ರೈತರಿಗೆ ಗುಡ್​ ನ್ಯೂಸ್: ಇಂದಿನಿಂದ ಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ, ಎಲ್ಲಿಯವರೆಗೆ?

ಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಂತಸದ ಸುದ್ದಿಕೊಟ್ಟಿದೆ. ಇಂದಿನಿಂದ ನೂರು ದಿನಗಳ ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಬಿಡುಗಡೆ ತೀರ್ಮಾನಿಸಲಾಗಿದೆ. ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ರೈತರ ಅನುಕೂಲಕ್ಕಾಗಿ ನೀರು ಬಿಡುಗಡೆಗೆ ನಿರ್ಧರಿಸಲಾಗಿದ್ದು, ಇದರಿಂದ ರೈತರು ಫುಲ್ ಖುಷ್ ಆಗಿದ್ದಾರೆ.

ರೈತರಿಗೆ ಗುಡ್​ ನ್ಯೂಸ್: ಇಂದಿನಿಂದ ಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ, ಎಲ್ಲಿಯವರೆಗೆ?
ಭದ್ರಾ ಡ್ಯಾಂ
Edited By:

Updated on: Aug 10, 2023 | 7:20 AM

ಶಿವಮೊಗ್ಗ, (ಆಗಸ್ಟ್ 10): ಇಂದಿನಿಂದ ಅಂದರೆ ಆಗಸ್ಟ್ 10ರಿಂದ ಮುಂದಿನ ನೂರು ದಿನಗಳ ಕಾಲ ಭದ್ರಾ ಜಲಾಶಯದ (bhadra reservoir)  ಕಾಲುವೆಗಳಿಗೆ (canals) ನೀರು ಹರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅಚ್ಚುಕಟ್ಟು ಪ್ರದೇಶದ ಪ್ರಾಧಿಕಾರ(ಕಾಡಾ) ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 10ರ ರಾತ್ರಿಯಿಂದ ಭದ್ರಾ ಎಡದಂಡೆ, ಬಲದಂಡೆ ನಾಲೆ, ಅನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾ ನಾಲೆ, ಹರಿಹರ ಮತ್ತು ಗೋಂದಿ ನಾಲೆಗಳಿಗೆ ನೀರು ಬಿಡಲಾಗುತ್ತದೆ ಎಂದು ತಿಳಿಸಲಾಗಿದೆ. ಭದ್ರಾ ಬಲದಂಡೆ ಕಾಲುವೆಗೆ 2650 ಕ್ಯುಸೆಕ್ಸ್ ಹಾಗೂ ಎಡದಂಡೆಗೆ 380 ಕ್ಯಸೆಕ್ಸ್ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಎನ್​. ಸುಜಾತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Dam Water Level: ಆ. 10ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಲಕ್ಕವಳ್ಳಿ ಬಳಿಯ  ಭದ್ರಾ ಜಲಾಶದ ನೀರಿನ ಮಟ್ಟ ಸದ್ಯ ಬುಧವಾರ (ಆಗಸ್ಟ್ 09) ವರೆಗೆ 166.5 ಅಡಿಯಷ್ಟಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಜಲಾಶಯ ತುಂಬಲು ಇನ್ನೂ 20 ಅಡಿ ನೀರು ಕಡಿಮೆ ಇದೆ. ಜಲಾಶಯಕ್ಕೆ ಸದ್ಯ 4118 ಕ್ಯುಸೆಕ್ಸ್​ ಒಳಹರಿವು ಇದ್ದು 194 ಹೊರಹರಿವು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 183.8 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷ ವಾಡಿಕೆಗಿಂತ ಮೊದಲೇ ಭರ್ತಿಯಾಗಿತ್ತು. ಹೀಗಾಗಿ ಹಿಂದಿನ ವರ್ಷ ಮಳೆಗಾಲದ ಬೆಳೆಗೆ ಜುಲೈ ತಿಂಗಳಲ್ಲೇ ನಾಲೆಗಳಿಗೆ ನೀರು ಹರಿಸಲಾಗಿತ್ತು. ಆದ್ರೆ, ಈ ವರ್ಷ ಜೂನ್​ನಲ್ಲಿ ಮೂಂಗಾರು ಮಳೆ ಕುಂಠಿತವಾಗಿದ್ದರಿಂದ ಭದ್ರಾ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಆದರೂ ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದ ಭದ್ರಾಗೆ ನೀರು ಹರಿದುಬಂದಿದ್ದು, ಇದೀಗ ರೈತ ಬೆಳೆಗಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ.

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಭತ್ತ ನಾಟಿಗೆ ಸಜ್ಜಾಗಿದ್ದ ರೈತರು ಕಂಗಾಲಾಗಿದ್ದರು. ಆದ್ರೆ, ಜುಲೈ ವರುಣಾ ಕೃಪೆ ತೋರಿದ್ದರಿಂದ ನದಿಗೆ ನೀರು ಹರಿದುಬಂದಿದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ.

ಇದೇ ಆಗಸ್ಟ್ ಮೊದಲ ವಾರದಲ್ಲಿ ಕಾಲೆವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ನೀರು ನೀಡುವ ಬಗ್ಗೆ ಇಷ್ಟರಲ್ಲಿ ‌ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಾಲುವೆಗೆ ನೀರು ಬಿಡುವ ಬಗ್ಗೆ ಅಧಿಕೃತ‌ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆಲ ದಿನಗಳ ಹಿಂದಷ್ಟೇ ಸಚಿವ ಎಸ್ ಎಸ್ ಮಲ್ಲಿಕಾರ್ಜುನ‌ ಹೇಳಿದ್ದರು.

ಇನ್ನಷ್ಟು ಶಿವಮೊಗ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ