ಬಾಂಗ್ಲಾದೇಶದ ಮೊದಲ ಮಂಗಳಮುಖಿ ಸುದ್ದಿ ನಿರೂಪಕಿ ತಶ್ನುವಾ; ಮಹಿಳಾ ದಿನಾಚರಣೆಯಂದೇ ಕೆಲಸ ಪ್ರಾರಂಭ
ಶಿಶಿರ್ ನಡೆದು ಬಂದ ದಾರಿ ತುಂಬ ಕಷ್ಟದ್ದಾಗಿತ್ತು. ಬಾಲ್ಯದಿಂದಲೂ ಲೈಂಗಿಕ ದೌರ್ಜನ್ಯ, ಶೋಷಣೆ, ಹಿಂಸೆಯನ್ನು ಅನುಭವಿಸುತ್ತಲೇ ಬಂದರು. 16ನೇ ವಯಸ್ಸಿಗೆ ಮನೆಯನ್ನು ಬಿಟ್ಟರು. ಆದರೆ ಧೈರ್ಯದಿಂದ ವಿದ್ಯಾಭ್ಯಾಸ ಮುಂದುವರಿಸಿದರು.
ಢಾಕಾ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾರ್ಚ್ 18)ಯಂದು ಬಾಂಗ್ಲಾದೇಶದ ಸುದ್ದಿಮಾಧ್ಯಮದ ಕ್ಷೇತ್ರದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ. ಆ ದೇಶದ ಮೊದಲ ತೃತೀಯಲಿಂಗಿ ಸುದ್ದಿ ನಿರೂಪಕಿಯಾಗಿ ತಶ್ನುವಾ ಅನನ್ ಶಿಶಿರ್ ಅವರು ವೃತ್ತಿ ಜೀವನ ಪ್ರಾರಂಭಿಸಿದರು. ಮಾರ್ಚ್ 8ರಂದು ಖಾಸಗಿ ಚಾನೆಲ್ವೊಂದರಲ್ಲಿ ತಮ್ಮ ಮೊದಲ ನ್ಯೂಸ್ ಬುಲೆಟಿನ್ನ್ನು ಪ್ರಸ್ತುತ ಪಡಿಸಿದರು. ಅವರ ಸಂತೋಷದಲ್ಲಿ ಇದೀಗ ಇಡೀ ಜಗತ್ತು ಪಾಲ್ಗೊಂಡಿದೆ. ತಶ್ನುವಾ ಸಾಧನೆಗೆ ಕರತಾಡನ ಮಾಡುತ್ತಿದೆ.
ಬಾಂಗ್ಲಾ ಸುದ್ದಿವಾಹಿನಿ ಬೋಯಿಶಾಖಿಯಲ್ಲಿ ಮಾರ್ಚ್ 8ರಂದು ಸಂಜೆ 4 ಗಂಟೆಗೆ ತಶ್ನುವಾ ತಮ್ಮ ಮೊದಲ ಸುದ್ದಿ ಓದಿದ್ದಾರೆ. ಆನ್ ಏರ್ನಲ್ಲಿ ಮಾತನಾಡುತ್ತ, ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿ ಜನರ ಯೋಚನೆಗಳಿಗೆ ಒಂದು ಹೊಸ ಆಯಾಮವನ್ನೇ ನೀಡಬಹುದು ಎಂದು ಹೇಳಿದ್ದಾರೆ. ತಶ್ನುವಾ ಸುದ್ದಿ ನಿರೂಪಕಿಯಾಗಿ ಆಯ್ಕೆಯಾಗುವುದಕ್ಕೂ ಮೊದಲು ನಟನೆಯಲ್ಲಿ ತೊಡಗಿಕೊಂಡಿದ್ದರು ಹಾಗೂ ಹಕ್ಕುಗಳ ಹೋರಾಟಗಾರ್ತಿಯೂ ಆಗಿದ್ದರು. ಈಕೆಗಿನ್ನೂ 29 ವರ್ಷ.
ಶಿಶಿರ್ ಅವರ ಸುದ್ದಿ ನಿರೂಪಕಿಯಾಗುವ ಆಸೆಗೆ ನೀರೆರೆದಿದ್ದು ಬೋಯಿಶಾಖಿ ನ್ಯೂಸ್ ಚಾನಲ್. ಈ ಮೀಡಿಯಾ ಸಂಸ್ಥೆಯಲ್ಲೇ ಹಲವು ವಾರಗಳಿಂದ ತರಬೇತಿ ಪಡೆಯುತ್ತಿದ್ದ ಶಿಶಿರ್ ಇತ್ತೀಚೆಗೆ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಮಹಿಳಾ ದಿನಾಚರಣೆಯಂದು ಮೂರು ನಿಮಿಷಗಳ ಕಾಲ ಸುದ್ದಿ ಓದಿದ ಇವರು, ನಂತರ ಕಣ್ಣೀರಾಗಿದ್ದಾರೆ.
ಮೊದಲದಿನದ ನ್ಯೂಸ್ ಬುಲೆಟಿನ್ ಮುಗಿಯುತ್ತಿದ್ದಂತೆ ಅವರ ಸಹೋದ್ಯೋಗಿಗಳು ಚಪ್ಪಾಳೆತಟ್ಟಿ ಪ್ರೋತ್ಸಾಹಿಸಿದ್ದಾರೆ. ನಂತರ ಮಾತನಾಡಿದ ಬೋಯಿಶಾಖಿ ಸುದ್ದಿವಾಹಿನಿಯ ಚೀಫ್ ಎಡಿಟರ್ ಟಿಪು ಅಲಾಂ, ಖಂಡಿತ ಇದನ್ನು ಜನರು ಒಪ್ಪಿಕೊಳ್ಳುತ್ತಾರೆಂಬ ಭರವಸೆ ಇದೆ. ಹಾಗೇ, ತೃತೀಯಲಿಂಗಿ ಸಮುದಾಯವನ್ನು ಜನರು ನೋಡುವ ದೃಷ್ಟಿಕೋನ ಬದಲಾಗಲಿದೆ ಎಂಬ ಆಶಯವೂ ಇದೆ ಎಂದು ಹೇಳಿದ್ದಾರೆ.
ನೋವಿನ ದಾರಿ ಶಿಶಿರ್ ನಡೆದು ಬಂದ ದಾರಿ ತುಂಬ ಕಷ್ಟದ್ದಾಗಿತ್ತು. ಬಾಲ್ಯದಿಂದಲೂ ಲೈಂಗಿಕ ದೌರ್ಜನ್ಯ, ಶೋಷಣೆ, ಹಿಂಸೆಯನ್ನು ಅನುಭವಿಸುತ್ತಲೇ ಬಂದರು. 16ನೇ ವಯಸ್ಸಿಗೆ ಮನೆಯನ್ನು ಬಿಟ್ಟರು. ಆದರೆ ಧೈರ್ಯದಿಂದ ವಿದ್ಯಾಭ್ಯಾಸ ಮುಂದುವರಿಸಿದರು. ಇತ್ತೀಚೆಗಷ್ಟೇ ಬಾಂಗ್ಲಾದೇಶದ ಉನ್ನತ ವಿಶ್ವವಿದ್ಯಾಲಯವೊಂದರಲ್ಲಿ ಪಬ್ಲಿಕ್ ಹೆಲ್ತ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸ್ಕಾಲರ್ಶಿಪ್ ಕೂಡ ಪಡೆದಿದ್ದಾರೆ. ಕಷ್ಟಗಳೆನ್ನೆಲ್ಲ ಮೆಟ್ಟಿನಿಂತು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಲು ಸಹಿ ಮಾಡಿದ್ದು, ಶೀಘ್ರವೇ ಬಾಂಗ್ಲಾದೇಶ ಅವರನ್ನು ತೆರೆಯ ಮೇಲೆ ನೋಡಲಿದೆ.
2014ರಲ್ಲಿ ಭಾರತದಲ್ಲಿ ತಮಿಳುನಾಡಿನ ಖಾಸಗಿ ಚಾನೆಲ್ವೊಂದರಲ್ಲಿ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ನಿರೂಪಕಿಯಾಗಿ ಸೇರಿದ್ದರು. ಹಾಗೇ 2018ರಲ್ಲಿ ಪಾಕಿಸ್ತಾನದಲ್ಲೂ ಕೂಡ ಮಂಗಳಮುಖಿಯೊಬ್ಬರು ಸುದ್ದಿಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ.
Published On - 7:23 pm, Mon, 15 March 21