ಮೈಸೂರು: 60 ವರ್ಷಕ್ಕೆ ನಿವೃತ್ತಿ ಪಡೆದು ನಂತರದ ದಿನಗಳನ್ನು ಉತ್ಸಾಹವಿಲ್ಲದ ನೀರಸವಾಗಿ ಕಳೆಯು ಮನಸ್ಥಿತಿಗಳೇ ನಮ್ಮಲ್ಲಿ ಅಧಿಕ. ಅದರಲ್ಲೂ ಬಾಳ ಸಂಗಾತಿ ಅಗಲಿದ್ದರೆ ಒಬ್ಬಂಟಿ ಜೀವನ ನಡೆಸುವವರಿಗೆ ನಿವೃತ್ತಿಯ ನಂತರದ ಬದುಕಿನಲ್ಲಿ ಒಂಟಿತನ ಕಾಡಲು ಶುರುವಾಗುವ ಸಂಭವವೂ ಹೆಚ್ಚಿದೆ. ಆದರೆ ಮೈಸೂರಿನ 73 ವಯೋವೃದ್ಧರೋರ್ವರು ಈ ಎಲ್ಲ ಸಾಮಾಜಿಕ ಸ್ಥಾಪಿತ ಮಾದರಿಗಳಿಂದ ಹೊರಬಂದು ಹೊರಬರುವ ಪ್ರಯತ್ನ ನಡೆಸಿದ್ದಾರೆ. ನಿವೃತ್ತಿ ಹೊಂದಿದ ಹಿರಿಯ ಮಹಿಳೆಯೋರ್ವರು ತಮಗೆ ಜೀವನ ಸಂಗಾತಿ ಬೇಕೆಂದು ಜಾಹೀರಾತು ನೀಡಿದ್ದಾರೆ. ಈ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ದೃಷ್ಟಿಕೋನಗಳಲ್ಲಿ ಚರ್ಚೆಯಾಗುತ್ತಿದೆ. ಅವರ ಜೀವನೋತ್ಸಾಹ, ಬದುಕಿನ ಕುರಿತು ಅದಮ್ಯ ಛಲ ಮತ್ತು ಧನಾತ್ಮಕ ಚಿಂತನೆ ಸಾಮಾಜಿಕ ಜಾಲತಾಣಿಗರ ಪ್ರಶಂಸೆಗೆ ಪಾತ್ರವಾಗಿದೆ.
ಜಾಹೀರಾತಿನಲ್ಲಿ ಏನಿದೆ?
ಸರ್ಕಾರಿ ಉದ್ಯೋಗದಿಂದ ನಿವೃತ್ತಿಯಾದ ಬ್ರಾಹ್ಮಣ ಸ್ತ್ರೀಗೆ 73 ವರ್ಷಕ್ಕೂ ಮೇಲ್ಪಟ್ಟ ಆರೋಗ್ಯವಂತ ಬ್ರಾಹ್ಮಣ ವರ ಬೇಕಾಗಿದ್ದಾರೆ ಎಂದು ಖಾಸಗಿ ದಿನಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಲಾಗಿದೆ.
ಸಂಗಾತಿಯ ಅವಶ್ಯಕತೆ
‘ನನ್ನ ಮೊದಲ ಮದುವೆ ಡೈವರ್ಸ್ನಲ್ಲಿ ಅಂತ್ಯಗೊಂಡಿತ್ತು. ಆ ಮದುವೆಯಿಂದ ಉಂಟಾದ ನೋವಿನಿಂದ ಇಷ್ಟು ವರ್ಷ ಮರು ಮದುವೆಯಾಗಲಿಲ್ಲ. ಇದೀಗ ನನ್ನ ತಂದೆ ತಾಯಿ ತೀರಿಕೊಂಡಿದ್ದಾರೆ. ನನಗೆ ಒಂಟಿತನ ಕಾಡುತ್ತಿದೆ. ಮನೆಯಲ್ಲಿ ಒಬ್ಬಳೇ ಇರುವಾಗ ಮನಸ್ಸಿಗೆ ಹೆದರಿಕೆ ಆಗುತ್ತದೆ. ಮನೆಯ ಹತ್ತಿರದ ಬಸ್ಸ್ಟಾಂಡ್ಗೆ ಒಬ್ಬಳೇ ತೆರಳಲು ಹೆದರಿಕೆಯಾಗುತ್ತದೆ. ನಾನಿರುವ ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಜೀವನಕ್ಕೆ ಸಂಗಾತಿಯಾಗಿ ಓರ್ವರ ಅವಶ್ಯಕತೆಯಿದೆ ಅನಿಸಿತು’ ಎಂದು ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಈ ನಿವೃತ್ತ ಮಹಿಳೆ ಸಮಾಜದ ಕಣ್ಣು ತೆರೆಸಿದ್ದಾಳೆ. ಒಬ್ಬರಿಗೆ ಇನ್ನೊಬ್ಬರು ಜತೆಯಾಗಿ ಬದುಕುವ ಕೌಟುಂಬಿಕ ಜೀವನದ ಅವಶ್ಯಕತೆಯನ್ನು ಸಾರಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ, ನಿವೃತ್ತಿಯ ನಂತರ ಎಲ್ಲವೂ ಮುಗಿದುಹೋಯಿತು ಎಂಬುದಕ್ಕಿಂತ ಜೀವನವನ್ನು ಆಗಲೂ ಉತ್ಸಾಹದಿಂದ ಕಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
ಇದೊಂದು ಜಾಹೀರಾತು ಫೇಸ್ಬುಕ್ಕಿನಲ್ಲಿ ಹಾಸ್ಯದ ವಸ್ತುವಾಗಿ ಹರಿದಾಡುತ್ತಿರುವುದನ್ನು ಕಂಡು ಸಂಕಟವಾಯಿತು. ನನ್ನ ಮಾತು ಸ್ವಲ್ಪ ಬಿರುಸಾಗಿದ್ದರೆ…
Posted by Manjunatha Kollegala on Thursday, March 25, 2021
ಈ ಜಾಹೀರಾತಿನ ಕುರಿತು ಕೆಲವರು ವ್ಯಂಗ್ಯ ಮಾಡಿದ್ದರು. ಆದರೆ ವ್ಯಂಗ್ಯ ಹೇಳಿಕೆಗಳ ಮೂಲಕ ಇತರರ ಭಾವನೆಯನ್ನು ಗೇಲಿಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹಲವರು ಟೀಕೆಗಳ ಕುರಿತು ಆಕ್ಷೇಪವ್ಯಕ್ತಪಡಿಸಿದ್ದಾರೆ. ಜತೆಯಾಗಿ ಬದುಕಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಈ ಮಹಿಳೆ ತೋರಿಸಿದ್ದಾರೆ. ಮದುವೆ ಮತ್ತು ಜತೆಯಾಗಿ ಬಾಳುವುದು ವೈಯಕ್ತಿಕ ಇಷ್ಟಗಳನ್ನು ಅವಲಂಬಿಸಿರುತ್ತದೆ. ದೈಹಿಕ ಆಕರ್ಷಣೆ, ಸಂತಾನೋತ್ಪತ್ತಿ ಮಾತ್ರ ಮದುವೆಯ ಉದ್ದೇಶವಲ್ಲ. ಜೀವನದ ಇಳಿಗಾಲದಲ್ಲಿ ನೆಮ್ಮದಿಯನ್ನು ಪಡೆಯಲು ಇಂತಹ ಒಂಟಿಜೀವಿಗಳು ಸಂಗಾತಿ ಹೊಂದುವುದು ಬಹಳ ಮುಖ್ಯ. ಇವರ ನಡೆ ಸಮಾಜಕ್ಕೆ ಮಾದರಿಯಾಗಲಿ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: 365 ಸಾಲುಗಳ ಸುದೀರ್ಘ ಪ್ರೇಮಕವನ ಬರೆದ ಬೆಂಗಳೂರು ನವೋದ್ಯಮಿ
ಇದನ್ನೂ ಓದಿ: ಬಾಂಗ್ಲಾದೇಶದ ಮೊದಲ ಮಂಗಳಮುಖಿ ಸುದ್ದಿ ನಿರೂಪಕಿ ತಶ್ನುವಾ; ಮಹಿಳಾ ದಿನಾಚರಣೆಯಂದೇ ಕೆಲಸ ಪ್ರಾರಂಭ