ರಾಮನಗರ: ರಾಮನಗರ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ರಾಮನಗರ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಭಾರಿ ಮಳೆಯಿಂದ 10 ಎಕರೆಯಲ್ಲಿದ್ದ ತೆಂಗಿನ ತೋಟ, ದೇವಾಲಯ ಜಲಾವೃತಗೊಂಡಿದೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಹತ್ತಾರು ಎಕರೆ ತೆಂಗಿನತೋಟ, ಶನಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಮಾಗಡಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾದ ಹಿನ್ನೆಲೆ ಹಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳಗಳ ನೀರು ಜಮೀನುಗಳಿಗೆ ನುಗ್ಗಿದೆ. ಇನ್ನು ರಾಮನಗರ ತಾಲೂಕಿನ ಮೆಳೇಹಳ್ಳಿಯಲ್ಲಿ ರಾಗಿ ಬೆಳೆ ನೆಲಕಚ್ಚಿದೆ. ಜಿಲ್ಲೆಯ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ರಾಗಿ ಹಾನಿಯಾಗಿದೆ. ರಾಮನಗರ ತಾಲೂಕಿನ ಕೂಟಗಲ್ ಗ್ರಾಮದಲ್ಲಿ ತೆಂಗು, ಮಾವು, ಬಾಳೆ, ರಾಗಿ, ಮುಸಕಿನಜೋಳ ಬೆಳೆಗಳು ನಾಶವಾಗಿವೆ. ಗದ್ದೆಗಳು ಕೆರೆಯಂತಾಗಿವೆ. ಹಸುಗಳಿಗೆ ಮೇವು ಕುಯ್ಯಲು ಸಾಧ್ಯವಾಗದೇ ರೈತರು ಪರದಾಡುತ್ತಿದ್ದಾರೆ.
ನೀರಿನಲ್ಲಿ ಕೊಚ್ಚಿಹೋದ ಸೇತುವೆ
ನಿರಂತರ ಮಳೆಯಿಂದ ಮೆಳೇಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸೇತುವೆ ಕೊಚ್ಚಿ ಹೋಗಿದ್ದರಿಂದ ಮೆಳೇಹಳ್ಳಿ ಸೇರಿದಂತೆ ಐದಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಐದು ಕಿಲೋಮೀಟರ್ ದೂರ ಸಂಚರಿಸಿ ಗ್ರಾಮಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ.
ಅನೇಕ ವರ್ಷಗಳಿಂದ ಸೇತುವೆ ದುಸ್ಥಿತಿಯಾಗಿ ಬಿರುಕು ಬಿಟ್ಟಿತ್ತು. ಕಳೆದ ಒಂದು ವಾರದಿಂದ ನಿರಂತರ ಮಳೆಯ ಪರಿಣಾಮ ಸೇತುವೆ ಕೊಚ್ಚಿ ಹೋಗಿದೆ. ಮೆಳೇಹಳ್ಳಿ, ಮಾರೇಗೌಡನದೊಡ್ಡಿ, ಅರಳಿಮರದೊಡ್ಡಿ, ಜೋಗಿದೊಡ್ಡಿ, ಅಂಕನಹಳ್ಳಿ, ಹುಣಸೇದೊಡ್ಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಹಾಳಾಗಿದೆ.
ಇದನ್ನೂ ಓದಿ: ಮಳೆ ಅಬ್ಬರ: ಮನೆಗೋಡೆ ಕುಸಿದು ವ್ಯಕ್ತಿ ಸಾವು, ಹರಿಯುವ ನೀರಲ್ಲಿ ತೇಲಿ ಬಂತು ಅಪರಿಚಿತ ಮಹಿಳೆ ಶವ
Published On - 12:15 pm, Mon, 22 November 21