ಬೆಂಗಳೂರು: ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ ಪರಿಹಾರ ನೀಡಿ ಎಂದು ರಾಜ್ಯದ ಮುಖ್ಯಮಂತ್ರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆಶಾ ಕಾರ್ಯಕರ್ತೆಯರು ನೇರವಾಗಿ ರೋಗಿಗಳ ಸಂಪರ್ಕದಲ್ಲಿರುತ್ತಾರೆ. ಅವರಿಗೆ ಮಾಸ್ಕ್, ಸ್ಯಾನಿಟೈಸರ್, ಅಗತ್ಯ ಔಷಧಗಳು ಮುಂತಾದವುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದ ಸಿದ್ದರಾಮಯ್ಯ, ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಸಿಬ್ಬಂದಿಗಳಲ್ಲಿ ಹಲವರು ಮರಣ ಹೊಂದಿದ್ದಾರೆ. ಅವರಲ್ಲಿ ಬಹುತೇಕರ ಕುಟುಂಬಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಅವರೆಲ್ಲರಿಗೂ ಕೂಡಲೇ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.
ಸಿಬ್ಬಂದಿಗಳಿಗೆ ಮಾರ್ಚ್ ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ತಾಂತ್ರಿಕ ಕಾರಣಗಳನ್ನು ನೀಡಿ ಕೊರೊನಾ ಕಾಲದಲ್ಲೂ ಸಂಬಳ ನೀಡದಿರುವುದು ಅತ್ಯಂತ ಅಮಾನವೀಯ. ಕೂಡಲೇ ಎಲ್ಲರಿಗೆ ಸಂಬಳ ಬಿಡುಗಡೆ ಮಾಡಬೇಕು. ಪಲ್ಸ್ ಆಕ್ಸಿಮೀಟರ್ನಂಥಹ ಅತ್ಯಂತ ಅಗತ್ಯ ಸಾಮಗ್ರಿಗಳನ್ನು ಒಂದು ಪಂಚಾಯತಿ/ ಒಬ್ಬರು ಆಶಾ ಕಾರ್ಯಕರ್ತೆಗೆ ಕೇವಲ ಒಂದೊಂದನ್ನು ಮಾತ್ರ ನೀಡಲಾಗಿದೆ. ಹೀಗೆ ಮಾಡುವುದರಿಂದಲೂ ಸೋಂಕು ಹಬ್ಬಲು ಕಾರಣವಾಗಬಹುದು. ಆದ್ದರಿಂದ ಇಂಥ ಸಾಮಾನ್ಯ ಸಂಗತಿಗಳನ್ನು ವೈಜ್ಞಾನಿಕವಾಗಿ ಅಂದಾಜು ಮಾಡಿ ಸಾಮಗ್ರಿಗಳನ್ನು ಕೊವಿಡ್ ವಾರಿಯರ್ಸ್ಗಳಗೆ ಒದಗಿಸಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸೂಕ್ತವಾದ, ಗೌರವಯುತವಾದ ಸಂಬಳ, ಗೌರವಧನ, ಸಂಭಾವನೆಯನ್ನು ಹೆಚ್ಚಿಸಬೇಕು. ಕೊರೊನಾದಂಥ ಮಾರಣಾಂತಿಕ ಸೋಂಕನ್ನು ನಿಭಾಯಿಸುವಲ್ಲಿ ಮಾನವ ಸಂಪನ್ಮೂಲದ ಪಾತ್ರ ಬಹಳ ದೊಡ್ಡದು. ಅವರುಗಳನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಬೇಕಾದುದು ಸರ್ಕಾರದ ಜವಾಬ್ದಾರಿ ಎಂದು ಭಾವಿಸಿ ಕೂಡಲೇ ಈಡೇರಿಸಬೇಕೆಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಹೆಂಡತಿಗೆ ಸೋಂಕು ಬಂದು ಆಸ್ಪತ್ರೆಗೆ ಶಿಫ್ಟ್.. ಭಯದಿಂದ ಜಮೀನಿನಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
(Siddaramaiah wrote a letter to Karnataka Chief Minister demanding relief for the families of Asha activists)