ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿಗೆ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ

|

Updated on: Mar 10, 2021 | 8:43 PM

ಮೀಸಲಾತಿಯನ್ನು ಸಾಂವಿಧಾನಿಕವಾಗಿ ನೀಡಬೇಕಾಗುತ್ತದೆ ಮತ್ತು ಇಂದಿರಾ ಸಹಾನಿ ತೀರ್ಪಿನ ಆಧಾರದಲ್ಲಿ ಮೇಲೆ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಇಚ್ಛೆಯಾಗಿದೆ, ಮೀಸಲಾತಿ ಸಂಬಂಧಿಸಿದಂತೆ ವಿಳಂಬ ನೀತಿ ಅನುಸರಿಸುವ ಪ್ರಶ್ನೆಯೇ ಇಲ್ಲ, ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿಗೆ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ
ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಎಸ್​ಸಿ, ಎಸ್​ಟಿ, ಲಿಂಗಾಯತ ಪಂಚಮಸಾಲಿ, ಕುರುಬ, ಒಕ್ಕಲಿಗ ಸೇರಿದಂತೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹಲವು ಸಮುದಾಯಗಳ ಆಶೋತ್ತರಗಳಿಗೆ ಪೂರಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ಕಲ್ಪಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸಭೆಯಲ್ಲಿ ಬುಧವಾರ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಯಾವುದೇ ಸಮುದಾಯಗಳಿಗೆ ಅನ್ಯಾಯ ಆಗದ ರೀತಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.

‘ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಎಸ್​ಸಿ ಎಸ್​ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿ ಮಾಡಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್​ಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ. ಅದೇ ರೀತಿ ಕುರುಬ ಸಮುದಾಯ ಎಸ್​ಟಿ ಮೀಸಲಾತಿಗೆ ಹೋರಾಡುತ್ತಿದೆ. ಪಂಚಮಸಾಲಿ ಸಮುದಾಯ 2ಎ ಪ್ರವರ್ಗಕ್ಕೆ ಹಕ್ಕು ಮಂಡಿಸುತ್ತಿದೆ. ಆದರೆ ಒಟ್ಟಾರೆಯಾಗಿ ಈ ಮೀಸಲಾತಿ ಪ್ರಮಾಣವನ್ನು ಶೇ  50ಕ್ಕೆ ಮಿತಿಗೊಳಿಸಬೇಕು ಎಂಬುದನ್ನು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನ ಸಂವಿಧಾನ ಪೀಠ ಸ್ಪಷ್ಟವಾಗಿ ಹೇಳಿದೆ’ ಎಂದು ಸಚಿವರು ಹೇಳಿದರು.

‘ಆದರೆ ಮೀಸಲಾತಿ ಪ್ರಮಾಣವನ್ನು ವಿಶೇಷ ಸಂದರ್ಭಗಳಲ್ಲಿ ಪರಾಮರ್ಶೆ ಮಾಡುವ ಅವಕಾಶವೂ ಇದೆ. ಇದರ ಆಧಾರದ ಮೇಲೆ ಹಲವು ರಾಜ್ಯಗಳು ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿವೆ. ಆದರೆ ಆ ಹೆಚ್ಚಳಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ನಾವು ಈ ಎಲ್ಲ ಅಂಶಗಳನ್ನು ಪರಶೀಲಿಸಬೇಕಿದೆ‌. ಎಲ್ಲ ಸಮುದಾಯಗಳಿಗೆ ಯಾವ ರೀತಿ ನ್ಯಾಯ ಕೊಡಬೇಕು ಮತ್ತು ಕಾನೂನಿನ ಸಮಸ್ಯೆ ಎದುರಾಗದಂತೆ ಯಾವ ರೀತಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎನ್ನುವ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಸಮಿತಿ ಮೀಸಲಾತಿ ಬೇಡಿಕೆ ಇಟ್ಟಿರುವ ಸಮುದಾಯಗಳ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದು ಬೊಮ್ಮಾಯಿ ಹೇಳಿದರು.

ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಪ್ರತಿಭಟನೆ

‘ಲಿಂಗಾಯತ ಪಂಚಮಸಾಲಿ ಸಮುದಾಯದವರು ತಮ್ಮನ್ನು ಪ್ರವರ್ಗ 3ಬಿ ಇಂದ ಪ್ರವರ್ಗ 2ಎಗೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಪಂಚಮಸಾಲಿ ಸಮುದಾಯದವರು ಕೃಷಿಯನ್ನೇ ಅವಲಂಬಿಸಿದವರು. ಇತ್ತೀಚೆಗೆ ಕುಟುಂಬಗಳು ಒಡೆದಂತೆ ಕೃಷಿ ಭೂಮಿ ಕೂಡ ಭಾಗವಾಗಿದೆ. ಹೀಗಾಗಿ ಆರ್ಥಿಕವಾಗಿ ಈ ಸಮಾಜ ಹಿಂದುಳಿದಿದೆ ಎಂಬುದು ಅವರ ವಾದ. ತಮ್ಮ ಸಮುದಾಯ ಹಿಂದುಳಿದಿರುವುದಕ್ಕೆ ಕಾರಣವಾಗಿರುವ ಅಂಶಗಳನ್ನು ಈ ಸಮುದಾಯದವರು ಹಿಂದುಳಿದ ವರ್ಗಗಳ ಆಯೋಗದ ಮನವರಿಕೆ ಮಾಡಿಕೊಡಬೇಕು. ಅದಾದ ಬಳಿಕ ಆಯೋಗ ಮಾಡುವ ಶಿಫಾರಸು ಆಧರಿಸಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ’ ಎಂದು ಬೊಮ್ಮಾಯಿ ತಿಳಿಸಿದರು.

ಈಗಾಗಲೇ ವಿವಿಧ ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿಗೆ ಧಕ್ಕೆಯಾಗಬಾರದು, ಜೊತೆಗೆ ಇತರ ಸಮುದಾಯಗಳಿಗೆ ಸಂವಿಧಾನಬದ್ಧವಾಗಿ ಕಾನೂನು ಪ್ರಕಾರ ಮೀಸಲಾತಿಯನ್ನು ಕಲ್ಪಿಸಬೇಕಾಗಿದೆ, ಸರ್ಕಾರಕ್ಕೆ ಇದು ನಿಜಕ್ಕೂ ದೊಡ್ಡ ಸವಾಲು. 2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸಿದ್ದರು. ಅದಾದ ಬಳಿಕ ಬಲಿಜ ಸಮುದಾಯ ಮತ್ತು ಆ ಸಮುದಾಯಕ್ಕೆ ಸಮಾನಾಂತರ ಹೆಸರಿನ ಜಾತಿಗಳನ್ನು ಪ್ರವರ್ಗ-2ಎ ಸೇರಿಸಲಾಯಿತು. ಆದರೆ ಯಾವುದೇ ಲಿಂಗಾಯತ ಜಾತಿಗಳನ್ನು 2ಎಗೆ ಸೇರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪ್ರಬಲ ಜಾತಿಗೆ ಹಿಂದುಳಿದ ವರ್ಗದ 2ಎ ಮೀಸಲಾತಿ ಬೇಡ: ಮುಖ್ಯಮಂತ್ರಿಗೆ ಅತಿ ಹಿಂದುಳಿದ ವರ್ಗಗಳ ವೇದಿಕೆ ಆಗ್ರಹ

Published On - 8:42 pm, Wed, 10 March 21