ರಾಮನಗರ: ಸಾರ್ವಜನಿಕರಿಗೆ ಅನುಕೂಲವಾಗಲಿ ಅಂತಾ ಆ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನ ಕೈಗೆತ್ತಿಕೊಳ್ಳಲಾಗಿತ್ತು. ಆದ್ರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ಸಾರ್ವಜನಿಕರ ಕೋಪ ನೆತ್ತಿಗೆೇರುವಂತೆ ಮಾಡಿದೆ.
ಮುಂದೆ ಸಾಗದ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ!
ರಾಷ್ಟೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಖಾಸಗಿ ಬಸ್ ನಿಲ್ಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ. ಇಲ್ಲಿ ಖಾಸಗಿ ಬಸ್ ನಿಲ್ದಾಣ ಇಲ್ಲದೆ ಇರೋದ್ರಿಂದ ಖಾಸಗಿ ಬಸ್‌ಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 7 ವರ್ಷಗಳ ಹಿಂದೆ ಆರಂಭವಾದ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅರ್ಧಕ್ಕೆ ನಿಂತಿದೆ. ಇದರಿಂದ ಬಸ್ ನಿಲ್ಲಿಸಲು ಜಾಗವಿಲ್ಲದೆ ನೂರಾರು ಖಾಸಗಿ ಬಸ್ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗುತ್ತಿದೆ. ಅದರಲ್ಲೂ ವೀಕೆಂಡ್ ಹಾಗೂ ರಜೆ ದಿನಗಳಲ್ಲಿ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಅಂದಹಾಗೇ ಐದು ಎಕರೆ ವಿಸ್ತೀರ್ಣದಲ್ಲಿ ಸುಮಾರು 33 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 7 ಅಂತಸ್ತಿನ ಹಡಗು ಮಾದರಿಯ ಬಸ್ ನಿಲ್ದಾಣ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಆದ್ರೆ ಶಂಕುಸ್ಥಾಪನೆ ನಡೆದು ಏಳು ವರ್ಷಗಳೇ ಕಳೆಯುತ್ತ ಬಂದ್ರು, ಬಸ್ ನಿಲ್ದಾಣದ ಕಾಮಗಾರಿ ಮಾತ್ರ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೇವಲ ಬಸ್ ನಿಲ್ದಾಣದ ಜಾಗದಲ್ಲಿ ಮಣ್ಣು ತೆಗೆದು, ಗುಂಡಿ ಮಾಡಿದ್ದಾರೆ. ಅದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಹೀಗಾಗಿ ಈ ಜಾಗ ಹಾಳು ಕೊಂಪೆಯಾಗಿದೆ. ಹೀಗಾಗಿ ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು ಅನ್ನೋದು ಜನರ ಒತ್ತಾಯವಾಗಿದೆ.