ಮತ್ತೊಂದು ವಿದ್ಯುತ್ ಅವಘಡ.. ವಿಕಲಚೇತನ ಬಾಲಕನಿಗೆ ಹೈ ಕರೆಂಟ್ ಶಾಕ್, ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ, ಹೆತ್ತವರ ಕಣ್ಣೀರು

| Updated By: ಸಾಧು ಶ್ರೀನಾಥ್​

Updated on: Dec 16, 2023 | 3:45 PM

ಮತ್ತೊಂದು ವಿದ್ಯುತ್ ಅವಘಡ.. ವಿಕಲಚೇತನ ಬಾಲಕನಿಗೆ ಹೈ ಕರೆಂಟ್ ಶಾಕ್ ಆಗಿದೆ. ತಂದೆಯಿಲ್ಲದ ಬಡ ವಿಕಲಚೇತನ ಬಾಲಕನ ಸ್ಥಿತಿ ಗಂಭೀರವಾಗಿದೆ. ಬೆಸ್ಕಾಂ ಅಧಿಕಾರಿಗಳು ಪ್ರಕರಣದಿಂದ ಜಾರಿಕೊಂಡು ಜಾಣತನ ತೋರಿಸುತ್ತಿದ್ದಾರೆ. ಇಂಧನ ಇಲಾಖೆಯ ಉನ್ನತಾಧಿಕಾರಿಗಳು ಮತ್ತು ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಡ ಕುಟುಂಬಕ್ಕೆ ನ್ಯಾಯಕೊಡಿಸಬೇಕಿದೆ..

ಮತ್ತೊಂದು ವಿದ್ಯುತ್ ಅವಘಡ.. ವಿಕಲಚೇತನ ಬಾಲಕನಿಗೆ ಹೈ ಕರೆಂಟ್ ಶಾಕ್, ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ, ಹೆತ್ತವರ ಕಣ್ಣೀರು
ವಿಕಲಚೇತನ ಬಾಲಕನಿಗೆ ಹೈ ಕರೆಂಟ್ ಶಾಕ್, ಬೆಸ್ಕಾಂ ಅಧಿಕಾರಿಗಳ ಬೇಜಾಬ್ದಾರಿ
Follow us on

ವಿದ್ಯುತ್ ಅವಘಡದಿಂದ ಈಗಾಗಲೇ ಅನೇಕ ಸಾವುನೋವು ಸಂಭವಿಸಿವೆ. ಆದ್ರೂ ಕೂಡಾ ಇಂಧನ ಇಲಾಖೆಯು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ನಡುವೆ ದಾವಣಗೆರೆ ಜಿಲ್ಲೆ (Davanagere) ನ್ಯಾಮತಿ ತಾಲೂಕಿನಲ್ಲಿ ಮತ್ತೊಂದು ದುರಂತವಾಗಿದೆ. ವಿದ್ಯುತ್ ಹರಿದು ಶಾಲಾ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ. ಹೊಲದಲ್ಲಿ ನೇತುಬಿದ್ದ ಹೈಟೆನಕ್ಷನ್ ಲೈನ್ ನಿಂದ ಹರಿದ ವಿದ್ಯುತ್ ಬಾಲಕನ ಕೈ ಮತ್ತು ಕಾಲಿನ ಭಾಗ ಸುಟ್ಟು ಹಾಕಿದೆ. ವಿಕಲಚೇತನ ಮಗು ( physically challenged) ಆಸ್ಪತ್ರೆಯಲ್ಲಿ ನೋವಿನಂದ ಒದ್ದಾಡುತ್ತಿದೆ. ಮತ್ತೊಂದೆಡೆ ತಾಯಿಯು ಮಗನ ಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದಾಳೆ. ಆದರೆ ಈ ಎಲ್ಲ ಅವಾಂತರಕ್ಕೆ ಕಾರಣವಾಗಿರುವ ಬೆಸ್ಕಾಂ (BESCOM) ಮಾತ್ರ ಗಪ್ ಚುಪ್ ಅಂತಿದೆ. ವಿದ್ಯಾರ್ಥಿಗೆ ಕರೆಂಟ್ ಶಾಕ್ (current shock) ಕುರಿತಾದ ವರದಿ ಇಲ್ಲಿದೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ವಿದ್ಯುತ್​ ತಂತಿ ತಗುಲಿ ತಾಯಿ-ಮಗು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಇದೀಗ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜೊಸಜೋಗಾ ಗ್ರಾಮದಲ್ಲಿ ಇದೆ ರೀತಿ ಘಟನೆ ಡಿ. 3 ರಂದು ನಡೆದಿತ್ತು. ಹೊಲದಲ್ಲಿ ಟ್ರ್ಯಾಕ್ಟರ್ ಮೇಲೆ ಜೋಳದ ತೆನೆಗಳನ್ನು ತುಂಬಿದ್ದರು. ಈ ನಡುವೆ ಹೆತ್ತವರು ಹೊಲದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಮೂವರು ಮಕ್ಕಳು ತೆನೆಗಳ ಮೇಲೆ ಆಟವಾಡುತ್ತಿದ್ದರು.

ಈ ನಡುವೆ 11 ಕೆ.ವಿ. ಹೈಟೆನಕ್ಷನ್ ಲೈನ್ ನಿಂದ ಒಂದು ತಂತಿ ಜೋತಾಡುತ್ತಿತ್ತು. ಇದನ್ನು ಗಮನಿಸಿದ ದೀಪಕ್ ನಾಯ್ಕ್ ಎನ್ನುವ 11 ವರ್ಷದ ವಿಕಲಚೇತನ ಬಾಲಕನು ಅದನ್ನು ಮುಟ್ಟಿದ್ದಾನೆ. ಆತನಿಗೆ ವಿದ್ಯುತ್ ಶಾಕ್ ಹೊಡೆದಿದೆ. ಜೊತೆಗೆ ಇದ್ದ ಇಬ್ಬರು ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ್ಧಾರೆ. ದೀಪಕ್ ದೊಡ್ಡಪ್ಪ ಹೋಗಿ ಅತನನ್ನು ರಕ್ಷಣೆ ಮಾಡಲು ಹೋಗಿದ್ಧಾನೆ. ಆತನಿಗೂ ಶಾಕ್ ಹೊಡೆದಿದೆ. ಕೊನೆಗೆ ಹರಸಾಹಸ ಮಾಡಿ ದೀಪಕ್ ನನ್ನು ದೊಡ್ಡಪ್ಪ ಬಚಾವ್ ಮಾಡಿದ್ದಾನೆ.

ಸದ್ಯ ಕೈ ಮತ್ತು ಕಾಲಿಗೆ ಹೈ ಕರೆಂಟ್ ಶಾಕ್ ಹೊಡೆದಿದೆ. ಬಾಲಕನ ಸ್ಥಿತಿ ಗಂಭೀರವಾಗಿದೆ. ಬಡ ಕೂಲಿ ಮಾಡಿ ಬದುಕುವ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ತಂದೆ ಚಿಕ್ಕ ವಯಸ್ಸಿನಲ್ಲೆ ತೀರಿ ಹೋಗಿದ್ದಾನೆ. ತಾಯಿ ಮತ್ತು ದೊಡ್ಡಪ್ಪ ವಿಕಲಚೇತನ ದೀಪಕ್ ಆರೈಕೆ ಮಾಡುತ್ತಿದ್ದರು. ಈ ನಡುವೆ ಬೆಸ್ಕಾಂ ಆಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜಾಬ್ದಾರಿಗೆ ಈಗ ಮಗು ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕರೆಂಟ್ ಹೊಡೆದು 13 ದಿನವಾದ್ರೂ ಬಾಲಕ ಇನ್ನೂ ನೋವಿನಿಂದ ಒದ್ದಾಡುತ್ತಿದ್ದಾನೆ. ಅತ್ತ ತಾಯಿ ಮಗನ ಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದಾಳೆ.

ಆಪರೇಶನ್ ಬಳಿಕವಷ್ಟೇ ಬಾಲಕನ ಸ್ಥಿತಿಗತಿ ಏನಾಗಲಿದೆ ಎನ್ನುವುದು ಗೊತ್ತಾಗಲಿದೆ. ಬಡ ವಿಕಲಚೇತನ ಬಾಲಕನ ಸ್ಥಿತಿ ಗಂಭೀರವಾಗಿದ್ದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಪ್ರಕರಣದಿಂದ ಜಾರಿಕೊಂಡು ಜಾಣತನ ತೋರಿಸುತ್ತಿದ್ದಾರೆ. ಇಂಧನ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಡ ಕುಟುಂಬಕ್ಕೆ ನ್ಯಾಯಕೊಡಿಸಬೇಕಿದೆ.

ಇದನ್ನೂ ಓದಿ: ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

ಕಳೆದ 13 ದಿನಗಳಿಂದ ಹೆತ್ತವರು ಮಗನ ಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ದೊಡ್ಡಪ್ಪ ವಿಜಯ್ ನಾಯ್ಕ್ ಘಟನೆಗೆ ಬೆಸ್ಕಾಂ ಅಧಿಕಾರಿಗಳ ಬೇಜಾಬ್ದಾರಿ ಕಾರಣವಾಗಿದೆ. ಹೊಲದಲ್ಲಿ ಹೋಗಿದ್ದ ಲೈನ್ ನ ತಂತಿಯು ಒಂದು ತುಂಡಾಗಿ ಬಿದ್ದಿತ್ತು. ಮತ್ತೊಂದು ತಂತಿಯು ಭೂಮಿಗೆ ಹತ್ತಿರದ ಅಂತರದಲ್ಲಿ ನೇತಾಡುತ್ತಿತ್ತು.

ಈ ನಡುವೆ ದೀಪಕ್ ಆಟವಾಡುವ ಸಂದರ್ಭದಲ್ಲಿ ಗಮನಿಸಿದೆ ಆತನ ಕೈಗೆ ತಂತಿಯು ಟಚ್ ಆಗಿದೆ. ಇದರಿಂದ ವಿದ್ಯುತ್ ಹರಿದಿದೆ. ಸದ್ಯ ಕಾಲಿನ ಮೂರು ಬೆರಳು ಮತ್ತು ಬಲಗೈ ಒಂದು ಬೆರಳು ಆಪರೇಶನ್ ಮಾಡಿ ತೆಗೆಯಬೇಕೆಂದು ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯರು ಹೇಳಿದ್ದಾರಂತೆ. ಈ ಸುದ್ದಿ ಕೇಳಿದ ತಾಯಿ ರತ್ನಾಬಾಯಿಗೆ ದೊಡ್ಡ ಆಘಾತವಾಗಿದೆ.

ಮೊದಲೇ ಪತಿ ಇಲ್ಲ. ಇಬ್ಬರು ಮಕ್ಕಳು. ದೊಡ್ಡ ಮಗ ದೀಪಕ್ ಗೆ ಈ ರೀತಿ ಶಾಕ್ ಹೊಡೆದಿದ್ದು ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಬೆಸ್ಕಾಂ ಅಧಿಕಾರಿಗಳು ಮತ್ತು ಸರಕಾರ ತನ್ನ ಮಗನಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯಬೇಕೆಂದು ಕಣ್ಣೀರು ಹಾಕುತ್ತಿದ್ದಾಳೆ. ಘಟನೆ ನಡೆದು 13 ದಿನವಾದ್ರೂ ಯಾವುದೇ ಅಧಿಕಾರಿಗಳು ಇತ್ತ ಸುಳಿದಿಲ್ಲ. ಬಡವರು ಅನಕ್ಷರಸ್ಥರಾಗಿದ್ದರಿಂದ ಬೆಸ್ಕಾಂ ಮತ್ತು ನ್ಯಾಮತಿ ಪೊಲೀಸರು ಕೇಸ್ ದಾಖಲಿಸಿಕೊಳ್ಳುತ್ತಿಲ್ಲ. ನಿತ್ಯ ಒಂದೊಂದು ಕಥೆಯನ್ನು ಅವರು ಹೇಳುತ್ತಿದ್ದಾರೆ ಎಂದು ಗಾಯಾಳು ಬಾಲಕನ ದೊಡ್ಡಪ್ಪ ವಿಜಯ್ ನಾಯ್ಕ ತಮ್ಮ ನೋವು ಹೊರಹಾಕಿದ್ಧಾರೆ. ಐದನೇ ಕ್ಲಾಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಈ ಸ್ಥಿತಿಗೆ ಹೊಣೆ ಯಾರು ಅಂತಾ ಕೇಳುತ್ತಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ