ಮತ್ತೆ ಬಳ್ಳಾರಿ ಏರ್‌ಪೋರ್ಟ್‌ ಜಪ: ರೈತರು ಗಡಗಡ, ಹೋರಾಟಕ್ಕೆ ಸಜ್ಜು

ಮತ್ತೆ ಬಳ್ಳಾರಿ ಏರ್‌ಪೋರ್ಟ್‌ ಜಪ: ರೈತರು ಗಡಗಡ, ಹೋರಾಟಕ್ಕೆ ಸಜ್ಜು

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲೊಂದು ಏರ್‌ಪೋರ್ಟ್‌ ನಿರ್ಮಾಣ ಮಾಡ್ಬೇಕು ಅಂತಾ ರೆಡ್ಡಿ ಸಹೋದರರು ಕನಸು ಕಂಡಿದ್ರು. ರೈತರ ಭಾರಿ ವಿರೋಧದ ನಡುವೆಯೂ ನೂರಾರು ಎಕರೆ ಭೂಮಿ ವಶಪಡಿಸಿಕೊಂಡಿದ್ರು. ಆದ್ರೆ ಆ ಕನಸು ಈಡೇರಿರಲಿಲ್ಲ. ಆದ್ರೀಗ ರೆಡ್ಡಿಯ ಕನಸಿಗೆ ಮತ್ತೆ ಚಾಲನೆ ಸಿಕ್ಕಿದೆ.

ಏರ್‌ಪೋರ್ಟ್‌. ಈ ಪದ ಕೇಳಿದ್ರೆ ಬಳ್ಳಾರಿ ರೈತರು ಗಡಗಡ ನಡುಗಿ ಬಿಡ್ತಾರೆ. ನಿದ್ದೆಯಲ್ಲೇ ಎದ್ದು ಕುಳಿತುಕೊಳ್ತಾರೆ. ಅಷ್ಟಕ್ಕೂ ಇಲ್ಲಿ ವಿಮಾನ ನಿಲ್ದಾಣ ಬರಬೇಕು ಅಂದ್ರೆ ರೈತರ ಭೂಮಿಗಳನ್ನ ನುಂಗಲೇ ಬೇಕು. ಇದೇ ಕಾರಣಕ್ಕೆ ಏರ್‌ಪೋರ್ಟ್‌ ಹೆಸರು ಹೇಳಿದ್ರೆ ಬೆಚ್ಚಿಬೀಳೋ ಬಳ್ಳಾರಿ ರೈತರು, ನಿಲ್ದಾಣ ನಿರ್ಮಾಣದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಬಿಜೆಪಿ ಸರ್ಕಾರದಿಂದ ಮತ್ತೆ ಏರ್‌ಪೋರ್ಟ್‌ ಜಪ ಶುರುವಾಗಿದೆ.

ಬಳ್ಳಾರಿಯಲ್ಲಿ ಮತ್ತೆ ಏರ್‌ಪೋರ್ಟ್‌ ಜಪ!
ಹೌದು.. ಗಣಿನಾಡು ಬಳ್ಳಾರಿ ತಾಲೂಕಿನ ಚಾಗನೂರು-ಸಿರವಾರ ಗ್ರಾಮಗಳ ರೈತರ ಭೂಮಿಯಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡಲು 2009 ರಲ್ಲೇ ಸಿದ್ದತೆಯಾಗಿತ್ತು. ಅಂದಿನ ಸರ್ಕಾರ 900 ಎಕರೆ ಕೃಷಿ ಜಮೀನನ್ನ ಬಲವಂತವಾಗಿ ವಶಪಡಿಸಿಕೊಳ್ಳಲು ಮುಂದಾಗಿತ್ತು. ಆಗ ರೈತರು ಭಾರಿ ವಿರೋಧ ವ್ಯಕ್ತಪಡಿಸಿದಾಗ ಅಂತಿಮವಾಗಿ 780 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಈ ನಡುವೆ ಕೆಲ ರೈತರು ಹೈಕೋರ್ಟ್‌ ಮೊರೆ ಹೋಗಿದ್ರು. ಇದ್ರಿಂದ 26 ರೈತರ 80 ಎಕರೆ ಭೂಮಿಯ ನೋಟಿಫಿಕೇಷನ್ ರದ್ದಾಗಿತ್ತು . ಈಗ ಈ ಭೂಮಿಯ ಮೇಲೆ ಕಣ್ಣಾಕಿರೋ ಸರ್ಕಾರ, ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ವಿಮಾನ ನಿಲ್ದಾಣದ ಬಗ್ಗೆ ಕೆಎಸ್‌ಐಡಿಎಲ್‌ ಸರ್ಕಾರಕ್ಕೆ ವರದಿ ನೀಡಿದೆ. ಏರ್‌ಪೋರ್ಟ್‌ ಇಲ್ಲವೇ ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಸಜ್ಜಾಗಿದೆ.

ಇನ್ನು ಬಳ್ಳಾರಿಯಲ್ಲಿ ಗಣಿ ಉದ್ಯಮ, ಜಿನ್ಸ್‌ ಉದ್ಯಮ ಹೆಚ್ಚಿರೋ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರು ವಿಮಾನ ನಿಲ್ದಾಣಕ್ಕೆ ಮುಂದಾಗಿದ್ದರು. ಆದ್ರೆ ಇಲ್ಲಿ ನೀರಾವರಿ ಪ್ರದೇಶವಿದ್ದು, ವರ್ಷಕ್ಕೆ 2 ಬೆಳೆ ಬೆಳೆಯೋ ರೈತರು ಭೂಮಿ ಕೊಡಲು ನಿರಾಕರಿಸಿದ್ದರು. ಈಗ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ಬಳ್ಳಾರಿ ವಿಮಾನ ನಿಲ್ದಾಣ ವಿಚಾರ ಚಿಗುರೊಡೆದಿದೆ. ಆದ್ರೆ ರೈತರು ಮಾತ್ರ ಕೃಷಿ ಜಮೀನಿನಲ್ಲಿ ನಿಲ್ದಾಣವಾಗಲು ಬಿಡೋದಿಲ್ಲ ಅಂತಿದ್ದಾರೆ.

ಒಟ್ನಲ್ಲಿ ಹಿಂದೆ ಏರ್‌ಪೋರ್ಟ್‌ ನಿರ್ಮಾಣಕ್ಕೆ ಮುಂದಾದಾಗ ಭಾರಿ ವಿರೋಧ ವ್ಯಕ್ತಪಡಿಸಿದ್ದ ರೈತರು, ಭೂಮಿ ವಾಪಸ್‌ ಪಡೆಯುವಲ್ಲಿ ಸಕ್ಸಸ್‌ ಆಗಿದ್ರು. ಆದ್ರೆ ಸರ್ಕಾರ ಮತ್ತೆ ಏರ್‌ಪೋರ್ಟ್‌ ನಿರ್ಮಾಣಕ್ಕೆ ಕೈಹಾಕಿದ್ದು, ರೈತರು ಹೋರಾಟಕ್ಕೆ ಸಜ್ಜಾಗ್ತಿದ್ದಾರೆ.