ಐವರು ಮಹಿಳೆಯರಿಂದ ಥಿಯೇಟರ್‌ ಮಾಲೀಕನ ಸುಲಿಗೆ: ಬ್ಲ್ಯಾಕ್​​ಮೇಲ್​​ ಮಾಡಿ ಪೀಕಿದ್ದು 25 ಲಕ್ಷ ರೂ.!

ರಾಮನಗರದಲ್ಲಿ 52 ವರ್ಷದ ಥಿಯೇಟರ್ ಮಾಲಕರಿಗೆ ಐವರು ಮಹಿಳೆಯರು ಬ್ಲ್ಯಾಕ್‌ಮೇಲ್ ಮಾಡಿ 25 ಲಕ್ಷ ರೂಪಾಯಿ ನಗದು ಮತ್ತು 500 ಗ್ರಾಂ ಚಿನ್ನ ಸುಲಿಗೆ ಮಾಡಿದ್ದಾರೆ. ಮದುವೆಯ ಪ್ರಸ್ತಾಪದ ನೆಪದಲ್ಲಿ ಪರಿಚಯಿಸಿಕೊಂಡು, ನಂತರ ಸುಳ್ಳು ಅತ್ಯಾಚಾರ ಆರೋಪದ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾರೆ. ಸಂತ್ರಸ್ತರು ಇಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಐವರು ಮಹಿಳೆಯರಿಂದ ಥಿಯೇಟರ್‌ ಮಾಲೀಕನ ಸುಲಿಗೆ: ಬ್ಲ್ಯಾಕ್​​ಮೇಲ್​​ ಮಾಡಿ ಪೀಕಿದ್ದು 25 ಲಕ್ಷ ರೂ.!
ಸಾಂದರ್ಭಿಕ ಚಿತ್ರ
Image Credit source: AI Image

Updated on: Mar 31, 2026 | 3:38 PM

ರಾಮನಗರ, ಮಾರ್ಚ್​​ 31:  ಐದು ಮಹಿಳೆಯರ ಗುಂಪೊಂದು ಬೆದರಿಸಿ ಚಿತ್ರಮಂದಿರದ ಮಾಲೀಕರೊಬ್ಬರಿಂದ 25 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಬಗ್ಗೆ ಪಟ್ಟಣದ ಅಗ್ರಹಾರ ಬಡಾವಣೆ ನಿವಾಸಿಯಾಗಿರುವ 52 ವರ್ಷದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಏಳು ವರ್ಷಗಳ ಹಿಂದೆ ಪತ್ನಿ ದೂರವಾದ ಬಳಿಕ ಅವರು ಒಬ್ಬರೇ ವಾಸವಾಗಿದ್ದರು. ತಾಯಿ-ತಂದೆ ಅಥವಾ ಮಕ್ಕಳು ಯಾರೂ ಅವರಿಗೆ ಇಲ್ಲ. ಈ ನಡುವೆ ಆರೋಪಿಗಳ ಪೈಕಿ ಓರ್ವಳು ಮೊದಲು ಮದುವೆಯಾಗುವ ಆಸೆ ವ್ಯಕ್ತಪಡಿಸಿ ಸಂತ್ರಸ್ತರನ್ನು ಸಂಪರ್ಕಿಸಿದ್ದಳು. ಬಳಿಕ ಉಳಿದ ನಾಲ್ವರ ಪರಿಚಯವಾಗಿತ್ತು ಎನ್ನಲಾಗಿದೆ. ಆದರೆ ಬ್ಲ್ಯಾಕ್‌ಮೇಲ್‌ನ ನಿಖರ ಕಾರಣ ಏನೆಂಬುದು ತನಿಖೆ ಬಳಿಕ ಸ್ಪಷ್ಟವಾಗಬೇಕಿದೆ.

ಸಂತ್ರಸ್ತ ವ್ಯಕ್ತಿ ನೀಡಿರುವ ದೂರಿನ ಪ್ರಕಾರ, ಆರೇಳು ತಿಂಗಳ ಹಿಂದೆ ಕೋಟಿಪುರ ಪ್ರದೇಶದ ಮಹಿಳೆ ಸಿನಿಮಾ ನೋಡುವ ನೆಪದಲ್ಲಿ ಅವರ ಥಿಯೇಟರ್‌ಗೆ ಬಂದಿದ್ದಳು. ತನ್ನನ್ನು ಪರಿಚಯಿಸಿಕೊಂಡು ಮದುವೆಯಾಗಲು ಇಚ್ಛೆ ಇದೆ ಎಂದು ಹೇಳಿದ್ದಳು. ಆದರೆ ಇವರು ಅದನ್ನು ನಿರಾಕರಿಸಿದ ನಂತರ, ಆಕೆ ಮತ್ತಿಬ್ಬರು ಮಹಿಳೆಯರೊಂದಿಗೆ ಮತ್ತೆ ಭೇಟಿ ನೀಡಿದ್ದಳು. ಬಳಿಕ ವಿವಿಧ ನೆಪಗಳಲ್ಲಿ ಬೆದರಿಕೆ ಹಾಕಿ ಹಣ ಹಾಗೂ ಚಿನ್ನವನ್ನು ಪಡೆದುಕೊಳ್ಳಲು ಆರೋಪಿಗಳು ಯತ್ನಿಸಿದ್ದರು. ಮೊದಲು ಚಿಕ್ಕ ಮೊತ್ತಗಳನ್ನು ಪಡೆದುಕೊಳ್ಳುತ್ತಿದ್ದ ಆರೋಪಿಗಳು, ನಂತರ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಂತ್ರಸ್ತ ವ್ಯಕ್ತಿ ಒಪ್ಪದಿದ್ದಾಗ ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 500 ಗ್ರಾಂ ಚಿನ್ನಾಭರಣಗಳನ್ನು ಕೂಡ ಆರೋಪಿ ಮಹಿಳೆಯರು ಪೀಕಿರೋದಾಗಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಕೌಟಿಂಬಿಕ ಕಲಹ; ಬೆಂಕಿ ಹಚ್ಚಿಕೊಂಡು ರಾಮನಗರದಲ್ಲಿ 5 ತಿಂಗಳ ಗರ್ಭಿಣಿ ಆತ್ಮಹತ್ಯೆ

ಇದರ ಜೊತೆಗೆ ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ ಆನ್‌ಲೈನ್‌ನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಇಜೂರು ಪೊಲೀಸ್ ಠಾಣೆಯಲ್ಲಿ BNS 308 ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಐದು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ 52 ವರ್ಷದ ವ್ಯಕ್ತಿಯು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಗೆ 15 ದಿನಗಳ ಕಾಲ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎಂಬ ವಿಚಾರವೂ ಈ ವೇಳೆ ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us