
ಉಡುಪಿ: ಅಮ್ಮನ ಋಣ ತೀರಿಸಲು ಸಾಧ್ಯವುಂಟೇ? ಹೆತ್ತು-ಹೊತ್ತು ಸಾಕಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಬಿಡಿ, ಅಮ್ಮ ಬದುಕಿರುವವರೆಗೆ ಪ್ರೀತಿಯಿಂದ ನೋಡಿಕೊಳ್ಳೋದು ನಮ್ಮ ಜವಾಬ್ದಾರಿ. ಇಲ್ಲೊಬ್ಬ ಹಿರಿಯ ಕಲಾವಿದ ತಾಯಿ ಅಗಲಿದ ನಂತರವೂ ಮಕ್ಕಳು ಆಕೆಗೆ ಏನು ಮಾಡಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
ಅಮ್ಮನಿಗಾಗಿ ಗುಡಿ ಕಟ್ಟಿದ ಮಗ:
ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲಿ ಒಳಿತನ್ನೇ ಬಯಸುವ ತಾಯಿ ಅಂದ್ರೆ ಮಕ್ಕಳಿಗೂ ಇಷ್ಟಾನೇ.. ಹೀಗಾಗಿ ತನ್ನ ಹೆತ್ತಾಕೆಗೂ ಏನಾದ್ರೂ ಕೊಡಬೇಕು ಅಂತ ಮಕ್ಕಳು ಆಸೆ ಪಡುತ್ತಾರೆ. ಬದುಕಿದ್ದಾಗ ಮಾತ್ರವಲ್ಲ, ಗತಿಸಿದ ನಂತರವೂ ತಾಯಿಯ ಒಡನಾಟ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು ಅಂತ ಹಿರಿಯ ನಟ, ನಿರ್ದೇಶಕ ನಿರ್ಮಾಪಕ ರಾಜಶೇಖರ ಕೋಟ್ಯಾನ್ ತಾಯಿ ದಿವಂಗತ ಕಲ್ಯಾಣಿ ಪೂಜಾರ್ತಿ ಅವರ ನೆನಪಿಗಾಗಿ ಹುಟ್ಟೂರು ಉಡುಪಿಯ ಸಾಂತೂರು ಗರಡಿ ಮನೆಯಲ್ಲಿ, ಸುಂದರವಾದ ಗುಡಿ ಕಟ್ಟಿ, ಮೂರ್ತಿ ನಿರ್ಮಿಸಿ ಮಂಗಳಾರತಿ ಬೆಳಗುತ್ತಿದ್ದಾರೆ.
ವೈಟ್ ಮಾರ್ಬಲ್ನಲ್ಲಿ ಸಿದ್ಧವಾಯ್ತು ತಾಯಿಯ ವಿಗ್ರಹ:
ರಾಜಸ್ಥಾನ- ಜೈಪುರದ ವೈಟ್ ಮಾರ್ಬಲ್ನಲ್ಲಿ ರಾಜಸ್ಥಾನಿ ಕಲಾವಿದ ಪೃಥ್ವಿರಾಜ್ ಅವರಿಂದ ಏಕಶಿಲಾ ಮೂರ್ತಿ ಕೆತ್ತನೆ ಕೆಲಸ ಮಾಡಿಸಿದ್ದಾರೆ. ಒಟ್ಟು ಆರು ತಿಂಗಳ ಕಾಲ ಲಕ್ಷಾಂತರ ರೂ ಖರ್ಚು ಮಾಡಿ ಈ ಮೂರ್ತಿಯನ್ನು ರಾಜಸ್ಥಾನದಲ್ಲಿ ನಿರ್ಮಿಸಿ ಊರಿಗೆ ತರಿಸಿಕೊಂಡಿದ್ದಾರೆ.
ಮೊದಲು ತಾಯಿಯ ಫೋಟೋ ಕೊಟ್ಟು ಫೋಟೋದಲ್ಲಿ ಇದ್ದ ಹಾಗೆ ಮೂರ್ತಿ ನಿರ್ಮಾಣ ಮಾಡಿಸಿದ್ದಾರೆ. ಮೂರ್ತಿಯೂ ಕೂಡ ನೋಡುವುದಕ್ಕೆ ತಾಯಿಯಂತೆ ಇದ್ದು, ಮೂರ್ತಿ ನೋಡಿದ್ರೆ ತಾಯಿ ನೋಡಿದಷ್ಟೇ ಖುಷಿ ಆಗುತ್ತೆ. ರಾಜಶೇಖರ್ ಗೆಳೆಯುರೂ ಈ ಬಗ್ಗೆ ಹೆಮ್ಮೆಯ ಮಾತನಾಡಿದ್ದಾರೆ.
ಸ್ಟಂಟ್ ಮಾಸ್ಟರ್, ಅಂತರ್ಗಾಮಿ, ಗಡಿಪಾರ್, ಜಗ್ಗುದಾದಾ, ಮುಂತಾದ ಕನ್ನಡ ಚಿತ್ರದಲ್ಲಿ ನಟಿಸಿರುವ ರಾಜ್ ಶೇಖರ್, ತಮಿಳು, ತೆಲುಗು ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಸದ್ಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಮುಖಂಡ, ಬಿಲ್ಲವ ಮಹಾಮಂಡಲ ಅಧ್ಯಕ್ಷರಾಗಿಯೂ ಜನಮನ್ನಣೆ ಪಡೆದಿದ್ದಾರೆ.
ಕೊಡುಗೈ ದಾನಿ ತಾಯಿ ಕಲ್ಯಾಣಿ ಪೂರ್ಜಾತಿ:
ರಾಜ್ ಶೇಖರ್ ತಾಯಿ ಕಲ್ಯಾಣಿ ಪೂರ್ಜಾತಿ ಕೃಷಿಕರಾಗಿ ದುಡಿದವರು. ಭತ್ತ ತೆಂಗು ಅಡಿಕೆ ಕೃಷಿಯಲ್ಲಿ ತನ್ನ ಜೀವನ ತೊಡಗಿಸಿಕೊಂಡು ಮಕ್ಕಳ ಏಳಿಗೆಗಾಗಿ ನಿರಂತರ ದುಡಿದಾಕೆ. ಸಂತೂರು ಗರಡಿ ಮನೆಯ ಗೌರವ ಹೆಚ್ಚಿಸಿದಾಕೆ. ಊರಿನಲ್ಲಿ ಕೊಡುಗೈ ದಾನಿ ಹೆಸರು ಮಾಡಿದಾಕೆ ಮನೆ ಬಂದ ಮಂದಿಗೆ ಹೊಟ್ಟೆ ತುಂಬ ಅನ್ನ ನೀಡಿ, ಕಷ್ಟ ಅಂತ ಬಂದವರಿಗೆ ಸಹಾಯ ಮಾಡಿದಾಕೆ.
ಶೇಖರ್ ಕೋಟ್ಯಾನ್ ಗೆಳೆಯ ರಮೇಶ್ ಕಾಂಚನ್ ಮಾತನಾಡಿ, ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ. ರಾಜಶೇಖರ್ ಕೋಟ್ಯಾನ್ ಅವರ ತಾಯಿಯ ಪ್ರೀತಿ ಎಷ್ಟು ಎಂಬುದು ನಮಗೆ ಗೊತ್ತು. ಕೋಟ್ಯಾನ್ ಅವರ ತಾಯಿ ಗತಿಸಿದ ನಂತರವೂ ಅವರನ್ನು ಸದಾಕಾಲ ಸ್ಮರಿಸಬೇಕು ಎಂಬ ಉದ್ದೇಶದಿಂದ ಈ ಮೂರ್ತಿಯನ್ನು ರಚಿಸಿದ್ದಾರೆ.
ಇವರು ಮಾಡಿದ ಕೆಲಸ ಎಲ್ಲಾ ಮಕ್ಕಳಿಗೂ ಮಾದರಿ ಎಂದರು.
ಬದುಕಿದ್ದಾಗಲೇ ತಂದೆ ತಾಯಿಯನ್ನು ದೂರ ಮಾಡಿ ಆಶ್ರಮಗಳಲ್ಲಿ ಅನಾಥವಾಗಿ ಬಿಡುವ ಮಕ್ಕಳ ನಡುವೆ ರಾಜಶೇಖರ್ ಅವರ ಕಾಳಜಿ ಎಲ್ಲರಿಗೂ ಮಾದರಿ. –ಹರೀಶ್ ಪಾಲೆಚ್ಚಾರ್
Published On - 12:01 pm, Thu, 10 December 20