AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ

Auqib Nabi: ಜಮ್ಮು-ಕಾಶ್ಮೀರ ವೇಗಿ ಆಖಿಬ್ ನಬಿ ಕಳೆದ ಎರಡು ರಣಜಿ ಟೂರ್ನಿಗಳ ಮೂಲಕ ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 104, ಅದು ಸಹ ಕೇವಲ 18 ಪಂದ್ಯಗಳ ಮೂಲಕ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಈ ಬಾರಿ ಜಮ್ಮು-ಕಾಶ್ಮೀರ ತಂಡ ರಣಜಿ ಟೂರ್ನಿಯಲ್ಲಿ ಚಾಂಪಿಯನ್ ಆಗಲು ಮುಖ್ಯ ಕಾರಣ ಆಖಿಬ್ ನಬಿ.

ಟೀಮ್ ಇಂಡಿಯಾಗೆ ಆಯ್ಕೆ ಮಾಡಿ... ಸೌರವ್ ಗಂಗೂಲಿ ಮನವಿ
Auqib Nabi - Sourav Ganguly
ಝಾಹಿರ್ ಯೂಸುಫ್
|

Updated on:Mar 03, 2026 | 10:15 AM

Share

ಜಮ್ಮು-ಕಾಶ್ಮೀರ ತಂಡದ ವೇಗಿ ಆಖಿಬ್ ನಬಿ (Auqib Nabi) ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವಂತೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸೂಚಿಸಿದ್ದಾರೆ. 2025-26ರ ದೇಶೀಯ ಕ್ರಿಕೆಟ್ ಸೀಸನ್​ನಲ್ಲಿ ನಬಿ ಅವರ ಅದ್ಭುತ ಪ್ರದರ್ಶನವನ್ನು ಕೊಂಡಾಡಿರುವ ಗಂಗೂಲಿ, ಅವರ ಆಯ್ಕೆಗೆ ಇದು ಸೂಕ್ತವಾದ ಸಮಯ ಎಂದಿದ್ದಾರೆ.

2025-26ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ಆಖಿಬ್ ನಬಿ 5 ವಿಕೆಟ್ ಪಡೆದಿದ್ದರು. ಅಲ್ಲದೆ ಚೊಚ್ಚಲ ಬಾರಿ ಜಮ್ಮು-ಕಾಶ್ಮೀರ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಬೆನ್ನಲ್ಲೇ ನಬಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವಂತೆ ಗಂಗೂಲಿ ಸೂಚಿಸಿದ್ದಾರೆ.

ಆಖಿಬ್ ನಬಿ ಶೀಘ್ರದಲ್ಲೇ ಟೀಮ್ ಇಂಡಿಯಾ ಪರ ಆಡಲಿದ್ದಾರೆ ಎಂಬ ವಿಶ್ವಾಸವಿದೆ. ಜುಲೈ 2026ರ ಇಂಗ್ಲೆಂಡ್ ಪ್ರವಾಸಕ್ಕೆ ಇವರು ಅತ್ಯಂತ ಸೂಕ್ತ ಬೌಲರ್. ಇಂಗ್ಲೆಂಡ್‌ನಂತಹ ಸ್ವಿಂಗ್ ಪೂರಕ ಪರಿಸ್ಥಿತಿಗಳಲ್ಲಿ ಚೆಂಡನ್ನು ಎರಡೂ ಕಡೆ ಮೂವ್ ಮಾಡುವ ನಬಿ ಅವರ ಕಲೆ ಭಾರತ ತಂಡಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಕಠಿಣ ಪರಿಸ್ಥಿತಿಗಳಿಂದ ಬಂದ ನಬಿ ಅವರು ಅಷ್ಟೇ ಕಠಿಣವಾಗಿ ಪರಿಶ್ರಮ ಪಟ್ಟಿದ್ದಾರೆ. ಇದೀಗ ಅದ್ಭುತ ಲಯದಲ್ಲಿರುವ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡುವುದು ಸೂಕ್ತ. ಅವರ ಇಂಗ್ಲೆಮಡ್​ನ ಸ್ವಿಂಗ್ ಪೂರಕ ಪಿಚ್​ಗಳಲ್ಲಿ ಅತ್ಯುತ್ತಮ ದಾಳಿ ಸಂಘಟಿಸಬಲ್ಲರು ಎಂದು ಗಂಗೂಲಿ ಹೇಳಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆಖಿಬ್ ನಬಿ ಅವರ ಪ್ರದರ್ಶನವನ್ನು ‘ಅಪ್ರತಿಮ ಚಾಂಪಿಯನ್’ ಎಂದು ಬಣ್ಣಿಸಿದ್ದರು. ಹಾಗೆಯೇ ರವಿಚಂದ್ರನ್ ಅಶ್ವಿನ್ ಅವರ ಕಳೆದ ಕೆಲ ತಿಂಗಳುಗಳಿಂದ ನಬಿ ಅವರ ಪ್ರದರ್ಶನವನ್ನು ಕೊಂಡಾಡುತ್ತಾ ಬಂದಿದ್ದಾರೆ.

ಅದರಲ್ಲೂ ಆಖಿಬ್ ನಬಿ ಅವರ ಪ್ರದರ್ಶನವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಶ್ವಿನ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಇದರ ಫಲವಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆಖಿಬ್ ನಬಿ ಬರೋಬ್ಬರಿ 8.40 ಕೋಟಿ ರೂ.ಗೆ ಹರಾಜಾಗಿದ್ದರು. ಅದರಂತೆ ಮುಂಬರುವ ಐಪಿಎಲ್​ನಲ್ಲಿ ಆಖಿಬ್ ನಬಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಇದೀಗ ನಬಿ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೂ ಆಯ್ಕೆ ಮಾಡುವಂತೆ ಟೀಮ್ ಇಂಡಿಯಾದ ಯಶಸ್ವಿ ನಾಯಕರುಗಳಲ್ಲಿ ಒಬ್ಬರೆನಿಸಿಕೊಂಡಿರುವ ಸೌರವ್ ಗಂಗೂಲಿ ಸೂಚಿಸಿದ್ದಾರೆ. ಹೀಗಾಗಿ ನಬಿ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕರೂ ಅಚ್ಚರಿಪಡಬೇಕಿಲ್ಲ.

ಆಖಿಬ್ ನಬಿ ಅವರ 2025-26ರ ಸಾಧನೆಗಳು:

  • ಅತಿ ಹೆಚ್ಚು ವಿಕೆಟ್: ರಣಜಿ ಟ್ರೋಫಿ 2025-26ರ ಸೀಸನ್​ನಲ್ಲಿ ಕೇವಲ 10 ಪಂದ್ಯಗಳಲ್ಲಿ 60 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
  • ದಾಖಲೆಯ ಬೌಲಿಂಗ್: ಒಂದೇ ರಣಜಿ ಋತುವಿನಲ್ಲಿ 7 ಬಾರಿ ‘ಐದು ವಿಕೆಟ್‌ಗಳ ಗೊಂಚಲು’ ಪಡೆದು ಹೊಸ ದಾಖಲೆ ಬರೆದಿದ್ದಾರೆ.
  • 104 ವಿಕೆಟ್ಸ್​: ಆಖಿಬ್ ನಬಿ ಕಳೆದ 2 ರಣಜಿ ಟೂರ್ನಿಗಳ ಮೂಲಕ ಮೂಲಕ ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 104. ಅದು ಸಹ ಕೇವಲ 18 ಪಂದ್ಯಗಳ ಮೂಲಕ.

ಇದನ್ನೂ ಒದಿ: ಇಂಡಿಯಾ ಸೋತರೆ… ಅಮೀರ್ ಗೆ ಸವಾಲಾಕಿದ ಪಾಕ್ ಕ್ರಿಕೆಟಿಗ

ಹೀಗಾಗಿಯೇ ಅದ್ಭುತ ಲಯದಲ್ಲಿರುವ ನಬಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕೆಂದು ಸೌರವ್ ಗಂಗೂಲಿ ಸೂಚಿಸಿದ್ದಾರೆ. ಇತ್ತ ದಾದಾ ಕಡೆಯಿಂದ ಪ್ರಶಂಸೆ ಪಡೆದಿರುವ ಆಖಿಬ್ ನಬಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Published On - 10:13 am, Tue, 3 March 26

Follow Us