- Kannada News Photo gallery Cricket photos 8 players who missed out on India's squad for England series
ಟೀಮ್ ಇಂಡಿಯಾದಿಂದ 8 ಆಟಗಾರರು ಔಟ್
India Squad For England Test Series: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಿಗೆ ಯುವ ಪಡೆಗಳನ್ನು ಒಳಗೊಂಡ 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.
Updated on: May 25, 2025 | 9:57 AM

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಹೆಸರಿಸಲಾಗಿದೆ. 18 ಸದಸ್ಯರುಗಳ ಈ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಕಾಣಿಸಿಕೊಳ್ಳಲಿರುವುದು ರಿಷಭ್ ಪಂತ್. ಅಂದರೆ ಇದೇ ಮೊದಲ ಬಾರಿಗೆ ಇಬ್ಬರು ಯುವ ಆಟಗಾರರಿಗೆ ಭಾರತ ಟೆಸ್ಟ್ ತಂಡದ ಚುಕ್ಕಾಣಿ ನೀಡಲಾಗಿದೆ.

ಇದಕ್ಕೂ ಮುನ್ನ ಭಾರತ ಟೆಸ್ಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಹಾಗೂ ಉಪನಾಯಕನಾಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿನ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅದರಂತೆ ಕಳೆದ ಬಾರಿ ಟೆಸ್ಟ್ ತಂಡದಲ್ಲಿದ್ದ 8 ಆಟಗಾರರು ಈ ಬಾರಿ ಸ್ಥಾನ ಪಡೆದಿಲ್ಲ. ಅವರೆಂದರೆ...

ದೇವದತ್ ಪಡಿಕ್ಕಲ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಕಾಣಿಸಿಕೊಂಡಿದ್ದರು. ಆದರೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಡಿಕ್ಕಲ್ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ಸರ್ಫರಾಝ್ ಖಾನ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಭಾರತ ತಂಡದ ಭಾಗವಾಗಿದ್ದ ಸರ್ಫರಾಝ್ ಖಾನ್ ಅವರನ್ನು ಸಹ ತಂಡದಿಂದ ಕೈ ಬಿಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸರ್ಫರಾಝ್ ಬೆಂಚ್ ಕಾದಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಿಲ್ಲ ಎಂಬುದೇ ಅಚ್ಚರಿ.

ಹರ್ಷಿತ್ ರಾಣಾ; ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿಯಾಗಿ ಹರ್ಷಿತ್ ರಾಣಾ ಕಾಣಿಸಿಕೊಂಡಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ 18 ಸದಸ್ಯರಲ್ಲಿ ಹರ್ಷಿತ್ಗೆ ಸ್ಥಾನ ನೀಡಲಾಗಿಲ್ಲ.

ತನುಷ್ ಕೋಟ್ಯಾನ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಮುಂಬೈನ ಸ್ಪಿನ್ ಆಲ್ರೌಂಡರ್ ತನುಷ್ ಕೋಟ್ಯಾನ್ ಆಯ್ಕೆಯಾಗಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ತನುಷ್ ವಿಫಲರಾಗಿದ್ದಾರೆ.

ಮೊಹಮ್ಮದ್ ಶಮಿ: ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಸಹ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪರಿಗಣಿಸಲಾಗಿಲ್ಲ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು 5 ಪಂದ್ಯಗಳ ಈ ಸರಣಿಯಿಂದ ಕೈ ಬಿಡಲು ಆಯ್ಕೆ ಸಮಿತಿ ನಿರ್ಧರಿಸಿದೆ.

ರವಿಚಂದ್ರನ್ ಅಶ್ವಿನ್: ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ನಡುವೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅಶ್ವಿನ್ ಅವರನ್ನು ಪರಿಗಣಿಸಲಾಗಿಲ್ಲ.

ರೋಹಿತ್ ಶರ್ಮಾ: ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಕೆಲ ದಿನಗಳ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸಲಾಗಿಲ್ಲ.

ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಕೆಲ ದಿನಗಳ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಹೀಗಾಗಿ ಅವರನ್ನು ಸಹ ಆಯ್ಕೆಗೆ ಪರಿಗಣಿಸಲಾಗಿಲ್ಲ. ಹೀಗಾಗಿ ಈ ಬಾರಿಯ ಇಂಗ್ಲೆಂಡ್ ಸರಣಿಯಲ್ಲಿ ಯುವ ಆಟಗಾರರು ಕಣಕ್ಕಿಳಿಯಲಿದ್ದಾರೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್.









