ಬೆಂಗಳೂರು ಮೈಸೂರು ಹೆದ್ದಾರಿ ವಿರುದ್ಧ ಮತ್ತೊಂದು ವಿವಾದ: ಟೋಲ್ ರಸ್ತೆಯಲ್ಲಿ ಓಡಾಡದಿದ್ರೂ ಶುಲ್ಕ ಕಡಿತ, ಸವಾರರ ಆಕ್ರೋಶ

|

Updated on: Mar 27, 2023 | 2:26 PM

Bengaluru Mysuru Expressway: ಬೆಂಗಳೂರು-ಮೈಸೂರು ಫ್ಲೈ ಓವರ್​​ಗೆ ಹೋಗದೇ ಇದ್ರೂ, ಹೈವೇಯಲ್ಲಿ ಜರ್ನಿ ಮಾಡದೇ ಇದ್ರೂ ಫಾಸ್ಟ್​ಟ್ಯಾಗ್​ನಲ್ಲಿ ದುಡ್ಡು ಕಟ್ಟಾಗುತ್ತಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.

ರಾಮನಗರ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದಿನಕ್ಕೊಂದು ಹೊಸ ವಿವಾದಗಳು ಎದ್ದು ಬರುತ್ತಿದೆ. ಕ್ರೆಡಿಟ್ ವಾರ್, ಸರ್ವೀಸ್​ ರಸ್ತೆ ಗಲಾಟೆ, ಟೋಲ್ ಹೈಡ್ರಾಮಾ, ಮಳೆ ನೀರಿನ ಅವಾಂತರ ಹೀಗೆ ಹೆದ್ದಾರಿಗೆ ಗುದ್ದಲಿ ಪೂಜೆ ಮಾಡಿದಾಗಿಲಿಂದಲೂ ಒಂದಿಲ್ಲೊಂದು ಗಲಾಟೆ ನಡೀತಾನೆ ಇದೆ. ಇದೀಗ ಹೆದ್ದಾರಿಗಳಲ್ಲಿನ ಸಮಸ್ಯೆಗಳ ಸರಮಾಲೆಗೆ ಹೊಸ ವಿವಾದ ಸೇರ್ಪಡೆಯಾಗಿದೆ. ಇಷ್ಟು ದುಬಾರಿ ಶುಲ್ಕದ ವಿರುದ್ಧ ವಾಹನ ಸವಾರರು ಸಿಡಿದೆದ್ದಿದ್ದರು. ಆದ್ರೆ ಈಗ ರಸ್ತೆಯಲ್ಲಿ ಸಂಚರಿಸದೇ ಇದ್ರೂ ಫಾಸ್ಟ್​ಟ್ಯಾಗ್​ನಲ್ಲಿ ದುಡ್ಡು ಕಟ್ಟಾಗುತ್ತಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು-ಮೈಸೂರು ಫ್ಲೈ ಓವರ್​​ಗೆ ಹೋಗದೇ ಇದ್ರೂ, ಹೈವೇಯಲ್ಲಿ ಜರ್ನಿ ಮಾಡದೇ ಇದ್ರೂ, ವೆಹಿಕಲ್ ಓನರ್​​ಗಳಿಗೆ ಶಾಕ್ ತಟ್ತಿದೆಯಂತೆ. ಸಂಚಾರ ಮಾಡದೇ ಇದ್ರೂ, ಹೆದ್ದಾರಿ ಲೆಕ್ಕದಲ್ಲಿ ಹಣ ಕಟ್ ಆಗ್ತಿದೆ ಅಂತ ಜನ ಗೋಳಾಡ್ತಿದ್ದಾರೆ.

ರಾಮನಗರದ ಚೆನ್ನಿಗರಾಜು ಎಂಬುವವರು ಮಾರುತಿ ವ್ಯಾಗನಾರ್​ ಕಾರು ಹೊಂದಿದ್ದಾರೆ. ಅವರು ಈತನಕ ಒಮ್ಮೆಯೂ ಎಕ್ಸ್​ಪ್ರೆಸ್​ ಹೈವೇಯಲ್ಲಿ ಜರ್ನಿ ಮಾಡಿಲ್ಲ. ಆದ್ರೆ, ಮಾರ್ಚ್​ 24ರ ರಾತ್ರಿ ಅವರ ಫಾಸ್ಟ್​ಟ್ಯಾಗ್​ನಿಂದ 135 ರೂ. ಕಡಿತವಾಗಿದೆ. ಕಣಿಮಿಣಿಕೆ ಟೋಲ್​ ಫ್ಲಾಜಾದಲ್ಲಿ ಹೋಗಿ ಚೆಕ್ ಮಾಡಿಸಿದ್ರೂ ಅಂದು ಗಾಡಿ ಸಂಚರಿಸಿದ ದಾಖಲೆ ಇಲ್ಲ. ಆದ್ರೂ ಹಣ ಹೇಗೆ ಕಟ್ಟಾಯ್ತು ಅಂದ್ರೆ ಅದಕ್ಕೆ ಟೋಲ್​ ಸಿಬ್ಬಂದಿ ಬಳಿ ಉತ್ತರ ಕೊಡ್ತಿಲ್ಲವಂತೆ.

ಇದನ್ನೂ ಓದಿ: ಈ ಬಾರಿ ಎಲೆಕ್ಷಲ್​ನಲ್ಲಿ ವೋಟ್ ಹಾಕಲ್ಲ: ಆಟೋ ಚಾಲಕರ ವಿನೂತನ ಅಭಿಯಾನಕ್ಕೆ ಹೆಂಡ್ತಿ, ಮಕ್ಳ ಸಾಥ್

ಚನ್ನಿಗರಾಜು ಮಾತ್ರವಲ್ಲ ರಾಮನಗರ ಮೂಲದ ಶಿವಸ್ವಾಮಿ,‌ ಪ್ರಭಾಕರ್ ಹಾಗೂ ಮಂಡ್ಯ ಮೂಲದ ತ್ಯಾಗರಾಜು ಅವರ ಫಾಸ್ಟ್​​ಟ್ಯಾಗ್​​ನಿಂದಲೂ ಸುಖಾಸುಮ್ಮನೆ ಹಣ ಕಟ್​​ ಆಗಿದೆ. ಮೊದಲೇ ದುಬಾರಿ ಟೋಲ್ ಸುಂಕ ಕಟ್ಟುತ್ತಿದ್ದೇವೆ. ಅದರ ಜೊತೆಗೆ ಟೋಲ್ ಸಿಬ್ಬಂದಿ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಒಟ್ಟಾರೆ, ದಶಪಥ ಹೆದ್ದಾರಿಯಲ್ಲಿ ಒಮ್ಮೆ ಪ್ರಯಾಣ ಮಾಡಿದ್ರೆ, 4 ಬಾರಿ ಟೋಲ್​ ಹಣ ಕಟ್ ಆಗ್ತಿದೆ ಅನ್ನೋ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದ್ರೆ ಈಗ, ಬೆಂಗಳೂರು-ಮೈಸೂರು ಹೈವೇಯಲ್ಲಿ ಸಂಚಾರ ಮಾಡ್ದೇ ಇದ್ರೂ, ಹಣ ಕಟ್ ಆಗ್ತಿದೆ. ವಾಹನ ಸವಾರರ ರೋಷಾಗ್ನಿ ಸ್ಫೋಟವಾಗುವ ಮೊದಲು, NHAIಅಧಿಕಾರಿಗಳು ಈ ಸಮಸ್ಯೆ ಸರಿಪಡಿಸಬೇಕಿದೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:04 am, Mon, 27 March 23