AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ಅಕ್ಸಾ ಶೇಖ್.. ಕೊವಿಡ್ ಲಸಿಕಾ ಕೇಂದ್ರಕ್ಕೆ ಮುಖ್ಯಸ್ಥರಾಗಿರುವ ಏಕೈಕ ತೃತೀಯಲಿಂಗಿ- ಹೆಮ್ಮೆಯೊಂದಿಗೆ ನಿರಾಶೆಯೂ ಇದೆ ಎನ್ನುತ್ತಾರೆ ಈ ವೈದ್ಯೆ

ಭಾರತದ ಕೊವಿಡ್​-19 ಲಸಿಕೆ ವಿತರಣೆ ಅಭಿಯಾನದ ಬಗ್ಗೆ ತುಂಬ ಮೆಚ್ಚುಗೆ ವ್ಯಕ್ತಪಡಿಸಿರುವ ಡಾ. ಅಕ್ಸಾ, ಇದರಲ್ಲಿ ಇನ್ನಷ್ಟು ಸುಧಾರಣೆಯಾಗಬೇಕು ಎಂದೂ ಹೇಳಿದ್ದಾರೆ.

ಡಾ. ಅಕ್ಸಾ ಶೇಖ್.. ಕೊವಿಡ್ ಲಸಿಕಾ ಕೇಂದ್ರಕ್ಕೆ ಮುಖ್ಯಸ್ಥರಾಗಿರುವ ಏಕೈಕ ತೃತೀಯಲಿಂಗಿ- ಹೆಮ್ಮೆಯೊಂದಿಗೆ ನಿರಾಶೆಯೂ ಇದೆ ಎನ್ನುತ್ತಾರೆ ಈ ವೈದ್ಯೆ
ಡಾ. ಅಕ್ಸಾ ಶೇಖ್​
Follow us
Lakshmi Hegde
|

Updated on: Mar 15, 2021 | 4:29 PM

‘ಇಡೀ ದೇಶದಲ್ಲಿ, ಕೊವಿಡ್​-19 ಲಸಿಕಾ ಕೇಂದ್ರಕ್ಕೆ ಮುಖ್ಯಸ್ಥರಾಗಿರುವ ಮೊದಲ ಮತ್ತು ಏಕೈಕ ತೃತೀಯ ಲಿಂಗಿ ನಾನು ಎಂದು ಹೇಳಿಕೊಳ್ಳಬಹುದೇ?’-ಹೀಗೆಂದು ಕೆಲವು ದಿನಗಳ ಹಿಂದೆ ಡಾ. ಅಕ್ಸಾ ಶೇಖ್​ ಟ್ವೀಟ್ ಮಾಡಿಕೊಂಡಿದ್ದರು. ಅಕ್ಸಾ ಶೇಖ್​ ಅವರ ಟ್ವೀಟ್​ ನೋಡಿದ ಪರಿಚಯಸ್ಥರು, ಅಪರಿಚಿತರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಪ್ರೋತ್ಸಾಹದ, ಹೆಮ್ಮೆಯ ಮಾತುಗಳನ್ನೂ ಆಡಿ ಬೆನ್ನುತಟ್ಟಿದ್ದಾರೆ. ಅಷ್ಟಕ್ಕೂ ಇದು ನಿಜವಾಗಿಯೂ ಹೆಮ್ಮೆ ಪಡುವ ವಿಚಾರವೇ ತಾನೆ? ತೃತೀಯಲಿಂಗಿಗಳತ್ತ ನಿರ್ಲಕ್ಷ್ಯ, ಅಸಡ್ಡೆ ಇನ್ನೂ ಪೂರ್ತಿಯಾಗಿ ಹೋಗಿಲ್ಲ. ಆದರೆ ಈ ಮಧ್ಯೆ ಅವರು ಒಂದೊಂದೇ ಕ್ಷೇತ್ರದಲ್ಲಿ ಹೆಜ್ಜೆ ಊರಿ, ಸಾಧನೆ ಮಾಡುತ್ತಿದ್ದಾರೆ. ಇದೀಗ ಲಸಿಕಾ ಕೇಂದ್ರಕ್ಕೆ ಮುಖ್ಯಸ್ಥರಾಗಿರುವ ಮೊದಲ ಹಾಗೂ ಏಕೈಕ ತೃತೀಯಲಿಂಗಿ ಎಂಬ ಹೆಗ್ಗಳಿಕೆಗೆ ಡಾ. ಅಕ್ಸಾ ಶೇಖ್​ ಪಾತ್ರರಾಗಿದ್ದಾರೆ. ಅಂದಹಾಗೆ ಇವರು ಮುಖ್ಯಸ್ಥರಾಗಿರುವುದು ದೆಹಲಿಯ ಕೊವಿಡ್ 19 ಲಸಿಕಾ ಕೇಂದ್ರವೊಂದಕ್ಕೆ.

ಡಾ. ಅಕ್ಸಾ ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಮೊದಲಿನಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜನವರಿ 16ರಂದು ಮೊದಲ ಲಸಿಕೆ ವಿತರಣೆ ಅಭಿಯಾನ ಪ್ರಾರಂಭಕ್ಕೂ ಪೂರ್ವದಲ್ಲಿ ಇವರು ಹಮದಾರ್ದ್ ಇನ್ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ರಿಸರ್ಚ್​ ಆಸ್ಪತ್ರೆಯಲ್ಲಿ ಸರ್ವೇಕ್ಷಣಾ ಉಸ್ತುವಾರಿಯಾಗಿದ್ದರು. ಸೋಂಕಿತರ ಸಂಖ್ಯೆ, ಕೊರೊನಾದಿಂದ ಸಾವನ್ನಪ್ಪಿದವರು, ಚೇತರಿಸಿಕೊಂಡವರ ಅಂಕಿ-ಸಂಖ್ಯೆ ಸಂಗ್ರಹದ ಜವಾಬ್ದಾರಿಹೊತ್ತಿದ್ದರು. ಇದೀಗ ಹೊಸ ಹೊಣೆಗಾರಿಕೆ ಸಿಕ್ಕಿದ್ದರ ಬಗ್ಗೆ ಡಾ. ಅಕ್ಸಾ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ. ನನ್ನ ಪಾಲಿಗೆ ಇದು ವೈಯಕ್ತಿಕವಾಗಿ ಮತ್ತು ವೃತ್ತಿಯ ದೃಷ್ಟಿಯಿಂದ ತುಂಬ ಹೆಮ್ಮೆಯ ಕ್ಷಣ ಎಂದು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಸಾವಿರಾರು ಲಸಿಕೆ ವಿತರಣಾ ಕೇಂದ್ರಗಳಿವೆ. ಇಷ್ಟೂ ಕೇಂದ್ರಗಳಿಗೆ ನೇಮಕರಾದ ಮುಖ್ಯಸ್ಥರಲ್ಲಿ ತೃತೀಯಲಿಂಗಿ ವೈದ್ಯೆ ನಾನೊಬ್ಬಳೇ. ಇದು ನನಗೆ ಖುಷಿತಂದ ವಿಚಾರವಾದರೂ, ಮನಸಿನ ಮೂಲೆಯಲ್ಲಿ ನಿರಾಶೆಯನ್ನು ತಂದಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಬಂದರೆ ಅಲ್ಲಿ ತೃತೀಯಲಿಂಗಿ ವೈದ್ಯರಾಗಲಿ, ನರ್ಸ್​ಗಳಾಗಲಿ ತುಂಬ ಕಡಿಮೆ ಜನ ಇದ್ದಾರೆ. ಇದು ದೊಡ್ಡ ಕೊರತೆಯಂತೆ ಕಾಣುತ್ತಿದೆ. ಲಿಂಗಪರಿವರ್ತನೆ ಮಾಡಿಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗಾಗಿಯೇ ಪಾನ್​ ಇಂಡಿಯಾ ಎಂಬ ಗುಂಪನ್ನು ನಾವು ರಚಿಸಿಕೊಂಡಿದ್ದೇವೆ. ನಿರಾಶಾದಾಯಕ ವಿಚಾರವೆಂದರೆ ಅದರಲ್ಲಿ ಕೇವಲ 15ಜನರಷ್ಟೇ ಇದ್ದೇವೆ. ತೃತೀಯಲಿಂಗಿಗಳಿಗೆ ಸಾಧನೆಯ ಹಂಬಲವಿದ್ದರೂ ಅದನ್ನು ಸಾಧಿಸುವುದು ಎಷ್ಟು ಕಷ್ಟ ಎಂಬುದಕ್ಕೆ ಇದೊಂದು ಉದಾಹರಣೆಯಂತೆ ಭಾಸವಾಗುತ್ತದೆ ಎಂದು ತಮ್ಮ ನೋವನ್ನೂ ತೋಡಿಕೊಂಡಿದ್ದಾರೆ.

ಮುಂಬೈನಲ್ಲೇ ಹುಟ್ಟಿ-ಬೆಳೆದವರು ಡಾ.ಅಕ್ಸಾ ಶೇಖ್​ ಅವರು ಹುಟ್ಟಿದ್ದು, ಬೆಳೆದಿದ್ದೆಲ್ಲ ಮುಂಬೈನಲ್ಲಿ. ಹುಡುಗನಾಗಿದ್ದಾಗ ಇವರ ಹೆಸರು ಜಾಕೀರ್​ ಹುಸ್ಸೇನ್​ ಎಂದಾಗಿತ್ತು. ಹುಡುಗನಾಗಿ ಜನಿಸಿದ್ದರೂ ಹುಡುಗಿಯಾಗಬೇಕೆಂದು ಮನಸು ತುಡಿಯುತ್ತಿತ್ತು. ವಿದ್ಯಾರ್ಥಿದಿಸೆಯಿಂದಲೂ ಈ ವಿಚಾರದಲ್ಲಿ ಹೋರಾಟ ಮಾಡಿಕೊಂಡೇ ಬಂದಿರುವ ಅಕ್ಸಾ ಕೊನೆಗೂ ಧೈರ್ಯ ಮಾಡಿ ಲಿಂಗಪರಿವರ್ತನೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು. ಆದರೆ ಅದಕ್ಕೆ ಕುಟುಂಬದವರು ಒಪ್ಪಲಿಲ್ಲ. ಎಷ್ಟೇ ಹೇಳಿದರೂ ಅವರು ವಿರೋಧಿಸಿದಾಗ ಶೇಖ್​ 2011ರಲ್ಲಿ ದೆಹಲಿಗೆ ತೆರಳಿದರು. ಅಲ್ಲಿ ಒಂದು ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಹುದ್ದೆ ಸಿಗುವುದು ಕಷ್ಟವಾಗಲಿಲ್ಲ. ಆಗಿನ್ನೂ ಲಿಂಗಪರಿವರ್ತನೆ ಮಾಡಿಕೊಂಡಿರಲಿಲ್ಲ. ನಂತರ 2014ರಲ್ಲಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಲಿಂಗಪರಿವರ್ತನೆ ಸರ್ಜರಿಗೆ ಒಳಪಟ್ಟು, ಜಾಕೀರ್​ನಿಂದ ಅಕ್ಸಾ ಆಗಿ ಬದಲಾದರು. ಅಂದಿನ ದಿನಗಳನ್ನು ನೆನಪಿಸಿಕೊಂಡ ಡಾ. ಅಕ್ಸಾ, ನಾನು ನನ್ನ ಸರ್ಜರಿಗಾಗಿ ಕೇವಲ 14 ದಿನ ರಜಾ ತೆಗೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ. ನಾನು ಒಬ್ಬ ಪುರುಷನಾಗಿ ಪ್ರಾಧ್ಯಾಪಕ ವೃತ್ತಿಗೆ ಸೇರಿಕೊಂಡೆ. 2014ರಲ್ಲಿ ಹೀಗೆ ಮಹಿಳೆಯಾಗಿ ಬದಲಾದೆ. 14 ದಿನ ರಜಾ ಮುಗಿಸಿ ಕಾಲೇಜಿಗೆ ಹೋಗುವಾಗ ಒಂದಷ್ಟು ಗೊಂದಲಗಳು ಮನಸಲ್ಲಿ ಇದ್ದವು. ಆದರೆ ನಾನಂದುಕೊಂಡಷ್ಟು ಕೆಟ್ಟ ಪರಿಸ್ಥಿತಿ ಎದುರಾಗಲಿಲ್ಲ ಎಂದು ಮಾಧ್ಯಮದ ಎದುರು ಹಂಚಿಕೊಂಡಿದ್ದಾರೆ.

ನಾನು ಲಿಂಗ ಪರಿವರ್ತನೆ ಮಾಡಿಕೊಂಡ ಪ್ರಾರಂಭದಲ್ಲಿ ನನ್ನ ಸಹೋದ್ಯೋಗಿಗಳು ಮತ್ತು ಹತ್ತಿರದವರಲ್ಲಿ ಅನೇಕ ರೀತಿಯ ತಪ್ಪುಗ್ರಹಿಕೆಗಳು ಇದ್ದವು. ನನ್ನನ್ನು ನೋಡುವ ದೃಷ್ಟಿಕೋನವೂ ಬದಲಾಗಿತ್ತು. ಆದರೆ ವೃತ್ತಿಯಲ್ಲಿ ಹೆಚ್ಚೆಚ್ಚು ಯಶಸ್ವಿಯಾಗುತ್ತಿದ್ದಂತೆ ಅವರಿಗೆಲ್ಲ ನನ್ನ ಬಗ್ಗೆ ಇದ್ದ ಭಾವನೆಗಳು ಬದಲಾಗುತ್ತ ಹೋಯಿತು. ಆದರೆ ಕುಟುಂಬ ಮಾತ್ರ ನನ್ನನ್ನು ಒಪ್ಪಿಕೊಳ್ಳುತ್ತಿಲ್ಲ. ಮುಂಬೈನಿಂದ ದೆಹಲಿಗೆ ಬಂದ ಮೇಲೆ ಒಂದಿನವೂ ತಿರುಗಿ ನಮ್ಮ ಮನೆಗೆ ಹೋಗಿಲ್ಲ. ಅಮ್ಮ ಅಪರೂಪಕ್ಕೆ ಬಂದು ನನ್ನ ಜತೆ ನೆಲೆಸುತ್ತಿದ್ದರು ಎಂದು ಅಕ್ಸಾ ತಿಳಿಸಿದ್ದಾರೆ.

ವೈಯಕ್ತಿಕ ನೋವುಗಳು ಏನೇ ಇದ್ದರೂ ಅದನ್ನೆಲ್ಲ ವೃತ್ತಿಯಲ್ಲಿ ತೊಡಗಿಕೊಂಡು ಮರೆಯುತ್ತಿರುವ ಡಾ. ಅಕ್ಸಾ, ಈಗಲೂ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್​ ಆಗಿದ್ದಾರೆ. ಅದರೊಟ್ಟಿಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ನಿರ್ಗತಿಕ, ಬಡ ಕುಟುಂಬಗಳು, ವಲಸೆ ಕಾರ್ಮಿಕರಿಗಾಗಿ ಸಹಾಯ ಮಾಡುತ್ತಾರೆ ತಮಗೆ ಸಿಗಬೇಕಾದ ಹಕ್ಕುಗಳ ಬಗ್ಗೆಯೂ ಆಗಾಗ ಬರೆಯುತ್ತಾರೆ.

ಲಸಿಕೆ ಅಭಿಯಾನ ಇನ್ನಷ್ಟು ಸುಧಾರಿಸಬೇಕು ಇನ್ನು ಭಾರತದ ಕೊವಿಡ್​-19 ಲಸಿಕೆ ವಿತರಣೆ ಅಭಿಯಾನದ ಬಗ್ಗೆ ತುಂಬ ಮೆಚ್ಚುಗೆ ವ್ಯಕ್ತಪಡಿಸಿರುವ ಡಾ. ಅಕ್ಸಾ, ಇದರಲ್ಲಿ ಇನ್ನಷ್ಟು ಸುಧಾರಣೆಯಾಗಬೇಕು ಎಂದೂ ಹೇಳಿದ್ದಾರೆ. ಜನರಲ್ಲಿ ಲಸಿಕೆ ಬಗ್ಗೆ ಹಿಂಜರಿಕೆ ಪೂರ್ತಿಯಾಗಿ ಮರೆಯಾಗಿಲ್ಲ. ಅವರಲ್ಲಿ ಅರಿವು ಮೂಡಿಸಲು ಸರ್ಕಾರಗಳು ಇನ್ನಷ್ಟು ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸ್ವಲ್ಪ ಯಾಮಾರಿದ್ರೂ ಅಮಿತಾಭ್​ ಕಣ್ಣು ಕಳೆದುಕೊಳ್ಳಬೇಕಿತ್ತು! ಇದು ಎಲ್ಲರೂ ಎಚ್ಚರಿಕೆ ವಹಿಸಬೇಕಾದ ವಿಷಯ

Justice For Kamaraj: ‘ಕಾಮರಾಜು ಮತ್ತೆ ಕೆಲಸಕ್ಕೆ ನೇಮಕವಾಗುವವರೆಗೂ ಜೊಮ್ಯಾಟೊದಿಂದ ಆರ್ಡರ್​ ಪಡೆಯುವುದಿಲ್ಲ’- ಶುರುವಾಗಿದೆ ಅಭಿಯಾನ