
ಶಿವಮೊಗ್ಗ, ನವೆಂಬರ್ 21: ಮನೆಯಿಂದ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಪಾತ್ರೆ ವ್ಯಾಪಾರಿ ಹರೀಶ್ ಮೇಲೆ ಜಾತಿ ಕೇಳಿ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹರೀಶ್ ಮೇಲಿನ ಪ್ರಕರಣವು ಕೋಮು ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಪ್ರಕರಣ ಸಂಬಂಧ ಎರಡು ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಘಟನೆ ಸಂಬಂಧ ಅರ್ಮಾನ (21), ನಿರಂಜನ್ (20) ಮತ್ತು ಓರ್ವ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಲಾಗಿದೆ. ಆ ಬೆನ್ನಲ್ಲೇ ಹಲ್ಲೆ ನಡೆಸಿರೋದು ಅನ್ಯಕೋಮಿನ ಯುವಕರು ಮಾತ್ರವಲ್ಲ, ಗ್ಯಾಂಗ್‌ನಲ್ಲಿ ಹಿಂದೂಗಳು ಇದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ನ. 15ರ ರಾತ್ರಿ ಮನೆಯಿಂದ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಪಾತ್ರೆ ವ್ಯಾಪಾರಿ ಹರೀಶ್ ಮೇಲೆ ನಾಲ್ವರು ಡೆಡ್ಲಿ ಅಟ್ಯಾಕ್ ನಡೆಸಿದ್ದರು. ಆರೋಪಿಗಳು ಹಿಗ್ಗಾಮುಗ್ಗಾ ಥಳಿಸಸುತ್ತಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾತ್ತು. ಹಲ್ಲೆಗೊಳಗಾದ ಹರೀಶ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನವೆಂಬರ್ 17ರಂದು ಶಾಸಕ ಚನ್ನಬಸಪ್ಪ ಜೊತೆ ಬಂದು ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆ ನಡೆದು ಎರಡು ದಿನಗಳು ಕಳೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಮಾರ್ನಮಿ ಬೈಲು ಮತ್ತು ಆರ್ಎಂಎಲ್ ನಗರದಲ್ಲಿ ಪುಂಡಪೋಕರಿಗಳ ಹಾವಳಿ ಜಾಸ್ತಿಯಾಗಿದ್ದು, ಬಡಾವಣೆಯಲ್ಲಿ ವಾಸ ಮಾಡುವುದಕ್ಕೆ ಭಯ ಆಗುತ್ತದೆ ಎಂದು ಹರೀಶ್ ಹೇಳಿದ್ದರು.
ಇದನ್ನೂ ಓದಿ: ಕೊಲೆ ಯತ್ನ ಆರೋಪದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ
ಘಟನೆ ಸಂಬಂಧ ಆಕ್ರೋಶ ಹೊರಹಾಕಿದ್ದ ಶಾಸಕ ಚನ್ನಬಸಪ್ಪ, ಈ ಭಾಗದ ಜನರು ಪೊಲೀಸರಿಗೆ ದೂರು ನೀಡಲು ಭಯ ಪಡಬೇಕಾದ ವಾತಾವರಣಸೃಷ್ಟಿಯಾಗಿದೆ. ದೊಡ್ಡಪೇಟೆ ಪೊಲೀಸರು ಆರೋಪಿಗಳ ಬಂಧನ ಮಾಡುವುದು ಬಿಟ್ಟು ದೂರು ಕೊಟ್ಟವರ ಮಾಹಿತಿ ಲೀಕ್ ಮಾಡುತ್ತಾರೆ. ದೂರು ಕೊಟ್ಟವರ ಮಾಹಿತಿ ಪಡೆದ ಆರೋಪಿಗಳು ಅವರ ಮನೆ ಮೇಲೆ ದಾಳಿ ಮಾಡುತ್ತಾರೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹೆದಿಗೆಟ್ಟು ಹೋಗಿದ್ದು, ಪೊಲೀಸ್ ಇಲಾಖೆ ಸತ್ತು ಹೋಗಿದೆ ಎಂದು ಕಿಡಿ ಕಾರಿದ್ದರು. ಜೊತೆಗೆ ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಗೃಹ ಸಚಿವ ಪರಮೇಶ್ವರ್ ಮತ್ತು ಡಿಜಿ ಐಜಿಪಿ ಸಲೀಂ ಮತ್ತು ಅಪರ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ ಅವರನ್ನು ಭೇಟಿ ಮಾಡಿ ಘಟನೆ ಕುರಿತು ಚರ್ಚಿಸಿದ್ದರು. ಆ ಬೆನ್ನಲ್ಲೇ ಶಿವಮೊಗ್ಗಕ್ಕೆ ಆಗಿಮಿಸಿದ್ದ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ, ಶಾಸಕ ಚನ್ನಬಸಪ್ಪ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಶಾಸಕರು ಹರೀಶ್ ಮೇಲೆ ಹಲ್ಲೆ ಪ್ರಕರಣ ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:32 pm, Fri, 21 November 25