ರಾಮನಗರ, ಡಿಸೆಂಬರ್ 20: ಬಟ್ಟೆ ತೊಳೆಯುವ ವಿಚಾರದಲ್ಲಿ ತಾನೇ ಎಲ್ಲ ಕೆಲಸ ಮಾಡಬೇಕಾ ಎಂದು ಹೆತ್ತಮ್ಮನ ಜೊತೆ ಗಲಾಟೆ ಮಾಡಿಕೊಂಡ ಯುವ ತಾಯಿಯೊಬ್ಬಳು, ತನ್ನ ಮಗುವನ್ನೇ ಜಲಾಶಯಕ್ಕೆ ಹಾಕಿ, ಕೊಂದಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ (Channapatna, Ramanagara) ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ. ಒಂದು ವರ್ಷ ಮೂರು ತಿಂಗಳ ಮಗು (Toddler) ದೇವರಾಜ್ ಸಾವಿಗೀಡಾಗಿರುವ ನತದೃಷ್ಟ ಮಗು. ತನ್ನ ಮಗುವನ್ನೇ ಕೊಂದ ತಾಯಿ ಭಾಗ್ಯ (21)ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಟ್ಟೆ ತೊಳೆಯುವ ವಿಚಾರದಲ್ಲಿ ತಾಯಿಯ ಜೊತೆ ಜಗಳವಾಡಿದ್ದಳಂತೆ ಆರೋಪಿ ತಾಯಿ. ಆ ವೇಳೆ ಸಿಟ್ಟಿನಿಂದ ತಾಯಿ ಭಾಗ್ಯ ತನ್ನ ಆ ಅಬೋಧ ಕಂದಮ್ಮನನ್ನು ಕಣ್ವ ಹೊಳೆಗೆ (Kanva Reservoir) ಬಿಸಾಡಿದ್ದಾಳೆ. ಬಳಿಕ ಕಾಲಿಕೆರೆ ದೇವಸ್ಥಾನದ ಬಳಿ ಬಂದು ಭಾಗ್ಯ ರೋದಿಸಿದ್ದಾಳೆ. ತನ್ನ ಮಗುವನ್ನು ಹೊಳೆಗೆ ಹಾಕಿರುವ ಬಗ್ಗೆ ಸ್ವತಃ ಭಾಗ್ಯಳೇ ಅಳುತ್ತಾ ಹೇಳಿಕೊಂಡಳಂತೆ.
ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ನಿನ್ನೆ ಮಂಗಳವಾರ ರಾತ್ರಿ 7.30ರ ಸುಮಾರಿಗೆ ಕಂದನನ್ನು ಬಿಸಾಡಿದ್ದಾಗಿ ಭಾಗ್ಯ ಹೇಳಿಕೊಂಡಿದ್ದಾಳೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ತಾಯಿ ಭಾಗ್ಯಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಚಿತ್ರ ಸ್ವಭಾವದ ಯುವ ಹೆಣ್ಣುಮಗಳು ಭಾಗ್ಯಳ ಜೀವನ ಹೀಗಿತ್ತು…
ಮೂರು ವರ್ಷಗಳ ಹಿಂದೆ ದೊಡ್ಡ ಆಲಹಳ್ಳಿ ಯುವಕನ ಜೊತೆ ಭಾಗ್ಯಳ ಮದುವೆ ಮಾಡಿಕೊಡಲಾಗಿತ್ತು. ಗಂಡನನ್ನು ಬಿಟ್ಟು ಭಾಗ್ಯ ತವರಿಗೆ ಬಂದು ನೆಲೆಸಿದ್ದಳು. ತಾಯಿ ಊರು ಕಾಲಿಕೆರೆಯಲ್ಲಿಯೇ ಭಾಗ್ಯ ವಾಸಿಸುತ್ತಿದ್ದಳು. ಅದೇ ಊರಿನ ಶ್ರೀನಿವಾಸನ ಜೊತೆ ಸಂಬಂಧ ಆಗಿತ್ತು. ಮೃತಪಟ್ಟಿರುವ ಮಗು ದೇವರಾಜ್, ಭಾಗ್ಯ ಮತ್ತು ಶ್ರೀನಿವಾಸ್ ಮಗ.
ಭಾಗ್ಯ ತನ್ನ ತಾಯಿಯ ಜೊತೆ ಆಗಾಗ ಜಗಳವಾಡುತ್ತಿದ್ದಳಂತೆ. ಶ್ರೀನಿವಾಸನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಭಾಗ್ಯ, ಆತನ ಜೊತೆಯೂ ಸತತವಾಗಿ ಜಗಳವಾಡುತ್ತಿದ್ದಳಂತೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:16 am, Wed, 20 December 23