ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಗೆ ಮುಂದಾಗಿದ್ದು ಇದಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲೇ ಅದ್ದೂರಿ ಕಾರ್ಯಕ್ರಮ ಆಯೋಜಿಸಿದೆ. ಬಿಜೆಪಿ ಶಾಸಕರು ಇಲ್ಲದ ಜಿಲ್ಲೆಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದೆ.
ಕಾಂಗ್ರೆಸ್ ಪಾದಯಾತ್ರೆಗೆ ಟಕ್ಕರ್ ಕೊಡಲು ಮುಂದಾದ ಬಿಜೆಪಿ
ರಾಮನಗರ ಜಿಲ್ಲೆಯ ಸಂಗಮದಿಂದ ಜನವರಿ 9 ರಂದು ಕಾಂಗ್ರೆಸ್ ಪಾದಯಾತ್ರೆ ಆರಂಭಗೊಳ್ಳಲಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ಆರಂಭಗೊಳ್ಳುವ ಆರು ದಿನ ಮೊದಲು ಬಿಜೆಪಿ ರಾಮನಗರದಲ್ಲಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಬಿಜೆಪಿ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇಂದು ಸಿಎಂ ಬೊಮ್ಮಾಯಿ ರಾಮನಗರ ಜಿಲ್ಲಾ ಪ್ರವಾಸ
ಇಂದು ಸಿಎಂ ಬಸವರಾಜ ಬೊಮ್ಮಾಯಿ ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ರಸ್ತೆ ಮಾರ್ಗವಾಗಿ ಸಿಎಂ ಪ್ರಯಾಣ ಬೆಳೆಸಲಿದ್ದು ಬೆಂಗಳೂರಿನಿಂದ ರಾಮನಗರಕ್ಕೆ ತೆರಳಲಿದ್ದಾರೆ. ರಾಮನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಯಲ್ಲಿ ಭಾಗಿಯಾಗಲಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರ್ಯಕ್ರಮ ನಡೆಯಲಿದ್ದು ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ, ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ, ಮಾಗಡಿ ತಾಲೂಕಿನ ಚಿಕ್ಕಕಲ್ಯಾದಲ್ಲಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ನಂತರ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕೊನೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಿಎಂಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ ಸಿ.ಎನ್. ಅಶ್ವತ್ಥ್ ನಾರಾಯಣ್ ಸಾಥ್ ನೀಡಲಿದ್ದಾರೆ.
ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷದಿಂದ ಸಿದ್ಧತೆ
ಇನ್ನು ಮತ್ತೊಂದೆಡೆ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷ ಸಿದ್ಧತೆ ಆರಂಭಿಸಿದೆ. ಪಾದಯಾತ್ರೆ ಸಂಬಂಧ ಮೈಸೂರಿನ ದೇವರಾಜ ಮೊಹಲ್ಲಾದ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು ಸಭೆಯಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಪೂರ್ವಭಾವಿ ಸಭೆಗೂ ಮುನ್ನ ಮೈಸೂರಲ್ಲಿ ಬೆಳಗ್ಗೆ 10 ಗಂಟೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಗನ್‌ಹೌಸ್ ವೃತ್ತದಿಂದ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ: Food Allergy: ಫುಡ್ ಅಲರ್ಜಿಗೆ ಈ ಆಹಾರಗಳೇ ಕಾರಣ
Published On - 8:51 am, Mon, 3 January 22