ರಾಮನಗರ: ಐಷಾರಾಮಿ ಬದುಕಿಗಾಗಿ ಕಳ್ಳತನಕ್ಕೆ ಇಳಿದಿದ್ದ ಉದಯ್ ಕುಮಾರ್(25) ಎಂಬಾತನನ್ನು ಮಾಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮಾರ್ಚ್ 3ರಂದು ಹರ್ತಿ ಗ್ರಾಮದ ರೇಣುಕಯ್ಯ ಎಂಬುವರ ಮನೆಯ ಬೀಗ ಒಡೆದು, 1.2 ಲಕ್ಷ ಬೆಳೆ ಬಾಳುವ ಚಿನ್ನಾಭಾರಣ ಕಳವು ಮಾಡಲಾಗಿತ್ತು. ಇದೇ ಮಾದರಿಯಲ್ಲಿ ತಾವರೆಕೆರೆ ವ್ಯಾಪ್ತಿಯಲ್ಲೂ ಪ್ರಕರಣ ನಡೆದಿತ್ತು. ಹೀಗಾಗಿ ಆರೋಪಿ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಮಾಗಡಿ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣ
ತುಮಕೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ 15 ಕಳ್ಳತನ ಪ್ರಕರಣಗಳಲ್ಲಿ ಆತ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಅಂದಹಾಗೆ ಬಂಧಿತ ಆರೋಪಿ ಐಷಾರಾಮಿ ಜೀವನ ಸಾಗಿಸುವ ಸಲುವಾಗಿ ಒಂಟಿ ಮನೆಯನ್ನು ಟಾರ್ಗೆಟ್ ಮಾಡಿ ಹಗಲು ಸಮಯದಲ್ಲಿಯೇ ಕಳ್ಳತನ ಮಾಡುತ್ತಿದ್ದ. ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದಲ್ಲಿದ್ದು 2019ರಲ್ಲಿ ಜಾಮೀನು ಪಡೆದುಕೊಂಡಿದ್ದ.
ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ನಿವಾಸಿಯಾಗಿರುವ ಈತ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನು. ಕೂಲಿ ಕೆಲಸ ಮತ್ತು ಬೆಡ್‍ಶೀಟ್ ವ್ಯಾಪಾರ ಮಾಡುತ್ತಿದ್ದ. ಆರೋಪಿಯಿಂದ 25 ಲಕ್ಷ ಬೆಲೆ ಬಾಳುವ 560 ಗ್ರಾಂ ಚಿನ್ನಾಭಾರಣ ಹಾಗೂ ಮೂರು ಕೆ.ಜಿ ಬೆಳ್ಳಿ ಸಾಮಗ್ರಿ, ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.