To Let : ಬೆಂಗಳೂರಲ್ಲಿ ಬಾಡಿಗೆ ಮನೆ ಮಾಲೀಕರ ಗೋಳು ಕೇಳುವವರಿಲ್ಲ..

|

Updated on: Jan 15, 2021 | 2:43 PM

ಬೆಂಗಳೂರಿನ ಯಾವುದೇ ಗಲ್ಲಿಗೆ ತೆರಳಿ. ಅಲ್ಲಿ ನಿಮಗೆ ಕನಿಷ್ಠ ಒಂದರಿಂದ ಎರಡು To-Let ಬೋರ್ಡ್​ಗಳು ಕಾಣುತ್ತವೆ. ಇದಕ್ಕೆಲ್ಲ ಕೊರೊನಾ ವೈರಸ್ ನೇರ ಕಾರಣ. ಈ ವೈರಸ್​ ದೇಶಕ್ಕೆ ವಕ್ಕರಿಸಿದ ನಂತರದಲ್ಲಿ ರಿಲಯ್​ ಎಸ್ಟೇಟ್​ ಉದ್ಯಮ ನೆಲ ಕಚ್ಚಿದೆ. ಬಾಡಿಗೆಯನ್ನೇ ನಂಬಿ ಕೂತವರು ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ.

To Let : ಬೆಂಗಳೂರಲ್ಲಿ ಬಾಡಿಗೆ ಮನೆ ಮಾಲೀಕರ ಗೋಳು ಕೇಳುವವರಿಲ್ಲ..
ಸಾಂದರ್ಭಿಕ ಚಿತ್ರ
Follow us on

ಮನೆಯ ಮುಂದೆ ಹಾಕಿದ To-Let ಬೋರ್ಡ್​ ಬೆಂಗಳೂರಿನ ಮಳೆಗೆ ಸಿಕ್ಕಿ ಅಕ್ಷರಗಳು ಮಾಸಿ ಹೋಗಿದ್ದವು. ಗೇಟ್​ಗೆ ಹೊಸ ಹೊಸ ಬೋರ್ಡ್​ಗಳು ಬಿದ್ದವೆ ಹೊರತು, ಯಾರೊಬ್ಬರೂ ಕೂಡ ಮನೆ ಬಾಡಿಗೆಗೆ ಬಂದಿಲ್ಲ. ಕೆಲವರು ಬಂದು ಮನೆ ನೋಡಿದರು. ‘ ಈ ಟೈಮ್​ಗೆ ಹೋಲಿಸಿದರೆ ಬೆಲೆ ತುಂಬಾನೇ ಜಾಸ್ತಿ ಆಯ್ತು ಬಿಡಿ. ನೋಡೋಣ ಹೇಳುತ್ತೇವೆ’ ಎಂದು ಹೇಳಿ ಹೋದವರು ವಾಪಸ್​ ಬಂದಿಲ್ಲ. ಮಾಲೀಕರ ಕಾಯುವಿಕೆ ಮಾತ್ರ ಈವರೆಗೆ ನಿಂತಿಲ್ಲ. ಇದು ಬೆಂಗಳೂರಿನ ಸದ್ಯದ ಪರಿಸ್ಥಿತಿ.

ಬೆಂಗಳೂರಿನ ಯಾವುದೇ ಗಲ್ಲಿಗೆ ತೆರಳಿ.. ಅಲ್ಲಿ ನಿಮಗೆ ಕನಿಷ್ಠ ಒಂದರಿಂದ ಎರಡು To-Let ಬೋರ್ಡ್​ಗಳು ಕಾಣುತ್ತವೆ. ಇದಕ್ಕೆಲ್ಲ ಕೊರೊನಾ ವೈರಸ್ ನೇರ ಕಾರಣ. ಈ ವೈರಸ್​ ದೇಶಕ್ಕೆ ವಕ್ಕರಿಸಿದ ನಂತರದಲ್ಲಿ ರಿಲಯ್​ ಎಸ್ಟೇಟ್​ ಉದ್ಯಮ ನೆಲ ಕಚ್ಚಿದೆ. ಬಾಡಿಗೆಯನ್ನೇ ನಂಬಿ ಕೂತವರು ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ.

ಹೌದು, ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಅನೇಕ ಸಂಸ್ಥೆಗಳು ವರ್ಕ್​ ಫ್ರಂ​ ಹೋಂ​ ಆಯ್ಕೆ ನೀಡಿವೆ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಸಾಕಷ್ಟು ಮಂದಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಅಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ ಕೂಡ. ಈ ಪ್ರಕ್ರಿಯೆ ಏನಿಲ್ಲವೆಂದರೂ ಇನ್ನೊಂದು ವರ್ಷ ಮುಂದುವರಿಯಲಿದೆ. ಹೀಗೆಯೇ ಮನೆ ಖಾಲಿ ಉಳಿದರೆ ಮುಂದೇನು ಎನ್ನುವ ಪ್ರಶ್ನೆ ಮನೆ ಬಾಡಿಗೆ ಇಟ್ಟುಕೊಂಡವರದ್ದು.

ದೊಡ್ಡ ದೊಡ್ಡ ಕಟ್ಟಡಗಳೇ ಖಾಲಿ!

ಅನೇಕ ಕಂಪೆನಿಗಳು ಬೆಂಗಳೂರಿನ ಮೂರ್ನಾಲ್ಕು ಕಡೆಗಳಲ್ಲಿ ಕಟ್ಟಡ ಹೊಂದಿದ್ದವು. ಆದರೆ, ಈಗ ಎಲ್ಲರಿಗೂ ವರ್ಕ್​ ಫ್ರಂ ಹೋಂ ಆಯ್ಕೆ ನೀಡಿರುವುದರಿಂದ ಮೂರ್ನಾಲ್ಕು ಕಟ್ಟಡಗಳನ್ನು ಇಟ್ಟುಕೊಳ್ಳುವುದೇಕೆ ಎನ್ನುವ ಕಾರಣಕ್ಕೆ ಎಲ್ಲರೂ ಒಂದು ಕಟ್ಟಡವನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಖಾಲಿ ಆಗಿರುವ ಕಚೇರಿ ಜಾಗಕ್ಕೆ ಹೊಸದಾಗಿ ಯಾರೂ ಬರುತ್ತಿಲ್ಲ. ಇನ್ನೂ ಒಂದು ವರ್ಷ ಕಾಲ ಆ ಜಾಗಕ್ಕೆ ಬೇರೆಯವರು ಬರುವುದು ಅನುಮಾನವೇ. ಹೀಗಾಗಿ, ತಿಂಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.

ಜೀವನ ಕಷ್ಟವಾಗುತ್ತಿದೆ

ಶ್ರೀನಿವಾಸ ನಗರದಲ್ಲಿರುವ ದೊಡ್ಡದಾದ ಮನೆ. ಅದನ್ನು ಕಟ್ಟಿ ಎರಡು ಮೂರು ವರ್ಷವಾಗಿರಬಹುದು. ಒಂದೇ ಕಟ್ಟಡದಲ್ಲಿ 2 ಬಿಎಚ್​ಕೆ ಹಾಗೂ 1 ಬಿಎಚ್​ಕೆ ಮನೆಗಳು ಖಾಲಿ ಇವೆ. ಈ ಬಗ್ಗೆ ಹೋಗಿ ವಿಚಾರಿಸಿದಾಗ ಮನೆಯ ಮಾಲೀಕರಾದ ಲಕ್ಷ್ಮೀ ಹಾಗೂ ಸದಾಶಿವ ಹೇಳೋದು ಹೀಗೆ. ಕೊರೊನಾ ಸಂದರ್ಭದಲ್ಲಿ ಈ ಕಟ್ಟಡದಲ್ಲಿದ್ದ ಎರಡು ಕುಟುಂಬಗಳು ಮನೆ ಖಾಲಿ ಮಾಡಿಕೊಂಡು ಊರಿಗೆ ಹೋಗಿದ್ದಾರೆ.

ಅದಿನಿಂದ ಇಲ್ಲಿವರೆಗೂ ಟು-ಲೆಟ್​ ಬೋರ್ಡ್​ಅನ್ನು ನಾವು ಹೀಗೆಯೇ ತೂಗಿ ಬಿಟ್ಟಿದ್ದೇವೆ. ಕೆಲವರು ಬಂದು ವಿಚಾರಿಸಿದರೂ ಅವರು ಬಾಡಿಗೆಗೆ ಬಂದಿಲ್ಲ. ಈಗ ಬಾಡಿಗೆಯನ್ನು ಸಹ ಕಡಿಮೆ ಮಾಡಿದ್ದೇವೆ. ಆದಾಗ್ಯೂ ಯಾರು ಬರುತ್ತಿಲ್ಲ ಎನ್ನುತ್ತಾರೆ.

ಪಿಜಿಗಳಿಗೆ ಉಂಟಾದ ಸಂಕಷ್ಟ

ಕೊರೊನಾ ವೈರಸ್​ ಬರುವುದಕ್ಕೂ ಮೊದಲು ಬೆಂಗಳೂರಲ್ಲಿ ಪಿಜಿಗಳಿಗೆ ಉತ್ತಮ ಬೇಡಿಕೆ ಇತ್ತು. ಪಿಜಿ ಪೂರ್ತಿಯಾಗಿ ಭರ್ತಿ ಆಗದಿದ್ದರೂ, ಒಂದು ಹಂತಕ್ಕೆ ಜನ ಇರುತ್ತಿದ್ದರು. ಆದರೆ, ವರ್ಕ್​ ಫ್ರಮ್​ ಹೋಂ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಅನೇಕರು ಊರುಗಳಿಗೆ ತೆರಳಿದ್ದಾರೆ. ಇದು ಪಿಜಿ ಮಾಲೀಕರಿಗೆ ದೊಡ್ಡ ಹೊಡೆತ ನೀಡಿದೆ.

ಸಂಕಷ್ಟದಲ್ಲಿ ಬ್ರೋಕರ್​​ಗಳ ಬಾಳು

ಮನೆ ಬ್ರೋಕರ್​ಗಳು ಕೊರೊನಾದಿಂದ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಯಾರಿಗಾದರೂ ಮನೆ ಹಿಡಿಸಿಕೊಟ್ಟರೆ ಮಾತ್ರ ದಿನದ ಕೂಳು ತುಂಬುತ್ತಿತ್ತು. ಆದರೆ, ಈಗ ಮನೆಯನ್ನು ನೋಡಲು ಯಾರೊಬ್ಬರೂ ಬರುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವ ರಾಘವ್​ ಹೆಸರಿನ ಮನೆ ಬ್ರೋಕರ್​, ಆರಂಭದಲ್ಲಿ ಮನೆಯ ಆ್ಯಪ್​ಗಳು ಬಂದು ನಮ್ಮ ಕೆಲ ಭಾಗದವನ್ನು ಕೆಲಸ ಕಿತ್ತುಕೊಂಡಿತ್ತು.

ಈಗ ಕೊರೊನಾ ನಮ್ಮ ಬದುಕನ್ನೇ ಸಂಕಷ್ಟಕ್ಕೆ ತಂದು ಬಿಟ್ಟಿದೆ. ಇನ್ನು ಎದ್ದುಕೊಳ್ಳೋಕೆ ಸ್ವಲ್ಪ ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೆ, ನಾವು ಜೀವನ ನಡೆಸೋದು ಹೇಗೆ ಎನ್ನುವುದೇ ನನ್ನ ಮುಂದಿರುವ ಪ್ರಶ್ನೆ ಎನ್ನುತ್ತಾರೆ.

ಬಿಡುಗಡೆ ಆಗಿತ್ತು ವರದಿ 

ದೇಶದಲ್ಲಿ ಮನೆ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 47ರಷ್ಟು ಕುಸಿತ ಕಂಡಿದೆ ಎಂದು ವರದಿಯೊಂದು ಹೇಳಿದೆ. ಇನ್ನು, ಬೆಂಗಳೂರು ನಗರದಲ್ಲಿಯೇ ರಿಯಲ್​​ ಎಸ್ಟೇಟ್​ ಉದ್ಯಮ ಶೇ 51 ಇಳಿಕೆ ಕಂಡಿದೆ. ಕೊರೊನಾ ವೈರಸ್​ನಿಂದ ಬಹುತೇಕ ಎಲ್ಲಾ ಕ್ಷೇತ್ರಗಳು ಹೊಡೆತ ತಿಂದಿವೆ. ಮನೆ ಮಾರಾಟ ಕಡಿಮೆ ಆಗಲು ಕೂಡ ಇದೇ ನೇರ ಕಾರಣ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.

2020ರಲ್ಲಿ 24,910 ನಿವಾಸಗಳು ಸೇಲ್​ ಆಗಿವೆ. 2018ರಲ್ಲಿ ಬೆಂಗಳೂರಿನಲ್ಲಿ 50,450 ಮನೆಗಳು ಮಾರಾಟವಾಗಿದ್ದವು. ಈ ಮೂಲಕ ಬೆಂಗಳೂರಿನಲ್ಲಿ ಮನೆ ಮಾರಾಟ ಪ್ರಮಾಣ ಶೇ 51ರಷ್ಟು ಇಳಿಕೆ ಆದಂತಾಗಿತ್ತು.

ಕೊರೊನಾ ಎಫೆಕ್ಟ್​! HMT ಲೇಔಟ್​ನಲ್ಲಿ.. ಮನೆ ಮಾಲೀಕ-ಬಾಡಿಗೆದಾರನ ನಡುವೆ ಡಿಶುಂ ಡಿಶುಂ