ಶಿವಮೊಗ್ಗ, ಸೆಪ್ಟೆಂಬರ್ 6: ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಜಿಪಿಎಸ್ ಮೂಲಕ ಸರ್ವೆ ಮಾಡಲಾಗುವುದು. ಕಂದಾಯ ಇಲಾಖೆಯಲ್ಲಿ ಸುಧಾರಣೆ ತರುತ್ತೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಬುಧವಾರ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಮಂಜೂರಾತಿ ಸಂಬಂಧ ಸಾಕಷ್ಟು ಸಮಸ್ಯೆಗಳಿವೆ. ಅರಣ್ಯ, ಕಂದಾಯ ಇಲಾಖೆ ನಡುವೆ ಬಿಡಿಸಲಾಗದ ಗೊಂದಲಗಳಿವೆ. ಡ್ರೋನ್ ಕ್ಯಾಮರಾ ಬಳಸಿ ಸರ್ವೆ ಮಾಡಿದರೂ ಪ್ರಯೋಜನವಾಗುವುದಿಲ್ಲ. ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಹೆಚ್ಚಿನ ಮಾನವ ಸಂಪನ್ಮೂಲ ಒದಗಿಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
2 ಸಾವಿರ ಪರವಾನಗಿ ಹೊಂದಿದ ಸರ್ವೆಯರ್ಗಳ ನೇಮಕಕ್ಕೆ ಚಾಲನೆ ನೀಡಲಾಗಿದೆ. 1700 ಗ್ರಾಮ ಲೆಕ್ಕಿಗರ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಿದ್ದೇನೆ. ರಾಜ್ಯಾದ್ಯಂತ ಏಕರೂಪ ನೇಮಕಾತಿ ನಡೆಸಲು ಸೂಚನೆ ನೀಡಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ದಾಖಲೆಯಲ್ಲಿ 250 ಎಕರೆ ಇದ್ದರೆ, ಭೌತಿಕವಾಗಿ 200 ಎಕರೆ ಕಂಡುಬರುತ್ತಿದೆ. ಇಂತಹ ಮಿಸ್ ಮ್ಯಾಚ್ಗಳನ್ನು ಸರಿಪಡಿಸಬೇಕಿದೆ. ದಾಖಲೆಯಲ್ಲಿ ಬೆಳೆ ಎಂಟ್ರಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತೇವೆ. ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಜಿಪಿಎಸ್ ಮೂಲಕ ಸರ್ವೆ ಮಾಡಿಸಲಾಗುವುದು. ಕಂದಾಯ ಇಲಾಖೆಯಲ್ಲಿ ಸುಧಾರಣೆ ತರಲಾಗುವುದು ಎಂದು ಕೃಷ್ಣ ಭೈರೇಗೌಡ ಹೇಳಿದರು.
ಇದನ್ನೂ ಓದಿ: ಬೆಂಗಳೂರು: ರಾತ್ರಿ ಪ್ರಯಾಣಿಸುವವರಿಗೆ ಸಿಹಿಸುದ್ದಿ ನೀಡಿದ ಬಿಎಂಟಿಸಿ; ಏನು ಗೊತ್ತಾ?
ಉತ್ತಮವಾಗಿ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ನೀಡುತ್ತೇವೆ. ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಪರಭಾರೆ ಬಗ್ಗೆ ತನಿಖೆ ನಡೆಸುತ್ತೇವೆ. ಖಾಸಗಿ ವ್ಯಕ್ತಿಗಳ ಜೊತೆ ಕೈಜೋಡಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಡೂರು ತಾಲೂಕಿನಲ್ಲಿ ಅನರ್ಹರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಿದ್ದ ಅಧಿಕಾರಿ ಜೈಲಿನ ಕಂಬಿ ಎಣಿಸುತ್ತಿದ್ದಾನೆ. ಕಂದಾಯ ಇಲಾಖೆಯಲ್ಲಿನ ಸಮಸ್ಯೆ ಬಗೆಹರಿಸಲು ಅದಾಲತ್ ಆಯೋಜನೆ ಮಾಡಲಾಗುವುದು. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುತ್ತೇವೆ. ಕಂದಾಯ ಇಲಾಖೆಯಲ್ಲಿ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡುತ್ತೇನೆ. ಪ್ರತಿ ತಿಂಗಳು ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸುಮ್ಮನೆ ಬಾಯಿ ಮಾತಿನಲ್ಲಿ ವಚನ ಹೇಳಿ ಕಾಲ ಕಳೆದರೆ ಆಗುವುದಿಲ್ಲ ಎಂದು ಕೃಷ್ಣ ಭೈರೇಗೌಡ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ