ಈ ಬಾರಿ ಎಲೆಕ್ಷಲ್ನಲ್ಲಿ ವೋಟ್ ಹಾಕಲ್ಲ: ಆಟೋ ಚಾಲಕರ ವಿನೂತನ ಅಭಿಯಾನಕ್ಕೆ ಹೆಂಡ್ತಿ, ಮಕ್ಳ ಸಾಥ್
ಬೆಂಗಳೂರು ಆಟೋ ಚಾಲಕರು, ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ಗೆ ಒತ್ತಾಯಿಸಿ ವಿನೂತನ ಅಭಿಯಾನ ಆರಂಭಿಸಿದ್ದಾರೆ. ಈ ಬಾರಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಸೇರಿಕೊಂಡು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬೆಂಗಳೂರು: ಕರ್ನಾಟಕ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ, ಅಬ್ಬರದ ಪ್ರಚಾರ, ತಂತ್ರ-ಪ್ರತಿತಂತ್ರ, ಆರೋಪ-ಪ್ರತ್ಯಾರೋಪ, ಟೀಕಾಪ್ರಹಾರಗಳು ನಡೆಯುತ್ತಿವೆ. ಇತ್ತ ಮತದಾರರು ಯಾರಿಗೆ ವೋಟ್ ಹಾಕ್ಲಪ್ಪಾ ಅಂತ ಯೋಚನೆಯಲ್ಲಿದ್ದಾರೆ. ಇನ್ನೂ ಕೆಲವು ಮತದಾರರು ತಮ್ಮ ಬೇಡಿಕೆ ಈಡೇರಿಲ್ಲ, ನಮ್ಮ ಊರಿನಲ್ಲಿ ಅಭಿವೃದ್ಧಿ ಕಾರ್ಯ ನಡೆಸಿಲ್ಲ ಎಂದು ಚುನಾವಣೆ ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ. ಈ ಹಾದಿಯಲ್ಲಿರುವ ಬೆಂಗಳೂರು ಆಟೋ ಚಾಲಕರು, ರ್ಯಾಪಿಡೋ ಬೈಕ್ ಟ್ಯಾಕ್ಸಿ (Rapido Bike Taxi) ಬ್ಯಾನ್ಗೆ ಒತ್ತಾಯಿಸಿ ವಿನೂತನ ಅಭಿಯಾನ ಆರಂಭಿಸಿದ್ದಾರೆ. ಈ ಬಾರಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಸೇರಿಕೊಂಡು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ನಗರದಲ್ಲಿ ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡುವಂತೆ ಆಟೋ ಚಾಲಕರು ಒತ್ತಾಯಿಸುತ್ತಾ ಬರುತ್ತಿದ್ದಾರೆ. ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿದ್ದರು. ಆದರೂ ಸರ್ಕಾರ ರ್ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಬ್ಯಾನ್ ಮಾಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಆಟೋ ಚಾಲಕರು ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ. ಹಾಗಿದ್ದರೆ ವಿಡಿಯೋದಲ್ಲಿ ಆಟೋ ಚಾಲಕರು ಹೇಳಿದ್ದೇನು?
ವಿನೂತ ಅಭಿಯಾನ ಆರಂಭಿಸಿದ ಆಟೋ ಚಾಲಕರು, ಹೆಂಡತಿ ಮಕ್ಕಳೊಂದಿಗೆ ನಿಂತುಕೊಂಡು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಹಿರಿಯರಿಗೆ ಔಷಧಿ ತರಲು ಸಾಧ್ಯವಾಗುತ್ತಿಲ್ಲ, ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿ ಎಂದು ಕೈಮುಗಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: Bengaluru: ಬೈಕ್ ಟ್ಯಾಕ್ಸಿ ರೈಡರ್ಗೆ ಆಟೋ ಚಾಲಕನಿಂದ ಕಿರುಕುಳ: ವಿಡಿಯೋ ವೈರಲ್
ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲಿಲ್ಲ ಅಂದರೆ ನಮ್ಮ ಫ್ಯಾಮಿಲಿ ಈ ಬಾರಿ ಎಲೆಕ್ಷನ್ನಲ್ಲಿ ವೋಟ್ ಹಾಕುವುದಿಲ್ಲ. ರ್ಯಾಪಿಡೋ ಬೈಕ್ ಟ್ಯಾಕ್ಸಿಯಿಂದ ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಲು ಆಗುತ್ತಿಲ್ಲ. ತಂದೆ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಮೆಡಿಸಿನ್ ಕೊಡಿಸಲು ಆಗುತ್ತಿಲ್ಲ. ರ್ಯಾಪಿಡೋ ಬೈಕ್ ಟ್ಯಾಕ್ಸಿಯಿಂದ ಆಟೋ ಚಾಲಕರು ಜೀವನ ನಡೆಸಲು ಆಗುತ್ತಿಲ್ಲ. ದಯವಿಟ್ಟು ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಎಂದು ದಯವಿಟ್ಟು ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದಾರೆ.
ಕಳೆದ ವಾರ ಬಳ್ಳಾರಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರು ಎಲೆಕ್ಷನ್ ಒಳಗೆ ಆಟೋ ಚಾಲಕರಿಗೆ ಸಿಹಿಸುದ್ದಿ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲು ಸಾರಿಗೆ ಇಲಾಖೆಯ ಕಾರ್ಯದರ್ಶಿ ಮತ್ತು ಆರ್ಟಿಒ ಆಯುಕ್ತರಿಗೆ ಹೇಳಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಒಂದು ವಾರ ಕಳೆದರೂ ಇನ್ನೂ ಯಾವುದೇ ರ್ಯಾಪಿಡೋ ಬ್ಯಾನ್ ಮಾಡುವ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ಹಾಗಾಗಿ ಆಟೋ ಚಾಲಕರು ಮಾತು ತಪ್ಪಿದ ಶ್ರೀರಾಮುಲು ಎಂದು ಹೆಂಡತಿ ಮಕ್ಕಳೊಂದಿಗೆ ವಿಡಿಯೋ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಮಾರ್ಚ್ 29 ರಂದು ರ್ಯಾಪಿಡೋ ಬೈಕ್ ಟ್ಯಾಕ್ಸಿ ಸಂಬಂಧಿಸಿದಂತೆ ವಿಚಾರಣೆಯಿದ್ದು, ಅಂದು ಚಾಲಕರಿಗೆ ಕೋರ್ಟ್ನಲ್ಲಿ ನ್ಯಾಯ ಸಿಗುತ್ತದೆ ಎಂದು ಆರ್ಟಿಓ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ 29 ರಂದು ನ್ಯಾಯಾಲಯದಲ್ಲಿ ಚಾಲಕರಿಗೆ ನ್ಯಾಯ ಸಿಗಲಿಲ್ಲ ಎಂದರೆ 30 ರಂದು ಏರ್ಪೋರ್ಟ್ ರೋಡ್ ಮತ್ತು ಕಾರ್ಪೋರೇಷನ್ ಸರ್ಕಲ್ನಲ್ಲಿ ಆಟೋಗಳನ್ನು ನಿಲ್ಲಿಸಿ ರೋಡ್ ಬಂದ್ ಮಾಡುತ್ತೇವೆ ಎಂದು ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 am, Mon, 27 March 23