ಮುಂದೊಂದು ದಿನ ವಿಶ್ವದಲ್ಲಿ ಮಹಾಯುದ್ಧವೋ, ದೇಶ-ರಾಜ್ಯಗಳೊಳಗೆ ಅಂತರ್ಯುದ್ಧವೋ ಅಗುವುದಿದ್ದರೆ ಅದು ನೀರಿಗಾಗಿಯೇ ಎಂಬ ಮಾತುಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ನಮ್ಮನ್ನಾಳುವ ಸರ್ಕಾರಗಳ ಪಾಲಿಗೆ ಕರ್ನಾಟಕದ ಮಲೆನಾಡು-ಕರಾವಳಿ ಎಂಬುದು ಎಂದೂ ಬತ್ತದ ನೀರಿನ ಖಜಾನೆಯಂತೆ ಕಾಣಿಸುತ್ತಿದೆ. ಅಲ್ಲಿಂದ ಬಯಲುಸೀಮೆಗೆ ನೀರು ಹರಿಸುವ ಯೋಜನೆಗಳನ್ನು ಕಾಲಕ್ಕೊಬ್ಬರು, ಕಾಲಕ್ಕೊಂದು ರೀತಿ ಜನರ ಮುಂದಿಟ್ಟು ಮರೀಚಿಕೆಯನ್ನು ನಿಜವೆಂದು ನಂಬಿಸಲು ಹಾತೊರೆಯುತ್ತಾರೆ. ಇಂಥ ದೊಡ್ಡದೊಡ್ಡ ಯೋಜನೆಗಳಲ್ಲಿ ನಿಜಕ್ಕೂ ಯಾರಿಗೆ ಲಾಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ನಮ್ಮನಮ್ಮ ಊರುಗಳ ನೀರ ನೆಮ್ಮದಿಗೆ ನಮ್ಮ ಮಿತಿಯಲ್ಲಿಯೇ ನಾವು ಎಷ್ಟೆಲ್ಲಾ ಮಾಡಬಹುದು ಗೊತ್ತೆ? ಹತ್ತಾರು ವರ್ಷಗಳಿಂದ ನಾಡಿನಲ್ಲಿ ನೀರೆಚ್ಚರ ಮೂಡಿಸಲು ಶ್ರಮಿಸುತ್ತಿರುವ ಹಿರಿಯ ಅಭ್ಯುದಯ ಪತ್ರಕರ್ತ ಶ್ರೀಪಡ್ರೆ ಇಂಥ ಹಲವು ಸರಳ ಉಪಾಯಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಂಗುಬಾವಿ ಸಾಕಷ್ಟು ಜನಪ್ರಿಯ ಆಗುತ್ತಲಿದೆ. ಆದರೆ ಬೆಂಗಳೂರು ನಗರದಿಂದ ಹೊರಗೆ ಈ ಬಗೆಗಿನ ಮಾಹಿತಿ ಹೆಚ್ಚು ಹೋಗಿಲ್ಲ. ಅಂತರ್ಜಲದ ಮಟ್ಟ ಕುಸಿದಿರುವುದು ಇಂದು ಕ್ಷಾಮಕ್ಕೆ ಬಹುಮುಖ್ಯ ಕಾರಣವಾಗಿದೆ. ನೆಲಮಟ್ಟಕ್ಕಿಂತ ಕೆಳಗೆ ಇರುವ ನೀರನ್ನು ನಾವು ಅಮಿತವಾಗಿ ಮೇಲೆತ್ತಿದ್ದೇವೆ. ಆದರೆ ನೀರನ್ನು ಮತ್ತೆ ಭೂಮಿಯಲ್ಲಿ ಇಳಿಸುವ ಕಾರ್ಯವನ್ನು ಮಾಡಿಲ್ಲ. ಹಳೆ ವ್ಯವಸ್ಥೆಯನ್ನು ಹಾಳು ಮಾಡಿದ್ದೇವೆ. ಆದರೆ ಹೊಸ ವ್ಯವಸ್ಥೆಯನ್ನು ತಂದಿಲ್ಲ. ಕುಗ್ಗುತ್ತಿರುವ ಜಲಮಟ್ಟವನ್ನು ಏರಿಸುವ ಸವಾಲಿನಲ್ಲಿ ಇಂಗುಬಾವಿ ತುಂಬ ಸಹಕಾರಿ ಆಗಬಲ್ಲುದು.
ಒಂದು ಇಂಗುಬಾವಿಗೆ 25,000 ದಿಂದ 40,000 ರೂಪಾಯಿ ಖರ್ಚು ಬೀಳುತ್ತದೆ. ಮೂರು ಅಡಿ ವ್ಯಾಸ ಮತ್ತು 20 ಅಡಿ ಆಳ ಇಟ್ಟುಕೊಳ್ಳುವುದು ಉಚಿತ. ಅಷ್ಟು ಆಳದಲ್ಲಿ ಹಿಂದೆ ನೀರು ಚೆನ್ನಾಗಿ ಸಿಗುತ್ತಿತ್ತು. ಒರತೆ ಬಂದು ಸೇರುವ ನಾಳಗಳು ಈಗ ಬತ್ತಿ ಹೋಗಿದ್ದರೂ ನಾಳ ಸಮೂಹ ಇದ್ದೇ ಇರುತ್ತದೆ. ಈ ಸೂಕ್ಷ್ಮವಾದ ನಾಳಸಮೂಹದ ಮೂಲಕ ನಾವು ಈಗ ವಿರುದ್ಧ ದಿಕ್ಕಿನಿಂದ ನೀರನ್ನು ಭೂಮಿಗೆ ಸೇರಿಸಬಹುದು. ನೀರು ಇಂಗಿಸುವ ಬಾವಿ 20 ಅಡಿ ಇದ್ದರೆ ಇಂಗಿಸುವ ಸಾಮರ್ಥ್ಯ ಹೆಚ್ಚು ಇರುತ್ತದೆ.
ಇಂಗುಬಾವಿಯಲ್ಲಿ ನೀರು ಇಳಿಯುವ ಪ್ರಕ್ರಿಯೆ
ಇಂಗು ಬಾವಿಯಲ್ಲಿ ನೀರು ಹೇಗೆ ಇಂಗುತ್ತದೆ ? ಜಲಧರ ಪ್ರದೇಶದಲ್ಲಿ ಇರುವ ಒರತೆ ನೀರಿನ ನಾಳಗಳ ಮೂಲಕ ಅದು ಭೂಮಿಯ ಒಡಲು ಸೇರುತ್ತದೆ. ಇಂಗುಬಾವಿಯಲ್ಲಿ ತುಂಬಿಕೊಳ್ಳುವ ನೀರಿನ ಒತ್ತಡವೂ ನೀರು ಇಂಗುವ ವೇಗವನ್ನು ಹೆಚ್ಚು ಮಾಡುತ್ತದೆ. ಹಾಗಂತ ಚಿಕ್ಕಚಿಕ್ಕ ಮನೆಗಳಲ್ಲಿ ಇಂಗುಬಾವಿಯ ಅಗತ್ಯ ಇಲ್ಲ. ಸಾಮಾನ್ಯವಾಗಿ ಮಳೆ ಬಂದಾಗ ಎರಡರಿಂದ ಮೂರು ಇಂಚಿನ ಪೈಪಿನಲ್ಲಿ ಸತತವಾಗಿ ನೀರು ಹೊರಗೆ ಹೋಗುವ ಜಾಗ ಇದ್ದರೆ ಅಂತವರು ಇಂಗುಬಾವಿ ಮಾಡಬಹುದು ಅಥವಾ ಸುತ್ತಮುತ್ತಲಿನ ಮನೆಯವರು ಸೇರಿ ಒಂದು ಇಂಗುಬಾವಿಯನ್ನು ಮಾಡಬಹುದು.
ಇಂಗುಬಾವಿಯ ಉಪಯೋಗಗಳು
ಜಲಪಾತಳಿಯನ್ನು ಮೇಲೆ ತರಲು ಇದು ಒಂದು ರೀತಿಯ ಸರಳ ಉಪಾಯ. ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಪ್ರವಾಹಗಳಿಗೂ ಇದು ಪರಿಹಾರವಾಗಲ್ಲದು. ನಗರದ ನೆರೆ ಬರುವ ಪ್ರದೇಶದ ದೊಡ್ಡದೊಡ್ಡ ಕಟ್ಟಡಗಳ ಆವರಣಗಳಲ್ಲಿ ಇಂಗುಬಾವಿಗಳನ್ನು ನಿರ್ಮಿಸಿ ಪ್ರವಾಹದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇಂಗುಬಾವಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುತ್ತದೆ. ಜಲಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನಗರದ ಕೃತಕ ನೆರೆಯನ್ನು ಕುಗ್ಗಿಸುತ್ತದೆ. ಇದರಲ್ಲಿ ಸಾಮುದಾಯಿಕ ಹಿತ ಅಡಗಿದೆ ಎನ್ನುವುದು ಈ ವಿಧಾನದ ಮಹತ್ವ ಹೆಚ್ಚಿಸುತ್ತದೆ.
ಜಾಗದ ಬಗ್ಗೆ ಅಧ್ಯಯನ ಅಗತ್ಯ
ಇಂಗುಬಾವಿ ಕೇವಲ ನಗರಕ್ಕೆ ಮಾತ್ರ ಪ್ರಸ್ತುತ ಎನ್ನುವುದು ತಪ್ಪು ಕಲ್ಪನೆ. ಹಳ್ಳಿಗಳಲ್ಲಿ ಅನುಕೂಲ ಪರಿಸ್ಥಿತಿ ಇರುವ ಹಲವೆಡೆ ಇಂಗುಬಾವಿ ನಿರಮಿಸಿ ಪ್ರಯೋಜನ ಪಡೆಯಬಹುದು. ಸೂಕ್ತ ಜಾಗವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಏನೇನೂ ಅಧ್ಯಯನ ಇಲ್ಲದೆ, ಜಾಗ ಸಮೀಕ್ಷೆ ಮಾಡದೆ ಇಂಗುಬಾವಿ ತೋಡುವುದು ಸರಿ ಅಲ್ಲ. ಇಂಗುಬಾವಿಯ ಜಾಗದ ಬಗ್ಗೆ ಆಳ ಅಧ್ಯಯನ ಬೇಕು. ಆ ಜಾಗದ ಮಣ್ಣು ಚೆನ್ನಾಗಿ ನೀರು ಇಂಗಿಸುವಂತಹದು ಆಗಿರಬೇಕು. ಬಾವಿಯ ಗೋಡೆ ಕುಸಿದು ಬೀಳುವಂತಿದ್ದರೆ, ಕೆಳಗಿನಿಂದಲೇ ರಿಂಗ್ ಹಾಕಬೇಕು. ಮೇಲ್ಭಾಗದಲ್ಲಿ ಗಟ್ಟಿಯಾದ ಮುಚ್ಚಳ ಬೇಕು. ಮಕ್ಕಳು ತೆಗೆಯಲು ಆಗದಂತಹ ಮುಚ್ಚಳ. ಇದು ಸುರಕ್ಷತೆಯ ದೃಷ್ಟಿಯಿಂದ ಅಗತ್ಯ.
ಮಳೆ ನೀರ ಚರಂಡಿಯಲ್ಲೇ, ಇಕ್ಕೆಲಗಳಲ್ಲಿ ಎರಡು ಸಣ್ಣ ಕಿವಿಗಳಂತೆ ಸೇರಿಸಿಕೊಂಡು ಇಂಗುಬಾವಿ ಮಾಡಬಹುದಾಗಿದೆ. ರೈನ್ ಬೋ ಡ್ರೈವ್ನಲ್ಲಿ ಮಳೆ ನೀರ ಚರಂಡಿಗಳಲ್ಲೂ ಕೂಡ ಇಂಗುಬಾವಿಯನ್ನು ನಿರ್ಮಿಸಿದ್ದಾರೆ. ಬೆಂಗಳೂರಿನ ಮುನಿಯಪ್ಪ ಆರಂಭದ ದಿನಗಳಲ್ಲಿ ಇಂಗುಬಾವಿಗಳನ್ನು ತೋಡುತ್ತಿದ್ದರು. ಈಗ ಅವರ ಮಗ ಈ ಕೆಲಸ ಮಾಡುತ್ತಿದ್ದಾರೆ.ನೂರಾರು ಮಣ್ಣ ವಡ್ಡರ ಕುಟುಂಬಗಳು ಬೆಂಗಳೂರಲ್ಲಿವೆ. ಇವರು ಇಂಗುಬಾವಿ ನಿಪುಣರು. ಬೆಂಗಳೂರಿನಲ್ಲಿ ಈಗ ಎಷ್ಟರಮಟ್ಟಿಗೆ ಇಂಗುಬಾವಿ ಪ್ರಭಾವ ಬೀರಿದೆ ಎಂದರೆ ಒಂದು ಕಟ್ಟಡ ನಿರ್ಮಾಣವಾಗುವ ಮೊದಲೇ ಅದರ ಪಕ್ಕದಲ್ಲಿ ಒಂದು ಇಂಗುಬಾವಿ ಸಿದ್ಧವಾಗುತ್ತದೆ.
ಇದನ್ನೂ ಓದಿ: ನೀರೆಚ್ಚರದ ಬದುಕು | ನೀರು ಪೋಲು ಮಾಡುವುದೂ ಸಮಾಜದ್ರೋಹ ಅಂತಾರೆ ಶ್ರೀಪಡ್ರೆ
Published On - 2:40 pm, Sun, 28 March 21