ಶಿವಮೊಗ್ಗ: ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲ್ಲೂಕು ಹಾಲುಗುಡ್ಡೆ ಸಮೀಪದ ಆನೆಕೇರಿ ಕ್ಯಾಂಪ್ನಲ್ಲಿ ನಡೆದಿದೆ. ಮೃತ ಯುವತಿಯನ್ನು ಆನೆಕೇರಿ ಕ್ಯಾಂಪ್ನ ಅನುಷಾ (19) ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ ಮನೆಯಲ್ಲಿಯೇ ಅನುಷಾ ವಿಷ ಸೇವಿಸಿ ಪ್ರಿಯಕರ ಮಂಜುನಾಥ್ಗೆ ಕರೆ ಮಾಡಿದ್ದರು ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಅನುಷಾಳನ್ನು ಸಾಗರ ತಾಲೂಕಿನ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಮಂಜುನಾಥ್ ದಾಖಲಿಸಿದ್ದರು. ಬಳಿಕೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಅನುಷಾ ಸಾವನ್ನಪ್ಪಿದರು.
ಕಳೆದ ಎರಡು ತಿಂಗಳ ಹಿಂದಷ್ಟೇ ಅನುಷಾ-ಮಂಜುನಾಥ್ ಪರಸ್ಪರ ಪರಿಚಯವಾಗಿದ್ದರು. ಅನುಷಾ ಮನೆಗೆ ಗಾರೆ ಕೆಲಸಕ್ಕೆಂದು ಹೊಸನಗರ ತಾಲ್ಲೂಕು ನವಟೂರು ಗ್ರಾಮದ ಮಂಜುನಾಥ್ ಬಂದಿದ್ದರು. ಅಲ್ಪ ಪರಿಚಯದ ನಂತರವೇ ಇಬ್ಬರೂ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಪ್ರೀತಿ ಚಿಗುರಿದ ನಂತರ ಮದುವೆಯಾಗಲು ಅನುಷಾ ನಿರಾಕರಿಸಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಹಲವು ಸಲ ಜಗಳಗಳು ನಡೆದಿದ್ದವು. ಪ್ರೇಮ ವೈಫಲ್ಯದಿಂದ ನೊಂದ ಅನುಷಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಸಪ್ಲೈ ಮಾಡುತ್ತಿದ್ದವರ ಬಂಧನ
ಫುಡ್ ಡೆಲಿವರಿ ಹೆಸರಿನಲ್ಲಿ ಗಾಂಜಾ ಸಪ್ಲೈ ಮಾಡುತ್ತಿದ್ದ ಮೂವರು ಫುಡ್ ಡೆಲಿವರಿ ಬಾಯ್ಗಳನ್ನು ಉಡುಪಿಯ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರವಿಶಂಕರ್, ಅಂಜಲ್ ಬೈಜು, ದೇವಿಪ್ರಸಾದ್ ಬಂಧಿತರು. ಕೇರಳದ ಪಾಲಕ್ಕಾಡ್ನಿಂದ ರೈಲಿನಲ್ಲಿ ಗಾಂಜಾ ತರಿಸಿಕೊಳ್ಳುತ್ತಿದ್ದ ಆರೋಪಿಗಳು ಉಡುಪಿಯಲ್ಲಿ ಡೆಲಿವರಿ ಬಾಯ್ಸ್ ಮೂಲಕ ಗ್ರಾಹಕರನ್ನು ಪತ್ತೆಮಾಡಿ ಫುಡ್ ಡೆಲಿವರಿ ಬ್ಯಾಗ್ಗಳಲ್ಲಿ ಗಾಂಜಾ ಪೂರೈಸುತ್ತಿದ್ದರು. ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದೂವರೆ ಕೆಜಿ ಗಾಂಜಾ, 2 ಬೈಕ್, ಫುಡ್ ಡೆಲಿವರಿ ಬ್ಯಾಗ್, 4 ಮೊಬೈಲ್, 30 ಸಾವಿರ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಂಕನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟವಾಗಿಲ್ಲ: ಎಸ್ಪಿ
ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸಂಕನಹಳ್ಳಿಯಲ್ಲಿ ಯಾವುದೇ ಜಿಲೆಟಿನ್ ಕಡ್ಡಿ ಸ್ಫೋಟಗೊಂಡಿಲ್ಲ ಎಂದು ‘ಟಿವಿ9’ಗೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸಂಕನಹಳ್ಳಿ ಗ್ರಾಮಕ್ಕೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಯಾವುದೇ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿಲ್ಲ. ಕೂಲಿ ಕಾರ್ಮಿಕರು ಪರಸ್ಪರ ಹೊಡೆದಾಡಿಕೊಳ್ಳುವ ವೇಳೆ ಗಾಯಾಳು ಕಾರ್ಮಿಕ ಬೆಟ್ಟದ ಮೇಲಿಂದ ಬಿದ್ದಿದ್ದಾಗಿ ಸ್ಥಳದಲ್ಲಿದ್ದವರು ಹೇಳಿದ್ದಾರೆ. ಗನ್ ಪೌಡರ್ ಬಳಕೆಯ ಬಗ್ಗೆ ತನಿಖೆ ನಡೆಯುತ್ತಿದೆ. ಕಲ್ಲು ಕ್ವಾರಿಯ ಮಾಲೀಕನಿಗೆ ಠಾಣೆಗೆ ಬರಲು ಸೂಚಿಸಿದ್ದೇವೆ. ವಿಚಾರಣೆ ವೇಳೆ ಪರವಾನಗಿ ಇಲ್ಲದಿದ್ದರೆ ಕೇಸ್ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
Published On - 2:27 pm, Sun, 18 September 22