ಬೆಂಗಳೂರು: ಹಿಂದೂ ಧರ್ಮದಲ್ಲಿ ಹಸುವನ್ನು ದೇವರೆಂದು ಪೂಜಿಸುತ್ತಾರೆ. ಇದಕ್ಕನುಗುಣವಾಗಿ ಭಾರಿ ಚರ್ಚೆಗೆ ಕಾರಣವಾಗಿದ್ದ ಗೋಹತ್ಯೆ ನಿಷೇಧ ವಿಧೇಯಕ ನಿನ್ನೆ (ಡಿಸೆಂಬರ್ 9) ವಿಧಾನಸಭೆಯಲ್ಲಿ ಮಸೂದೆಯಾಗಿ ಅನುಮೋದನೆಗೊಂಡಿದೆ. ರಾಜ್ಯಪಾಲರ ಅಧಿಕೃತ ಒಪ್ಪಿಗೆಯ ನಂತರ ಗೋ ಹತ್ಯೆ ಕಾಯ್ದೆ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಮಸೂದೆಯ ಮುಖ್ಯ ಅಂಶಗಳು:
ಗೋಹತ್ಯೆ ಮಾಡುವವರಿಗೆ 50 ಸಾವಿರದಿಂದ 5 ಲಕ್ಷದವರೆಗೆ ದಂಡ ಹಾಕುವ ಜೊತೆಗೆ 3ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪಶು ವೈದ್ಯಾಧಿಕಾರಿಗಳು ಅನುಮತಿ ನೀಡಿದ ಬಳಿಕ ಯಾವುದೇ ರೋಗಗಳಿಂದ ಬಳಲುತ್ತಿರುವ ಗೋವುಗಳ ಹತ್ಯೆಗೆ ಅವಕಾಶವಿರುತ್ತದೆ. ಗೋಹತ್ಯೆ ಅಪರಾಧ ಪುನರಾವರ್ತಿತವಾದರೆ 1 ಲಕ್ಷದಿಂದ 10 ಲಕ್ಷದವರೆಗೆ ದಂಡ ಹಾಗೂ ಏಳು ವರ್ಷ ಜೈಲು ಶಿಕ್ಷೆ ನೀಡಲಾಗುತ್ತದೆ. ಯಾವೊಬ್ಬ ವ್ಯಕ್ತಿಯು ರಾಜ್ಯದೊಳಗಿನ ಯಾವುದೇ ಸ್ಥಳದಿಂದ ರಾಜ್ಯದ ಯಾವುದೇ ಇತರ ಸ್ಥಳಕ್ಕೆ ಗೋಹತ್ಯೆಗಾಗಿ ಹಸುವನ್ನು ಸಾಗಾಣೆ ಮಾಡಬಾರದು. ಜಾನುವಾರುಗಳನ್ನು ಮಾರಾಟ ಮಾಡಲು ಸಹಕರಿಸಿದ ವಾಹನಗಳು ಹಾಗು ಇತರ ವಸ್ತುಗಳನ್ನು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಮಾಡಲಾಗುತ್ತದೆ. ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಕ್ಕಾಗಿ ಗೋ ಸಾಗಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯವಾಗಿದೆ.
ವಿನಾಯಿತಿಗಳು:
ರಾಜ್ಯ ಸರ್ಕಾರದಿಂದ ಸ್ಥಾಪಿಸಿದ ಅಥವಾ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಲಸಿಕೆ ಸ್ರಾವ, ರಕ್ತ ಸ್ರಾವ ಜೊತೆಗೆ ಯಾವುದೇ ಪ್ರಾಯೋಗಿಕ ಉದ್ದೇಶದ ಮೇಲೆ ಜಾನುವಾರಗಳಿಗೆ ಶಸ್ತ್ರಚಿಕಿತ್ಸೆ ಮಾಡಬಹುದು. ಬಹು ಮುಖ್ಯವಾಗಿ ಜಾನುವಾರುಗಳು ವಾಸಿಯಾಗದ ಖಾಯಿಲೆಯಿಂದ ಬಳಲುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಗೋಹತ್ಯೆಗೆ ಅವಕಾಶ ನೀಡಲಾಗುವುದು.
ಈಗಾಗಲೇ ಗೋಹತ್ಯೆ ನಿಷೇಧ ಇರುವ ರಾಜ್ಯಗಳು:
ಭಾರತದಲ್ಲಿ ಉತ್ತರ ಪ್ರದೇಶವು ಗೋಹತ್ಯೆ ನಿಷೇಧಿಸಿರುವ ಏಕೈಕ ಮತ್ತು ಮೊದಲ ರಾಜ್ಯವಾಗಿದೆ. ಒಟ್ಟು 24 ರಾಜ್ಯಗಳಲ್ಲಿ ಗೋ ಹತ್ಯೆಗೆ ಸಂಬಂಧಿಸಿ ಒಂದಷ್ಟು ಕಾನೂನು ಕಟ್ಟಣೆಗಳಿವೆ. ಇನ್ನು, ಗೋವಧೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲದ ರಾಜ್ಯಗಳೆಂದರೆ ಕೇರಳ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಮತ್ತು ಸಿಕ್ಕಿಂ ಆಗಿದೆ.
ಸರ್ಕಾರದ ಪ್ರಕಟಣೆ
Published On - 12:30 pm, Thu, 10 December 20