ಮೂವರ ಬಲಿ ಪಡೆದ ಭದ್ರಾ ಚಾನಲ್! ಒಂದೇ ಕುಟುಂಬದ ಮೂವರು ಸಾವು, ಯುವತಿಯ ಶವ ಪತ್ತೆ, ಮತ್ತಿಬ್ಬರಿಗಾಗಿ ಮುಂದುವರೆದ ಶೋಧ ಕಾರ್ಯ

|

Updated on: May 23, 2023 | 4:21 PM

ಆ ಇಬ್ಬರು ನೀರಿಗೆ ಬಿದ್ದಿರುವುದು ನೋಡಿದ ಚಾನಲ್ ಬಳಿ ಇದ್ದ ಮಾವ ರವಿ ನೀರಿಗೆ ಧುಮುಕಿದ್ದಾನೆ. ಆದ್ರೆ ವಿಧಿಯಾಟವೇ ಮತ್ತೊಂದು ಆಗಿತ್ತು. ದೊಡ್ಡ ಚಾನಲ್ ಮತ್ತು ನೀರು ವೇಗವಾಗಿ ಹರಿಯುತ್ತಿರುವುದರಿಂದ ಮೂವರೂ ನೀರು ಪಾಲಾಗಿದ್ದರು.

ಮೂವರ ಬಲಿ ಪಡೆದ ಭದ್ರಾ ಚಾನಲ್! ಒಂದೇ ಕುಟುಂಬದ ಮೂವರು ಸಾವು, ಯುವತಿಯ ಶವ ಪತ್ತೆ, ಮತ್ತಿಬ್ಬರಿಗಾಗಿ ಮುಂದುವರೆದ ಶೋಧ ಕಾರ್ಯ
ಮೂವರ ಬಲಿ ಪಡೆದ ಭದ್ರಾ ಚಾನಲ್! ಒಂದೇ ಕುಟುಂಬದ ಮೂವರು ಸಾವು
Follow us on

ನೀರು ನೋಡಿದ ತಕ್ಷಣ ಸಂತಸ ಖುಷಿ.. ನೀರಿಗೆ ಇಳಿಯಬೇಕು.. ಸೆಲ್ಫಿ ತೆಗೆದುಕೊಳ್ಳಬೇಕೆನ್ನುವ ಹಂಬಲ.. ಯುವಕ ಮತ್ತು ಯುವತಿಯರ ಈ ಕ್ರೇಜ್ ನಿಂದಲೇ ಅನೇಕ ದುರಂತಗಳು ನಡೆಯುತ್ತಿವೆ. ಭದ್ರಾ ಡ್ಯಾಂ ಬಳಿ ಇರುವ ಭದ್ರಾ ದೊಡ್ಡ ಕಾಲುವೆಯಲ್ಲಿ ಒಂದೇ ಕುಟುಂಬದ ಮೂವರು ನೀರು ಪಾಲಾಗಿದ್ದಾರೆ.. ಸದ್ಯ ಮೂವರಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಮತ್ತಿಬ್ಬರು ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.  ಶಿವಮೊಗ್ಗ (Shivamogga) ತಾಲೂಕಿನ ಭದ್ರಾ ಡ್ಯಾಂ ನಿಂದ ಸದ್ಯ ಕೃಷಿ ಚಟುವಟಿಕೆಗಾಗಿ ಭದ್ರಾ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಮೊನ್ನೆ ಭಾನುವಾರ ಸಂಜೆ ಭದ್ರಾವತಿ ಮತ್ತು ತರಿಕೇರಿ ಗಡಿ ಭಾಗವಾಗಿರುವ ಭದ್ರಾ ಡ್ಯಾಂನ ಭದ್ರಾ ಕಾಲುವೆ ಬಳಿ ದೊಡ್ಡ ದುರಂತ ಸಂಭವಿಸಿದೆ (Tragedy). ದೊಡ್ಡ ಚಾನಲ್ ನಲ್ಲಿ ಕೈ ಕಾಲು ಮುಖ ತೊಳೆದುಕೊಳ್ಳಲು ಹೋದ ಅನನ್ಯ (17) ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾಳೆ. ಅವಳನ್ನು ಬಚಾವ್ ಮಾಡಲು ಹೋದ ಶಾಮವೇಣಿ (16) ಯುವತಿಯು ಕೂಡಾ ಚಾನಲ್ ನ ನೀರು ಪಾಲಾಗಿದ್ದಾಳೆ.

ಈ ಇಬ್ಬರು ನೀರಿಗೆ ಬಿದ್ದಿರುವುದು ನೋಡಿದ ಚಾನಲ್ ಬಳಿ ಇದ್ದ ಮಾವ ರವಿ (34) ನೀರಿಗೆ ಧುಮುಕಿ ಇಬ್ಬರನ್ನು ಬಚಾವ್ ಮಾಡಲು ಮುಂದಾಗಿದ್ದಾನೆ. ಆದ್ರೆ ವಿಧಿಯಾಟವೇ ಮತ್ತೊಂದು ಆಗಿತ್ತು. ದೊಡ್ಡ ಚಾನಲ್ ಮತ್ತು ನೀರು ವೇಗವಾಗಿ ಹರಿಯುತ್ತಿರುವುದರಿಂದ ಮೂವರೂ ನೀರು ಪಾಲಾಗಿದ್ದರು. ನಿನ್ನೆ ರಾತ್ರಿ ಲಕ್ಕವಳ್ಳಿ ಮತ್ತು ಭದ್ರಾವತಿ ಗ್ರಾಮಾಂತರ ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮಾಡಿದ್ದಾರೆ. ಇದರ ಪರಿಣಾಮ ಅನನ್ಯ ಮೃತ ದೇಹವು ಪತ್ತೆಯಾಗಿತ್ತು.

ನಿನ್ನೆ ಸೋಮವಾರ ಬೆಳಗ್ಗೆಯಿಂದ ನೀರು ಪಾಲಾಗಿರುವ ರವಿ ಮತ್ತು ಶಾಮವೇಣಿ ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮಧ್ಯಾಹ್ನ ಆದ್ರೂ ಅವರಿಬ್ಬರದ್ದೂ ಮೃತದೇಹ ಸಿಕ್ಕಿಲ್ಲ. ಗ್ರಾಮಸ್ಥರು ಶೋಧ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಡ್ಯಾಂನಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.

ಸದ್ಯ ರವಿ, ಅನನ್ಯ ಮತ್ತು ಶಾಮವೇಣಿ ಮೂವರು ಸಂಬಂಧಿಗಳಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ತಾಲೂಕಿನ ಲಕ್ಕವಳ್ಳಿ ಗ್ರಾಮದ ರವಿ ಮತ್ತು ಈತನ ಸಂಬಂಧಿಗಳಾದ ಶಾಮ ಮತ್ತು ಅನನ್ಯ ಮೂವರು ಹತ್ತಿರದ ಭದ್ರಾ ದೊಡ್ಡ ಚಾನಲ್ ಬಳಿ ತೆರಳಿದ್ದರು. ರವಿ ಚಾನಲ್ ನಲ್ಲಿ ಚೆನ್ನಾಗಿ ಈಜಿ ಎಂಜಾಯ್ ಮಾಡಿದ್ದಾನೆ.

ಇದನ್ನೂ ಓದಿ: Weekend Tragedy: ವೀಕೆಂಡ್ ಮೋಜು – ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿ ಬೆಂಗಳೂರಿನ ಪ್ರವಾಸಿಗ ಸಾವು

ಆತ ಈಜು ಮುಗಿಸಿ ಬಂದ ಬಳಿಕ ಅನನ್ಯ ಕಾಲು ಜಾರಿ ಬಿದ್ದಿದ್ದಾಳೆ. ಇವಳ ಜೀವ ಉಳಿಸಲು ಹೋಗಿ ಶಾಮವೇಣಿ ಮತ್ತು ರವಿ ಇಬ್ಬರೂ ಭದ್ರಾ ಚಾನಲ್ ನೀರು ಪಾಲಾಗಿದ್ದಾರೆ. ಇಬ್ಬರೂ ಸೊಸೆಯಂದಿರ ಪ್ರಾಣ ಉಳಿಸಲು ಹೋಗಿ ಮಾವ ರವಿ ಕೂಡಾ ನೀರುಪಾಲಾಗಿದ್ದಾರೆ. ಅಲ್ಲಿಗೆ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿದ್ದಾರೆ.

ಹೀಗೆ ನೀರು ಪಾಲಾಗುವ ಅರ್ಧ ಘಂಟೆ ಮೊದಲು ಅನನ್ಯ ಮತ್ತು ಮತ್ತು ಶಾಮವೇಣಿ ಇಬ್ಬರು ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಹೀಗೆ ಸೆಲ್ಫಿ ತೆಗೆದುಕೊಂಡು ನೀರು ನೋಡಿ ಅನನ್ಯ ಮತ್ತು ಶಾಮವೇಣಿ ಇಬ್ಬರೂ ಸಖತ್ ಎಂಜಾಯ್ ಮಾಡಿದ್ದಾರೆ. ಸಂಬಂಧಿ ರವಿ ಕೂಡಾ ಭದ್ರಾ ಚಾನಲ್ ನಲ್ಲಿ ಈಜು ಹೊಡೆದು ಸಂಬಂಧಿಗಳ ಗಮನ ಸೆಳೆದಿದ್ದಾನೆ.

ಸಂಜೆ ಹೊತ್ತಿನಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಅವರು ಅಂದುಕೊಂಡಂತೆ ಚಾನಲ್ ಬಳಿ ಹೋಗಿ ಮೋಜು ಮಸ್ತಿ ಮಾಡಿದ್ದಾರೆ. ಆದ್ರೆ ಚಾನಲ್ ನ ಬಳಿ ತೆರಳಿ ಅನನ್ಯ ನೀರಾಟವಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ಈ ವೇಳೆ ಕಾಲು ಜಾರಿ ಬಿದ್ದ ಅನನ್ಯ ನೀರು ಪಾಲಾಗಿದ್ದಾಳೆ. ಸದ್ಯ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಕೇಸ್ ದಾಖಲು ಆಗಿದೆ.

ನೀರು ಪಾಲಾಗಿರುವ ಶಾಮ ಮತ್ತು ರವಿ ಇಬ್ಬರ ಶೋಧ ಕಾರ್ಯಾಚರಣೆಯು ಮುಂದುವರೆದಿದೆ. ಮಾವ ರವಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಈತ ಲಕ್ಕವಳ್ಳಿಯಲ್ಲಿ ವಾಸವಾಗಿದ್ದನು. ಇನ್ನು ರವಿಯ ಅಕ್ಕ ಲಕ್ಕವಳ್ಳಿಯ ಗಾಯತ್ರಿ ಮಗಳು ಅನನ್ಯ ಮತ್ತು ರವಿಯ ತಂಗಿ ನಂಜನಗೂಡಿನ ಆಶಾಳ ಮಗಳು ಶಾಮವೇಣಿ. ಇನ್ನು, ಒಂದು ವಾರ ಬಳಿಕ ಮೃತ ಯುವತಿ ಅನನ್ಯಳ ಅಕ್ಕನ ಮದುವೆಯಿತ್ತು. ಈ ನಡುವೆ ದುರ್ಘಟನೆ ಸಂಭವಿಸಿದ್ದು ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಮದುವೆ ತಯಾರಿಯ ಸಂತಸದಲ್ಲಿದ್ದ ಕುಟುಂಬಕ್ಕೆ ಈ ದುರ್ಘಟನೆಯು ಸಿಡಿಲು ಬಡಿದಂತಾಗಿದೆ.

ವರದಿ: ಅಶ್ವಿಥ್ -ಚಿಕ್ಕಮಗಳೂರು ಮತ್ತು ಬಸವರಾಜ್ ಯರಗಣವಿ, ಟಿವಿ 9 ಶಿವಮೊಗ್ಗ

 

Published On - 4:21 pm, Tue, 23 May 23