
ರಾಮನಗರ, ನವೆಂಬರ್ 28: ಅಪ್ರಾಪ್ತ ಬಾಲಕಿಯರನ್ನ ಬಳಸಿಕೊಂಡು ಸಿಕ್ಕ ಸಿಕ್ಕ ಕಡೆ ಕಳ್ಳತನ, ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕನ ದರೋಡೆ ಕೇಸ್ ಬೆನ್ನತ್ತಿದ ಪೊಲೀಸರು ಪ್ರಕರಣ ಸಂಬಂಧ ನಾಲ್ವರು ಅಪ್ರಾಪ್ತ ಬಾಲಕಿಯರು ಸೇರಿ 8 ಜನರ ತಂಡವನ್ನು ಹೆಡೆಮುರಿ ಕಟ್ಟಿದ್ದಾರೆ. ಮೋಜು-ಮಸ್ತಿ ನಡೆಸಲು ಹಣ ಸಂಪಾದಿಸುವ ಉದ್ದೇಶದಿಂದ ಇವರು ಕಳ್ಳತನ, ದರೋಡೆಗೆ ಇಳಿದಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ನವೆಂಬರ್ 18ರ ರಾತ್ರಿ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಬಳಿಯಿಂದ ಆ್ಯಪ್ವೊಂದರ ಮೂಲಕ ವಿಮಾನ ನಿಲ್ದಾಣಕ್ಕೆ ಆರೋಪಿಗಳು ಕ್ಯಾಬ್ ಬುಕ್ ಮಾಡಿದ್ದರು. ಸ್ಥಲಕ್ಕೆ ಬಂದ ಕ್ಯಾಬ್ ಚಾಲಕ ಸ್ವಾಮಿಗೌಡ ನಾಲ್ವರು ಅಪ್ರಾಪ್ತ ಬಾಲಕಿಯರು ಸೇರಿ ಏಂಟು ಜನರನ್ನ ಪಿಕಪ್ ಮಾಡಿದ್ದ. ಈ ವೇಳೆ ಏರ್ಪೋರ್ಟ ಬೇಡ. ಹೆಚ್ಚಿಗೆ ಹಣ ಕೊಡುತ್ತೀವಿ, ನಮ್ಮನ್ನು ಬಿಡದಿ ಸಮೀಪ ಡ್ರಾಪ್ ಮಾಡುವಂತೆ ಆರೋಪಿಗಳು ಮನವಿ ಮಾಡಿದ್ದರು. ಹೀಗಾಗಿ ಚಾಲಕ ಸ್ವಾಮಿಗೌಡ ಬಿಡದಿ ಸಮೀಪದ ಜೋಗನಪಾಳ್ಯ ಗ್ರಾಮದ ಬಳಿ ಬರುತ್ತಿದ್ದಂತೆ ಕಾರು ನಿಲ್ಲಿಸುವಂತೆ ಗ್ಯಾಂಗ್ ಸೂಚಿಸಿತ್ತು. ಈ ವೇಳೆ ಚಾಲಕನ ಮೇಲೆ ರಾಡ್ನಿಂದ ಆರೋಪಿಗಳು ದಾಳಿ ನಡೆಸಿದ್ದರು. ಅಲ್ಲದೆ ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ಬಗ್ಗೆ ಚಾಲಕ ಸ್ವಾಮಿಗೌಡ ಬಿಡದಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಗೋವು ಸಾಗಿಸುತ್ತಿದ್ದ ಲಾರಿ ತಡೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ
ಕ್ಯಾಬ್ ಚಾಲಕನ ದೂರು ಆಧರಿಸಿ ತನಿಖೆ ನಡೆಸಿರುವ ಪೊಲೀಸರು GPS ಆಧಾರದ ಮೇಲೆ ಚಿತ್ರದುರ್ಗದ ಬಳಿ ನಾಲ್ವರು ಬಾಲಕಿಯರು ಸೇರಿ ಎಂಟು ಜನರನ್ನ ಬಂಧಿಸಿದ್ದಾರೆ. ಮೈಸೂರು ಮೂಲದ ಸದ್ದಾಂ, ಕಬೀರ್, ಯಶವಂತ್, ಶಿವಪ್ರಸಾದ್ ಬಂಧಿತ ಆರೋಪಿಗಳು. ಮೋಜುಮಸ್ತಿಗಾಗಿ ಈ ನಾಲ್ವರು, ಬಾಲಕರಿಯನ್ನ ಜೊತೆಗೆ ಸೇರಿಸಿಕೊಂಡು ದರೋಡೆ, ಕಳ್ಳತನ ಮಾಡುತ್ತಿದ್ದರು. ಆರೋಪಿಗಳು ಬಿಡದಿ, ಕನಕಪುರ, ಚನ್ನಪಟ್ಟಣ, ಮಳವಳ್ಳಿ, ಶಿವಮೊಗ್ಗ, ಶ್ರೀರಂಗಪಟ್ಟಣದಲ್ಲಿ ತಮ್ಮ ಕೈಚಳಕ ತೋರಿರುವುದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರಿಂದ 16 ಲಕ್ಷ ರೂ. ಮೌಲ್ಯದ 3 ಕಾರು, 6 ದ್ವಿಚಕ್ರ ವಾಹನ, 1 ಆಟೋ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.