕ್ಕೇ ಮಾದರಿಯಾಗಿ ಹೊರಹೊಮ್ಮಿದೆ.
ಜಿಲ್ಲೆಯಲ್ಲಿ ಮಾತೃ ವಂದನಾ ಯೋಜನೆಯನ್ನು ಜಿಲ್ಲಾ ಪಂಚಾಯತಿ ಮಾರ್ಗದರ್ಶನದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ 2017ರ ಜನವರಿ 1 ರಿಂದ ಅನುಷ್ಠಾನಕ್ಕೆ ತರಲಾಗಿದೆ. ಯೋಜನೆ ಆರಂಭಗೊಂಡ ಮೂರುವರೆ ವರ್ಷಗಳಲ್ಲಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಜಿಲ್ಲಾ ಪಂಚಾಯತಿ ತೆಗೆದುಕೊಂಡ ವಿಶೇಷ ಕಾಳಜಿಯಿಂದಾಗಿ ಇಂದು ಈ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಸುಮಾರು 11 ಲಕ್ಷ ಜನಸಂಖ್ಯೆ ಇದ್ದು, ಈ ಪೈಕಿ 4750 ಗರ್ಭಿಣಿಯರಿದ್ದಾರೆ. ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರು ಜಿಲ್ಲೆಯಲ್ಲಿರುವ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡುವುದರ ಜೊತೆಗೆ ಅವರನ್ನು ನೊಂದಣಿ ಮಾಡಿಸುತ್ತಾರೆ. ಇನ್ನೂ ನಿಯಮಿತವಾಗಿ ಇಲಾಖೆಯ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಈ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.
ಆನ್‍ಲೈನ್ ನೆರವು
ಮಾತೃ ವಂದನಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಸಮನ್ವಯ ಅಧಿಕಾರಿಯಾಗಿ ಸತೀಶ್.ಡಿ ಅವರನ್ನು ನೇಮಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಬ್ಯಾಂಕ್ ಇಲ್ಲವೆ ಅಂಚೆ ಇಲಾಖೆಯಲ್ಲಿ ಖಾತೆ ತೆರೆದುಕೊಡಲಾಗಿದೆ. ಜಿಲ್ಲಾ ಪಂಚಾಯತಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಜನರಲ್ಲಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಿದ್ದು, ಜಿಲ್ಲೆಯಲ್ಲಿರುವ ಗರ್ಭಿಣಿಯರು ಮತ್ತು ಬಾಣಂತಿಯರ ವಿವರವನ್ನು ಆನ್‍ಲೈನ್‍ನಲ್ಲಿ ದಾಖಲು ಮಾಡಲಾಗಿದೆ. ಪ್ರತಿ ದಿನವು ಯೋಜನೆಯ ಪ್ರಗತಿಯನ್ನು ಇದರಿಂದ ಅರಿತುಕೊಳ್ಳಲು ಸಹಾಯಕವಾಗಿದ್ದು, ಜೊತೆಗೆ ಸಮರ್ಪಕವಾಗಿ ಅನುಷ್ಠಾನಗೊಳ್ಳಲು ನೆರವಾಗಿದೆ.
ಗುರಿ ಮೀರಿದ ಸಾಧನೆ
ರಾಮನಗರ ಜಿಲ್ಲೆಗೆ 2021ರ ಜನವರಿ ತಿಂಗಳಿಗೆ ಒಟ್ಟು 4749 ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಯೋಜನೆಯ ಪ್ರಯೋಜನವನ್ನು ತಲುಪಿಸುವ ಗುರಿ ನೀಡಲಾಗಿತ್ತು. ಪ್ರಸಕ್ತ ಜನವರಿ ತಿಂಗಳ ಅಂತ್ಯಕ್ಕೆ ಈ ಗುರಿಗೆ ಎದುರಾಗಿ ಜಿಲ್ಲೆಯಲ್ಲಿ 7226 ಮಂದಿ ಬಾಣಂತಿಯರು ಮತ್ತು ಗರ್ಭಿಣಿಯರನ್ನು ಗುರುತಿಸಿ ಅವರಿಗೆ ನೆರವನ್ನು ನೀಡುವ ಮೂಲಕ ಗುರಿ ಮೀರಿದ ಅಂದರೆ ಶೇ 128.44 ರಷ್ಟು ಸಾಧನೆ ಮಾಡಲಾಗಿದೆ. ಅದೇ ರೀತಿ, ಪ್ರಸಕ್ತ ವರ್ಷದ ಜನವರಿ ತಿಂಗಳಲ್ಲಿ 475 ಮಂದಿಗೆ ಆರ್ಥಿಕ ನೆರವನ್ನು ತಲುಪಿಸುವ ಗುರಿಗೆ ಎದುರಾಗಿ ಒಟ್ಟು 610 ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಲ್ಲಿ ಶೇ 152.15ರಷ್ಟು ಸಾಧನೆಯಾಗಿದೆ.
ಯೋಜನೆಯ ರೂಪುರೇಷೆ
ಚೊಚ್ಚಿಲ ಗರ್ಭಿಣಿಯರಿಗೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾವುದೇ ಆದಾಯದ ಮಿತಿ ಇರುವುದಿಲ್ಲ. ಫಲಾನುಭವಿ ಸರ್ಕಾರಿ ನೌಕರರಾಗಿರಬಾರದು ಎಂಬ ನಿಬಂಧನೆಯಿದೆ. ಗರ್ಭ ಧರಿಸಿದ 3 ತಿಂಗಳೊಳಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಮಾಡಿ ನೀಡಬೇಕು. ಅರ್ಹ ಗರ್ಭಿಣಿಯರಿಗೆ ಮೂರು ಹಂತದಲ್ಲಿ ನೇರವಾಗಿ ಅವರ ಖಾತೆಗೆ ಹಣ ಜಮೆಯಾಗುತ್ತದೆ. ಮೊದಲ ಮೂರು ತಿಂಗಳಲ್ಲಿ 1000 ರೂಪಾಯಿ, 6 ತಿಂಗಳಾದಾಗ 2000 ರೂಪಾಯಿ ಮತ್ತು ಹೆರಿಗೆಯ ನಂತರ 2000 ರೂಪಾಯಿ ನೀಡಲಾಗುವುದು.
ರಾಮನಗರ ಜಿಲ್ಲೆಯ ಮಾತೃ ವಂದನಾ ಯೋಜನೆಯ ವಿವರ:
ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರುಗಳ ವಿಶೇಷ ಆಸಕ್ತಿಯಿಂದಾಗಿ ಈ ಯೋಜನೆಯು ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸಫಲಗೊಂಡಿದ್ದೇವೆ. ಕಳೆದ 7 ತಿಂಗಳಿಂದ ಮೊದಲನೇ ಸ್ಥಾನ ಕಾಯ್ದುಕೊಂಡು ಬರುವಲ್ಲಿ ಸಿಡಿಪಿಒಗಳಾದ ಮಂಜುನಾಥ್, ದಿನೇಶ್, ಸಿದ್ದಲಿಂಗಯ್ಯ, ಸುರೇಂದ್ರ ಸೇರಿದಂತೆ ಎಲ್ಲಾ ಹಿರಿಯ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಸಾಧ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿ.ವಿ. ರಾಮನ್ ಹೇಳಿದ್ದಾರೆ.
ಜಿಲ್ಲೆಯ ಜನರು ನೀಡಿದ ಸಹಕಾರದಿಂದ ಮಾತೃ ವಂದನಾ ಯೋಜನೆಯ ಅನುಷ್ಠಾನದಲ್ಲಿ ರಾಮನಗರ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯಲು ಸಾಧ‍್ಯವಾಗಿದೆ. ಅತ್ಯುತ್ತಮವಾಗಿ ಕೆಲಸ ಮಾಡಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ ಎಂದು ರಾಮನಗರ ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ ತಿಳಿಸಿದ್ದಾರೆ.
ಇದನ್ನೂ ಓದಿ: 111 ವರ್ಷ ಕಾಲ ಬದುಕಿದ್ದ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ವೀರಾಪುರದಲ್ಲಿ ತಲೆ ಎತ್ತಲಿದೆ!