ಸ್ವಲ್ಪ ಯಾಮಾರಿದ್ರೂ ಅಮಿತಾಭ್ ಕಣ್ಣು ಕಳೆದುಕೊಳ್ಳಬೇಕಿತ್ತು! ಇದು ಎಲ್ಲರೂ ಎಚ್ಚರಿಕೆ ವಹಿಸಬೇಕಾದ ವಿಷಯ
ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಕೊಂಚವೇ ವಿಳಂಬ ಮಾಡಿದ್ದರೂ ತಾವು ದೃಷ್ಟಿ ಕಳೆದುಕೊಳ್ಳಬೇಕಾಗುತ್ತಿತ್ತು ಎಂಬ ಅಂಶವನ್ನು ಅವರು ಬಹಿರಂಗಪಡಿಸಿದ್ದಾರೆ.
ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್ ಅವರಿಗೆ ಈಗ 78 ವರ್ಷ ವಯಸ್ಸು. ಈಗಲೂ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹದಿಹರೆಯದ ಹೀರೋಗಳೂ ನಾಚುವಂತೆ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಾಗಂತ ಅವರು ಸಂಪೂರ್ಣ ಆರೋಗ್ಯವಾಗಿದ್ದಾರಾ? ಖಂಡಿತಾ ಇಲ್ಲ. ಅವರೇ ಹೇಳಿಕೊಂಡಿರುವಂತೆ ಹಲವು ಅನಾರೋಗ್ಯ ಸಮಸ್ಯೆಗಳು ಅವರನ್ನು ಭಾದಿಸುತ್ತಿವೆ. ಇತ್ತೀಚೆಗೆ ಅವರ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಕೆಲವೇ ದಿನಗಳ ಹಿಂದೆ ಅವರಿಗೆ ಒಂದು ಕಣ್ಣಿನ ಆಪರೇಷನ್ ಮಾಡಲಾಗಿತ್ತು. ಈಗ ಇನ್ನೊಂದು ಕಣ್ಣಿನ ಆಪರೇಷನ್ ಕೂಡ ಆಗಿದೆ. ಸದ್ಯಕ್ಕೆ ಬಿಗ್-ಬಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಮಸ್ಯೆಯನ್ನು ಸ್ವಲ್ಪವೇ ನಿರ್ಲಕ್ಷ್ಯ ಮಾಡಿದ್ದರೂ ಕೂಡ ಅಮಿತಾಭ್ ದೃಷ್ಟಿ ಕಳೆದುಕೊಳ್ಳಬೇಕಿತ್ತು. ಈ ಮಾತನ್ನು ಸ್ವತಃ ಅವರು ಬಹಿರಂಗ ಪಡಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ತಮ್ಮ ಅನುಭವವನ್ನು ಬಚ್ಚನ್ ಹಂಚಿಕೊಂಡಿದ್ದಾರೆ.
‘ಅದ್ಭುತವಾದ ಈ ಜಗತ್ತಿನ ಬಣ್ಣ, ಗಾತ್ರ, ಆಕಾರವನ್ನು ನೋಡುತ್ತಿದ್ದೇನೆ. ಇಷ್ಟು ದಿನ ಇದನ್ನು ಮಿಸ್ ಮಾಡಿಕೊಂಡಿದ್ದೆ. ಇದು ಜೀವನವನ್ನೇ ಬದಲಾಯಿಸುವಂತಹ ಅನುಭವ. ಡಾ. ಹಿಮಾಂಶು ಮೆಹ್ತಾ ಮತ್ತು ತಂಡದವರು ಆಧುನಿಕ ವೈದ್ಯಕೀಯ ಸೌಲಭ್ಯದಿಂದ ನನ್ನ ಸಮಸ್ಯೆ ಪರಿಹರಿಸಿದರು. ಈ ಸಮಸ್ಯೆಯನ್ನು ಸ್ವಲ್ಪವೇ ನಿರ್ಲಕ್ಷಿಸಿದ್ದರೂ ಕೂಡ ದೃಷ್ಟಿ ಕಳೆದುಕೊಳ್ಳಬೇಕಾಗುತ್ತಿತ್ತು. ಹಾಗಾಗಿ ಎಲ್ಲರಿಗೂ ನನ್ನ ಸಲಹೆ ಏನೆಂದರೆ, ತುಂಬ ತಡವಾಗುವುದಕ್ಕೂ ಮುನ್ನವೇ ಕಣ್ಣಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ’ ಎಂದು ತಮ್ಮ ಬ್ಲಾಗ್ನಲ್ಲಿ ಅಮಿತಾಭ್ ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೆ ಅವರು ಸಲಹೆ ನೀಡಿದ್ದಾರೆ.
ಅಮಿತಾಭ್ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ. ಅವರ ಲಿವರ್ ಕೆಲಸ ಮಾಡುತ್ತಿರುವುದು ಶೇ.25ರಷ್ಟು ಮಾತ್ರ. ಹಾಗಿದ್ದರೂ ಕೂಡ ಅವರು ಸಿನಿಮಾ ಚಟುವಟಿಕೆಗಳಲ್ಲಿ ತುಂಬ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
T 3842 – .. and the 2nd one has gone well .. recovering now .. all good .. the marvels of modern medical technology and the dexterity of dr HM ‘s hands .. life changing experience .. You see now what you were not seeing before .. surely a wonderful world !!
— Amitabh Bachchan (@SrBachchan) March 14, 2021
ಚೆಹ್ರೇ, ಜುಂಡ್, ಬ್ರಹ್ಮಾಸ್ತ್ರ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದು ಈ ವರ್ಷವೇ ಬಿಡುಗಡೆ ಆಗಲಿವೆ. ಕಳೆದ ವರ್ಷ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಹಲವು ದಿನಗಳ ಕಾಲ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅವರು ಗುಣಮುಖರಾಗಿದ್ದರು. ಅಷ್ಟರಲ್ಲಿಯೇ ಕಣ್ಣಿನ ಸಮಸ್ಯೆ ಎದುರಾಯಿತು.
ಇದನ್ನೂ ಓದಿ: ‘ಅನಾರೋಗ್ಯ..ಸರ್ಜರಿ’: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪೋಸ್ಟ್ ನೋಡಿ ಅಭಿಮಾನಿಗಳಲ್ಲಿ ಆತಂಕ