ಶಿವಮೊಗ್ಗ, ಆಗಸ್ಟ್ 28: ನನ್ನ ಫೇಸ್ಬುಕ್ ಅಕೌಂಟ್ನಿಂದ ಸಂದೇಶ ಹೋಗಿದೆ ಎಂದು ಎಫ್ಐಆರ್ ಹಾಕಿದ್ದಾರೆ. ನನ್ನ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ನಮ್ಮ ಹುಡುಗರು ನೋಡಿಕೊಳ್ಳುತ್ತಾರೆ. ಈ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ. ಇಂತಹ ಸಣ್ಣ ವಿಷಯಗಳಿಗೂ ಪೊಲೀಸರು ಹೇಗೆ ಎಫ್ಐಆರ್ ದಾಖಲಿಸಿದರು ಎಂಬುದನ್ನು ನ್ಯಾಯಾಲಯದಲ್ಲೇ ಪ್ರಶ್ನಿಸುತ್ತೇನೆ ಎಂದು ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಅನೇಕ ಸಂಗತಿಗಳು ಈ ಹಿಂದೆ ಕೂಡ ನಡೆದಿದ್ದು, ಆದರೆ ಆಗ ಎಫ್ಐಆರ್ ದಾಖಲಾಗಿರಲಿಲ್ಲ ಎಂದಿದ್ದಾರೆ.
ಈ ಸಂಗತಿಯನ್ನು ಡೆಫಿನೆಟ್ಲಿ ಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇನೆ. ಈ ಕಾರ್ಯಕ್ರಮಕ್ಕೆ ಪ್ರತಿಭಟನೆಯ ಸಾಧ್ಯತೆ ಹಿನ್ನೆಲೆ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದಾರೆ. ಇದಕ್ಕಾಗಿ ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ.
ಇದನ್ನೂ ಓದಿ: ಶಿವಮೊಗ್ಗ: ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬ್ರಿಗೇಡ್ ಹೆಚ್ಚಿನ ಕೆಲಸ ಮಾಡಲಿದೆ. ಜಿಲ್ಲಾ ಮಟ್ಟದ ಸಭೆಯನ್ನು ಖುದ್ದಾಗಿ ನಾನೇ ನಡೆಸಿದ್ದೇನೆ. ತಾಲೂಕು ಮಟ್ಟದಲ್ಲೂ ಕೂಡ ನಿಮ್ಮ ಬ್ರಿಗೇಡ್ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಲೋಕಸಭಾ ಚುನಾವಣೆಗೆ 5 ತಿಂಗಳ ಮುನ್ನ ನಮ್ಮ ಕಾರ್ಯ ಶುರು ಆಗಲಿದೆ. ಚುನಾವಣೆಯ ಕೊನೆಯ ಎರಡು ತಿಂಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ನಮ್ಮ ಬ್ರಿಗೇಡ್ 2.0 ಪ್ರಚಾರ ನಡೆಸಲಿದೆ ಎಂದರು.
ಇದನ್ನೂ ಓದಿ: ಕೆಪಿಸಿಸಿ ಐಟಿ ಸೆಲ್ ಉಪಾಧ್ಯಕ್ಷೆ ಸೌಗಂಧಿಕಾ ಕುರಿತು ಚಕ್ರವರ್ತಿ ಸೂಲಿಬೆಲೆ ಅವಹೇಳಕಾರಿ ಪೋಸ್ಟ್, ಚಿಂತಕನ ವಿರುದ್ಧ ಎಫ್ಐಅರ್!
ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಡಿಮೆಯಾಗಿಲ್ಲ. ಮೋದಿಯವರ ಕಾರ್ಯ ಸಾಧನೆಗಳನ್ನು ಜನತೆಯ ಮುಂದಿಡುತ್ತೇವೆ. ಜನರಿಗೆ ಪ್ರಧಾನಿ ಮೋದಿ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಹಾಗೂ ದೇಶಕ್ಕೆ ಬರುವ ಆತಂಕದ ವಿಷಯಗಳ ಬಗ್ಗೆ ಮಾಹಿತಿ ನೀಡಲು ಈ ಉಪನ್ಯಾಸ ಕಾರ್ಯಕ್ರಮ ಮಾಡಲಾಗಿತ್ತಿದೆ. ದೇಶದ ಹಿತದೃಷ್ಟಿಯಿಂದ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:56 pm, Mon, 28 August 23