ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಬೆಳ್ಳಾರೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕಾರ್ಯಕರ್ತರನ್ನು ಸಮಾಧಾನಪಡಿಸಲು ಹೋಗುತ್ತಿದ್ದೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಾನು ಹೋಗುತ್ತಿರುವುದು ಅಲ್ಲಿ ಶಾಂತಿ ಕದಡಲು ಅಲ್ಲ, ಬದಲಾಗಿ ಪ್ರವೀಣ್ ಕುಟುಂಬಸ್ಥರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಹೋಗುತ್ತಿದ್ದೇನೆ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಟಿವಿ9 ಜೊತೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.
ಬೆಳ್ಳಾರೆಯಲ್ಲಿ 114 ಸೆಕ್ಷನ್ ಜಾರಿಯಲ್ಲಿದೆ. ಆದರೂ ಕಾರ್ಯಕರ್ತರನ್ನು ಸಮಾಧಾನಪಡಿಸಲು ಹೋಗುತ್ತಿದ್ದೇವೆ, ನಾವು ಹೋಗುತ್ತಿರುವುದು ಅಲ್ಲಿ ಶಾಂತಿ ಕದಡಲು ಅಲ್ಲ. ಪ್ರವೀಣ್ ಕುಟುಂಬಸ್ಥರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತೇನೆ ಎಂದರು. ಅಂತಿಮದರ್ಶನದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಡಾ.ಪ್ರಭಾಕರ್ ಭಟ್, ಸಚಿವರಾದ ಸುನಿಲ್ ಕುಮಾರ್ ಮತ್ತು ಅಂಗಾರ ಅವರಿಗೆ ಘೇರಾವ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು ಅಷ್ಟು ಆಕ್ರೋಶ ಕಾರ್ಯಕರ್ತರಲ್ಲಿ ಇದೆ. ನಮ್ಮ ಕಾರ್ಯಕರ್ತರು ಮನಸ್ಸಿನ ನೋವನ್ನು ತೋಡಿಕೊಂಡಿದ್ದಾರೆ. ಸರ್ಕಾರ ಕೂಡ ಕಾರ್ಯಕ್ರಮಗಳನ್ನು ಮುಂದೂಡಿದೆ. ಯಡಿಯೂರಪ್ಪಜೀ ಕೂಡ ಕರೆ ಮಾಡಿ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಪ್ರವೀಣ್ ತಂದೆ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಮಗನನ್ನು ಕಳೆದುಕೊಂಡ ದುಃಖದಲ್ಲಿರುವ ಪ್ರವೀಣ್ ನೆಟ್ಟಾರು ಅವರ ತಂದೆ ಇದೀಗ ಅಸ್ವಸ್ಥಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವೀಣ್ ಅವರ ಅಂತ್ಯಕ್ರಿಯೆಯ ನಂತರ ತೀವ್ರ ನೋವಿನಲ್ಲಿದ್ದ ತಂದೆ ಶೇಖರ್ ಪೂಜಾರಿ, ಮತ್ತೆ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಆ್ಯಂಬುಲೆನ್ಸ್ ಮೂಲಕ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಮತ್ತೆ ಮನೆಗೆ ವಾಪಸ್ಸು ಕರೆತರಲಾಗಿದೆ. ಶೇಖರ್ ಪೂಜಾರಿ ಅವರು ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದಾರೆ.
Published On - 12:42 pm, Thu, 28 July 22