ಬೆಂಗಳೂರು: ಕೊನೆಗೂ ತಾವಿದ್ದ ಕಾವೇರಿ ನಿವಾಸವನ್ನ ಖಾಲಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಮನೆ ಖಾಲಿ ಮಾಡಿ ಹೊಸ ಮನೆ ಪ್ರವೇಶಿಸಲಿದ್ದಾರೆ. ಈ ಹಿಂದೆ ಮಾಜಿ ಸಚಿವ ಹೆಚ್.ಡಿ ರೇವಣ್ಣರಿದ್ದ ಗಾಂಧಿ ಭವನದ ಹಿಂಭಾಗದಲ್ಲಿರುವ ನಿವಾಸಕ್ಕೆ ಇದೀಗ ಸಿದ್ದರಾಮಯ್ಯ ಮನೆ ಪ್ರವೇಶಿಸಲು ಮುಂದಾಗಿದ್ದಾರೆ.
ನೂತನ ಮನೆಗೆ ಪ್ರವೇಶಿಸಲಿರುವ ಹಿನ್ನೆಲೆ ಈಗಾಗಲೇ ಮನೆಗೆ ಸುಣ್ಣ ಬಣ್ಣ ಹೊಡೆದು ಸಿದ್ಧಮಾಡಲಾಗಿದೆ. ಸಿಬ್ಬಂದಿ ಇಂದು ಮನೆ ಬಾಗಿಲಿಗೆ ಹೂ ಕಟ್ಟಿ ಪೂಜೆ ನೆರವೇರಿಸಿದ್ದಾರೆ. ಸಿದ್ದರಾಮಯ್ಯ ಕುಟುಂಬಸ್ಥರು ಮನೆ ಪ್ರವೇಶಕ್ಕೂ ಮುನ್ನ ಆರ್ಚಕರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ಇಂದು ಪೂಜೆ ನೆರವೇರಿದ್ದು, ಇನ್ನೆರಡು ದಿನಗಳಲ್ಲಿ ಹೊಸ ಮನೆಗೆ ಬರಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ಸಿಎಂ ಯಡಿಯೂರಪ್ಪಗೆ ಕಾವೇರಿ ನಿವಾಸವನ್ನ ಬಿಟ್ಟು ಕೊಟ್ಟಿದ್ದಾರೆ. ಸುಮಾರು 6.5 ವರ್ಷಗಳ ಕಾಲ ವಾಸ್ತವ್ಯ ಹೂಡಿದ್ದ ನಿವಾಸ ತೊರೆದು ಹೊಸ ನಿವಾಸಕ್ಕೆ ಗೃಹ ಪ್ರವೇಶ ಮಾಡಲಿದ್ದಾರೆ.
ನೂತನ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಸಿದ್ದು ಗರಂ:
ನೂತನ ನಿವಾಸಕ್ಕೆ ಪೂಜೆಗೆ ಆಗಮಿಸುತ್ತಿದ್ದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ. ಮಾಧ್ಯಮದವರನ್ನ ಗೇಟ್ ಒಳಗಡೆ ಬಿಟ್ಟಿದ್ದಕ್ಕೆ ಸಿದ್ದು ಸಿಡಿಮಿಡಿಗೊಂಡಿದ್ದಾರೆ. ಎಲ್ಲರೂ ಇಲ್ಲಿಂದ ಹೊರಡಿ ಎಂದು ಮಾಧ್ಯಮದವರಿಗೆ ಗದರಿದ್ದಾರೆ.
Published On - 1:10 pm, Wed, 29 January 20