ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್; ವಿಡಿಯೋ ವೈರಲ್
T20 World Cup 2026 Trophy Controversy: 2026ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಟ್ರೋಫಿಯನ್ನು ದೇವಾಲಯಕ್ಕೆ ಕೊಂಡೊಯ್ದದ್ದು ವಿವಾದಕ್ಕೆ ಕಾರಣವಾಗಿದೆ. ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಬಿಸಿಸಿಐ ನಡೆಯನ್ನು ಪ್ರಶ್ನಿಸಿದ್ದರು. ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿಶ್ವಕಪ್ ಹೀರೋ ಇಶಾನ್ ಕಿಶನ್ ಕೆರಳಿ, "ನಾವು ಅದ್ಭುತ ವಿಶ್ವಕಪ್ ಗೆದ್ದಿದ್ದೇವೆ, ಉತ್ತಮ ಪ್ರಶ್ನೆಗಳನ್ನು ಕೇಳಿ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದ ತಕ್ಷಣವೇ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಬಳಿಯ ಹನುಮಾನ್ ತೇಕ್ರಿ ದೇವಸ್ಥಾನಕ್ಕೆ ಟ್ರೋಫಿಯೊಂದಿಗೆ ಭೇಟಿ ನೀಡಿದ್ದರು. ಟ್ರೋಫಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್, ಬಿಸಿಸಿಐನ ಈ ನಡೆಯನ್ನು ಪ್ರಶ್ನಿಸಿದ್ದರು. ಇದೀಗ ಆ ಬಗ್ಗೆ ಇಶಾನ್ ಕಿಶನ್ ಬಳಿ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಕೇಳುತ್ತಿದ್ದಂತೆ ಕೆರಳಿರುವ ಇಶಾನ್ ಕಿಶನ್ ಪತ್ರಕರ್ತರ ಮೇಲೆ ಹರಿಹಾಯ್ದಿದ್ದಾರೆ.
ಟೀಂ ಇಂಡಿಯಾದ ನಡೆಗೆ ಅಸಮಾಧಾನ ಹೊರಹಾಕಿದ್ದ ಕೀರ್ತಿ ಆಜಾದ್, ಆಟ ಮತ್ತು ಟ್ರೋಫಿ ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ, ಬದಲಾಗಿ ಇಡೀ ರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳಿದ್ದರು. ಇದೀಗ ಈ ವಿವಾದದ ಬಗ್ಗೆ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಬಳಿ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅಸಮಾಧಾನದಿಂದಲೇ ಉತ್ತರಿಸಿರುವ ಕಿಶನ್, ‘ನಾವು ಅದ್ಭುತವಾದ ವಿಶ್ವಕಪ್ ಗೆದ್ದಿದ್ದೇವೆ. ನೀವು ಕೆಲವು ಒಳ್ಳೆಯ ಪ್ರಶ್ನೆಗಳನ್ನು ಕೇಳಬೇಕು. ಕೀರ್ತಿ ಆಜಾದ್ ಹೇಳಿರುವುದರ ಬಗ್ಗೆ ನಾನು ಈಗ ಏನು ಹೇಳಬೇಕು?’ ಎಂದು ಪತ್ರಕರ್ತರ ಮೇಲೆಯೇ ಗರಂ ಆದರು.
2026 ರ ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್ ಕಿಶನ್, ಒಂಬತ್ತು ಪಂದ್ಯಗಳಲ್ಲಿ 35.22 ರ ಸರಾಸರಿಯಲ್ಲಿ 317 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಕಲೆಹಾಕಿದ ಎರಡನೇ ಆಟಗಾರ ಎನಿಸಿಕೊಂಡರು. ಇದರಲ್ಲಿ ಮೂರು ಅರ್ಧಶತಕಗಳು ಸೇರಿದ್ದವು. ಇನ್ನು ಫೈನಲ್ ಪಂದ್ಯದಲ್ಲಿ ಕಿಶನ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

