
ರಾಮನಗರ, ನ.15: ರಾಮನಗರ ಜಿಲ್ಲೆಯಿಂದ ಜೆಡಿಎಸ್ ಹಾಗೂ ನಮ್ಮ ಕುಟುಂಬವನ್ನು ಹೊರಹಾಕುವುದಾಗಿ ಕೆಲವರು ಶಪಥ ಮಾಡಿದ್ದಾರೆ, ಆದರೆ ಅದು ಯಾರ ಕೈಯಲ್ಲೂ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ ತಾಲೂಕು) ಹುಣಸನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದೊಡ್ಡಕುರುಬರಹಳ್ಳಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಘಟನೆ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೊಡ್ಡಕುರುಬರಹಳ್ಳಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸುವ ಮೂಲಕ ಚಿಲ್ಲರೆ ರಾಜಕಾರಣ ಮಾಡಿದ್ದಾರೆ. 2004ರಲ್ಲಿ ನಾನು ಶಾಸಕನಾಗುವ ಮೊದಲು ದೇವರ ದರ್ಶನಕ್ಕೆ ಹೋದಾಗ ಹೊಸೂರು ಗ್ರಾಮದಲ್ಲೂ ಇದೇ ರೀತಿ ದೇವಸ್ಥಾನಕ್ಕೆ ಬೀಗ ಹಾಕಿದ್ದರು. ಅಂದು ನಮ್ಮ ಕಾರ್ಯಕರ್ತರು ಬೀಗ ಒಡೆದಿದ್ದರು. ಆದರೆ ಈಗ ಯಾವುದೇ ಘರ್ಷಣೆ ಆಗಬಾರದು ಎಂದು ನಿಖಿಲ್ ಕಾರ್ಯಕರ್ತರಿಗೆ ಶಾಂತವಾಗಿರಲು ಸೂಚಿಸಿದ್ದಾರೆ. ಕಾಂಗ್ರೆಸ್ ನಾಯಕರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು. ಈ ಘಟನೆಯ ಬಗ್ಗೆ ಸ್ವತಃ ಕೆಲವು ಕಾಂಗ್ರೆಸ್ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸೋಣ ಎಂದು ಎಚ್‌ಡಿಕೆ ವ್ಯಂಗ್ಯವಾಡಿದರು.
ಇನ್ನು ಮುಂದೆ ತಿಂಗಳಲ್ಲಿ ಎರಡು ದಿನ ರಾಮನಗರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ನಿಖಿಲ್ ಜೊತೆ ನಾನೇ ಖುದ್ದು ಓಡಾಟ ನಡೆಸುತ್ತೇನೆ. ಸರ್ಕಾರದಲ್ಲಿ ಆಗುತ್ತಿರುವ ದೌರ್ಜನ್ಯಗಳನ್ನು ಗಮನಿಸಿದ್ದೇನೆ. ನಮ್ಮ ಯುವಕರು ಮತ್ತು ಕಾರ್ಯಕರ್ತರಿಗೆ ರಕ್ಷಣೆ ನೀಡಿ ಉತ್ಸಾಹ ತುಂಬಲು ಮುಂದಾಗುತ್ತೇನೆ” ಎಂದು ಕುಮಾರಸ್ವಾಮಿ ಭರವಸೆ ನೀಡಿದರು. ಕೆಲವರು ತಾಲೂಕಿನ ‘ಸಾಕ್ಷಿಗುಡ್ಡೆ’ ಬಗ್ಗೆ ಮಾತನಾಡುತ್ತಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ರಾಮನಗರದಲ್ಲಿ ಏನಾದರೂ ಬದಲಾವಣೆಯಾಗಿದೆಯಾ? ಈ ಸರ್ಕಾರದ್ದು ಕೇವಲ ಘೋಷಣೆಗಳ ಸಾಕ್ಷಿಗುಡ್ಡೆಯಷ್ಟೇ. ಕನಕಪುರದಲ್ಲಿ ಊರೂರು ಖಾಲಿ ಮಾಡಿ ಕಲ್ಲನ್ನು ವಿದೇಶಕ್ಕೆ ಕಳುಹಿಸಿದರು ಎಂದು ಕಿಡಿಕಾರಿದರು.
ಇದನ್ನೂ ಓದಿ: ಹಿರಿಯೂರು ಉಪಚುನಾವಣೆ: ದೋಸ್ತಿಯಲ್ಲಿ ಗೊಂದಲ, ಬಿಜೆಪಿಗರಿಗೆ ಕುಮಾರಸ್ವಾಮಿ ಖಡಕ್ ಸಲಹೆ
ರಾಮನಗರ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ. ಕಾಂಗ್ರೆಸ್ ಸಹವಾಸ ಮಾಡಿದ್ದರಿಂದ ಹಾಗೂ ನಮ್ಮದೇ ಕೆಲ ತಪ್ಪುಗಳಿಂದ ಭದ್ರನೆಲೆ ಕಳೆದುಕೊಂಡೆವು. ಮುಂದೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಜನಾಭಿಪ್ರಾಯವಿದ್ದು, ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡುತ್ತೇನೆ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಎದುರಿಸುವ ಕುರಿತು ನಿನ್ನೆ ಬಿಜೆಪಿ ನಾಯಕರು ಚರ್ಚೆ ಮಾಡಿದ್ದು, ನಮ್ಮಲ್ಲೂ ಚರ್ಚೆ ನಡೆಯುತ್ತಿದೆ ಎಂದು ಎಚ್‌ಡಿಕೆ ತಿಳಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ