ರಾಮನಗರ, ಡಿ.3: ಅನುಮಾನಸ್ಪದವಾಗಿ ನಾಪತ್ತೆಯಾಗಿರುವ ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ (CP Yogeshwar) ಅವರ ಭಾವನೂ ಆಗಿರುವ ಉದ್ಯಮಿ ಹಾಗೂ ಮೆಗಾಸಿಟಿ ನಿರ್ದೇಶಕ ಮಹದೇವಯ್ಯ ಅವರ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ರಾಮನಗರ (Ramanagara) ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಮಹದೇವಯ್ಯ ಪತ್ತೆಗೆ ಚನ್ನಪಟ್ಟಣ ಡಿವೈಎಸ್ಪಿ ನೇತೃತ್ವದ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಮಹದೇವಯ್ಯ ಪುತ್ರ ಪ್ರಶಾಂತ್ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ನಿರಂತರವಾಗಿ ಮೊಬೈಲ್ ಲೊಕೇಷನ್ ಪರಿಶೀಲನೆ ಮಾಡಲಾಗುತ್ತಿದೆ. ಒಂದು ಬಾರಿ ಯಾರೋ ಕರೆ ಸ್ವೀಕರಿಸಿ ಮಾತನಾಡಿದ್ದರು. ಬಳಿಕ ಮೊಬೈಲ್ ಮತ್ತೆ ಸ್ವಿಚ್ ಆಫ್ ಆಗಿದೆ ಎಂದರು.
ಇದನ್ನೂ ಓದಿ: ಶಿವಮೊಗ್ಗ: ಆಸ್ತಿ ವಿಚಾರಕ್ಕೆ ಬೆಂಕಿ ಹಚ್ಚಿ ವ್ಯಕ್ತಿಯ ಕೊಲೆ, ಆರೋಪಿಗಳು ನಾಪತ್ತೆ
ಅವರು ಬಳಸುತ್ತಿದ್ದ ಕಾರು ಕೂಡಾ ಕಾಣೆಯಾಗಿದೆ. ಮನೆಯ ಸಿಸಿಟಿವಿ ಈ ಹಿಂದೆಯೇ ಕೆಟ್ಟುಹೋಗಿದೆ. ಅಕ್ಕಪಕ್ಕದ ಮನೆಗಳ ಸಿಸಿಟಿವಿಗಳನ್ನ ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಲ್ಲಿ ತಂಗಿದ್ದ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು ಡಿಸೆಂಬರ್ 2 ರಂದು ನಾಪತ್ತೆಯಾಗಿದ್ದಾರೆ. ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತೋಟದ ಮನೆಗೆ ಚನ್ನಪಟ್ಟಣ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ತೋಟದ ಮನೆಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಆಗಿತ್ತು. ಬೇರೆ ಬೇರೆ ಕಾರು ಓಡಾಡಿರುವ ಸಾಧ್ಯತೆ ಇದೆ. ಹೀಗಾಗಿ ಮಹದೇವಯ್ಯರನ್ನು ಅಪಹರಣ ಮಾಡಿರುವ ಅನುಮಾನ ಇದೆ ಎಂದು ಯೋಗೇಶ್ವರ್ ಸಹೋದರ ಸಿ.ಪಿ.ರಾಜೇಶ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ