ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ವಿರೋಧಿಸಿ ಕಾಯಕ ಸಮಾಜಗಳ ಒಕ್ಕೂಟದಿಂದ ಜಾಗೃತಿ ಕಾರ್ಯಕ್ರಮ; ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ

| Updated By: Rakesh Nayak Manchi

Updated on: Oct 15, 2022 | 9:25 AM

ತಮಗೆ 2ಎ ಮೀಸಲಾತಿ ನೀಡಬೇಕು ಎಂದು ಪಂಚಮಸಾಲಿ ಸಮುದಾಯವು ಸರ್ಕಾರವನ್ನು ಆಗ್ರಹಿಸುತ್ತಿದ್ದರೆ ಇತ್ತ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ವಿರೋಧಿಸುತ್ತಿದೆ. ಹೀಗಾಗಿ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಂತಾಗಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ವಿರೋಧಿಸಿ ಕಾಯಕ ಸಮಾಜಗಳ ಒಕ್ಕೂಟದಿಂದ ಜಾಗೃತಿ ಕಾರ್ಯಕ್ರಮ; ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ
ಪಂಚಮಸಾಲಿ ಸಮುದಾಯಕ್ಕೆ ಮಿಸಲಾತಿ ವಿರೋಧಿಸಿ ಕಾಯಕ ಸಮಾಜಗಳ ಒಕ್ಕೂಟದಿಂದ ಜಾಗೃತಿ ಕಾರ್ಯಕ್ರಮ
Follow us on

ಹುಬ್ಬಳ್ಳಿ: ರಾಜ್ಯ ಸರ್ಕಾರವು ಮೀಸಲಾತಿ ಎಂಬ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ. ಕಳೆದೆರಡೂ ವರ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಇನ್ನೊಂದೆಡೆ ಆ ಸಮುದಾಯವನ್ನ 2ಎ ಮೀಸಲಾತಿಗೆ ನೀಡಬಾರದು ಎಂಬ ಒತ್ತಡವೂ ಸರ್ಕಾರದ ಮೇಲಿದೆ. ಇದೀಗ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಸೆಡ್ಡು ಹೊಡೆದಿರುವ ಹಲವು ಸ್ವಾಮೀಜಿಗಳು ಚಿಂತನ ಮಂಥನ ನಡೆಸಲು ಮುಂದಾಗಿದ್ದಾರೆ. ಹುಬ್ಬಳ್ಳಿ ನಗರದ ಅಕ್ಕನ ಬಳಗದಲ್ಲಿ ನಡೆಯುವ ಈ ರಾಜ್ಯ ಮಟ್ಟದ ಹೋರಾಟ ಜಾಗೃತಿ ಕಾರ್ಯಕ್ರಮದಲ್ಲಿ  ಹತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಲಿದ್ದು,  ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ, ಹಡಪದ, ಗಂಗಾಮತ, ವಿಶ್ವಕರ್ಮ, ಮಡಿವಾಳ, ಚಿತ್ರಗಾರ, ಎಸ್.ಎಸ್‌.ಕೆ, ಮರಾಠ, ಗಾಣಿಗ, ಸಮಾಜ, ರಜಕ, ಉಪ್ಪಾರ, ಸೂರ್ಯವಂಶ ಸಮಾಜದ ಮುಖಂಡರು ಕೂಡ ಭಾಗಿಯಾಗಲಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕ ವಿಭಾಗ‌ ಮಟ್ಟದ ಸಭೆಯಲ್ಲಿ ಹಲವು ಸಂವಿಧಾನ ತಜ್ಞರು ಕೂಡ ಭಾಗಿಯಾಗಲಿದ್ದಾರೆ.

ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಗಡುವು ನೀಡಿದ ಪಂಚಮಸಾಲಿ ಸಮುದಾಯವು, ಅಕ್ಟೋಬರ್ ಅಂತ್ಯದವರೆಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದೆ. ಅಲ್ಲದೆ 2 ಎ ಮೀಸಲಾತಿ ಸಿಗದೆ ಹೋದರೆ ನವೆಂಬರ್ ಮೊದಲನೆಯ ವಾರದಲ್ಲಿ ವಿಧಾನಸಭೆ ಮುತ್ತಿಗೆ ಹಾಕಲಾಗುತ್ತದೆ, ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರಕ್ಕೆ ಸಮುದಾಯದ  ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಈ ನಡುವೆ ಯಾವುದೇ ಕಾರಣಕ್ಕೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದು ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಆಗ್ರಹಿಸುತ್ತಿದೆ. ಮೀಸಲಾತಿ ನೀಡಿದರೆ ಮುಂದೆ ಯಾವ ರೀತಿ‌ ಹೋರಾಟ ಮಾಡಬೇಕೆಂದು ಇಂದು ನಡೆಯುವ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ. ಒಟ್ಟಾರೆಯಾಗಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವುದಕ್ಕೆ ಪರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ