ಬೆಂಗಳೂರು: ಮಿಲಿಟರಿ ನೀಡಿದ ಮಾಹಿತಿ ಮೇರೆಗೆ ಅಂತಾರಾಷ್ಟ್ರೀಯ ಕರೆಗಳನ್ನು ಕನ್ವರ್ಟ್ ಮಾಡಿ ದೇಶದ ಭದ್ರತೆಗೆ ಗಂಡಾಂತರ ತರುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳ (ಎಟಿಸಿ)ಯಿಂದ ಅತಿದೊಡ್ಡ ಕಾರ್ಯಾಚರಣೆ ನಡೆದಿದ್ದು ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ಇಬ್ರಾಹಿಂ ಹಾಗೂ ಗೌತಮ್ ಎಂಬವವರನ್ನ ಈ ಹಿಂದೆಯೇ ಬಂಧಿಸಲಾಗಿತ್ತು. ಬಂಧಿತರ ಮಾಹಿತಿ ಮೇರೆಗೆ ತಮಿಳುನಾಡು ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮಹಮ್ಮದ್ ಬಶೀರ್ (51), ಅನೀಸ್ ಅತ್ತಿಮನ್ನೀಲ್ (30) ಸಂತನ್ ಕುಮಾರ್ (29) ಸುರೇಶ್ ತಂಗವೇಲು (32) ಜೈ ಗಣೇಶ್ (30) ಬಂಧಿತರು.
ದೇಶದ ಭದ್ರತಗೆ ಧಕ್ಕೆಯುಂಟು ಮಾಡುವಂತಹ ಕೃತ್ಯದಲ್ಲಿ ಈ ಆರೋಪಿಗಳು ತೊಡಗಿದ್ದರು. ಈ ಹಿಂದೆ ಬಂಧಿಸಲಾದ ಇಬ್ಬರು ಆರೋಪಿಗಳ ಮಾಹಿತಿ ಮೇರೆಗೆ ವಿವಿಧೆಡೆ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಲಾಗಿದೆ.
ಆರೋಪಿಗಳು ಮಧ್ಯ ಪ್ರಾಚ್ಯದಿಂದ ಅನೇಕ ಕರೆಗಳನ್ನ ಸ್ಥಳೀಯ ಕರೆಗಳಾಗಿ ಕನ್ವರ್ಟ್ ಮಾಡುತ್ತಿದ್ದರು. ತಮಿಳುನಾಡಿನ ಪ್ರಮುಖ ಸರ್ವಿಸ್ ಪ್ರೊವೈಡರ್ ಒಂದರ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಸಂತನ್ ಕುಮಾರ್ ಕೃತ್ಯಕ್ಕಾಗಿ ವಿವಿಧ ಕಂಪನಿಯ ಸಿಮ್ ಕಾರ್ಡ್ಗಳನ್ನ ಒದಗಿಸುತ್ತಿದ್ದ. ಸುರೇಶ್ ತಂಗವೇಲು ಹಾಗೂ ಜೈ ಗಣೇಶ್ ನೆರವಿನಿಂದ ಪ್ರಮುಖ ಆರೋಪಿಗಳಿಗೆ ಸಿಮ್ ಒದಗಿಸುತ್ತಿದ್ದ. ಕೊರಿಯರ್ ಮೂಲಕ ಸಿಮ್ ವರ್ಗಾವಣೆ ನಡೆಸುತ್ತಿದ್ದರು. ತನಿಖೆಯಲ್ಲಿ 109 ಇಲೆಕ್ಟ್ರಾನಿಕ್ ಉಪಕರಣಗಳು (ಸಿಮ್ ಬಾಕ್ಸ್ ಡಿವೈಸ್ ), 3 ಸಾವಿರಕ್ಕೂ ಅಧಿಕ ಸಿಮ್ ಕಾರ್ಡ್ಸ್, 23 ಲ್ಯಾಪ್‌ಟಾಪ್ಸ್, 10 ಪೆನ್ ಡ್ರೈವ್, 14 ಯುಪಿಎಸ್, 17 ರೂಟರ್ಸ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಪ್ರತಿಯೊಂದು ಎಲೆಕ್ಟ್ರಾನಿಕ್ ಡಿವೈಸ್ಗಳನ್ನ ಕೇರಳಾದಿಂದ ತರಿಸುತ್ತಿದ್ದರು. ಕೇರಳಾಗೆ ಡಿವೈಸ್ ತಲುಪುತ್ತಿದ್ದ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ. ಆರೋಪಿಗಳು ಬಿಟಿಎಂ ಲೇಔಟ್, ಮಡಿವಾಳ, ಸುದ್ದಗುಂಟೆ ಪಾಳ್ಯದಲ್ಲಿ ಮನೆ ಹೊಂದಿದ್ದರು. ಟೆಕ್ಕಿಗಳೆಂದು ಯಾರೂ ಸಹ ಆರೋಪಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆರ್ಮಿ ಇಂಟಲಿಜೆನ್ಸ್ ಮಾಹಿತಿಯನ್ವಯ ಬೃಹತ್ ಜಾಲದ ಕಾರ್ಯಾಚರಣೆ ನಡೆಸಿ ಐವರನ್ನು ಅರೆಸ್ಟ್ ಮಾಡಿದ್ದಾರೆ.
ಪಾಕ್ ಇಂಟೆಲಿಜೆನ್ಸ್ ಜೊತೆ ನಂಟಿರುವ ಶಂಕೆ ವ್ಯಕ್ತಪಡಿಸಿದ್ದ ಎನ್‌ಐಎ
ಮಿಲಿಟರಿ ನೀಡಿದ ಮಾಹಿತಿ ಮೇರೆಗೆ ಅಂತಾರಾಷ್ಟ್ರೀಯ ಕರೆಗಳನ್ನು ಕನ್ವರ್ಟ್ ಮಾಡಿ ದೇಶದ ಭದ್ರತೆಗೆ ಗಂಡಾಂತರ ತರುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಿಮ್ ಕಿಟ್ ಪ್ರಕರಣದ ಬಗ್ಗೆ ಬೆಂಗಳೂರು ಸಿಸಿಬಿಯಿಂದ ಎನ್‌ಐಎ ಮಾಹಿತಿ ಪಡೆದಿದೆ. ಬಂಧಿತ ಆರೋಪಿಗಳಿಗೆ ಪಾಕ್ ಇಂಟೆಲಿಜೆನ್ಸ್ ಜೊತೆ ನಂಟಿರುವ ಬಗ್ಗೆ ಎನ್‌ಐಎಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳದಿಂದ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಭಾರತೀಯ ಸೇನೆಯ ಬಗ್ಗೆ ಮಾಹಿತಿ ಕಲೆಹಾಕಲು ವಿವಿಧ ಸೇನಾ ನೆಲೆಗಳಿಗೂ ಅಪರಿಚಿತ ಕರೆಗಳು ಬಂದಿದ್ದವು. ಸೇನಾಧಿಕಾರಿಗಳ ಸೋಗಿನಲ್ಲಿ ಮಾಹಿತಿ ಸಂಗ್ರಹಕ್ಕೆ ಕರೆ ಮಾಡಲಾಗಿತ್ತು. ಇದೇ ಆರೋಪಿಗಳು ಇದಕ್ಕೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಜಾಲದ ಬಗ್ಗೆ ಆರ್ಮಿ ಇಂಟೆಲಿಜೆನ್ಸಿಗೆ ಅನುಮಾನ ಹೊರ ಹಾಕಿದೆ. ಸದ್ಯ ಆರೋಪಿಗಳ ಬಳಿ ಸಿಕ್ಕ ಸಿಮ್ ಕಾರ್ಡ್ಸ್ ಡಿವೈಸ್ ಬಗ್ಗೆ ಸಿಸಿಬಿಯಿಂದ ತನಿಖೆ ಚುರುಕುಗೊಂಡಿದೆ. ಬಂಧಿತ ಆರೋಪಿಗಳಿಗೆ ಯಾರು ಹಣವನ್ನು ನೀಡುತ್ತಿದ್ದರು. ದೇಶದ ಯಾವ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆಂದು ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಉಳಿದ ಇತರ ಆರೋಪಿಗಳು ಯಾರು ಅವರ ಮೂಲವನ್ನು ಪತ್ತೆ ಹಚ್ಚುಲಾಗುತ್ತಿದೆ. ಸದ್ಯಕ್ಕೆ ಸಿಸಿಬಿಯಿಂದ ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಲಾಗಿದ್ದು ಐವರು ಆರೋಪಿಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಸೇನೆಯ ಮಾಹಿತಿ ಕದಿಯಲು ಬೆಂಗಳೂರಿನಲ್ಲಿ ಟೆಲಿಪೋನ್ ಎಕ್ಸ್ಚೇಂಜ್ ಆರಂಭ
Published On - 11:47 am, Mon, 14 June 21