ಇನ್ಮುಂದೆ ಉತ್ತರ ಕೊರಿಯಾದಲ್ಲಿ ಬೆಕ್ಕು ಕೂಗೋದಿಲ್ಲ, ಪಾರಿವಾಳ ಹಾರೋದಿಲ್ಲ; ಕೊರೊನಾ ನಿಯಂತ್ರಣಕ್ಕೆ ಕಿಮ್​ ಜಾಂಗ್​ ಉನ್ ಹೊಸ ಆದೇಶ

ಬೆಕ್ಕು ಮತ್ತು ಪಾರಿವಾಳಗಳು ಕೊರೊನಾ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಚೀನಾದಿಂದ ಉತ್ತರ ಕೊರಿಯಾಕ್ಕೆ ಕೊರೊನಾ ವೈರಾಣುಗಳನ್ನು ಹೊತ್ತು ತರುತ್ತಿವೆ ಎಂಬ ಸಂದೇಹದ ಮೇರೆಗೆ 37 ವರ್ಷದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವುಗಳನ್ನು ಸಾಯಿಸುವಂತೆ ಆದೇಶಿಸಿದ್ದಾರೆ.

ಇನ್ಮುಂದೆ ಉತ್ತರ ಕೊರಿಯಾದಲ್ಲಿ ಬೆಕ್ಕು ಕೂಗೋದಿಲ್ಲ, ಪಾರಿವಾಳ ಹಾರೋದಿಲ್ಲ; ಕೊರೊನಾ ನಿಯಂತ್ರಣಕ್ಕೆ ಕಿಮ್​ ಜಾಂಗ್​ ಉನ್ ಹೊಸ ಆದೇಶ
ಕಿಮ್​ ಜಾಂಗ್​ ಉನ್​
Follow us
Skanda
|

Updated on: May 29, 2021 | 12:33 PM

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್​ ತನ್ನ ವಿಚಿತ್ರ ಕಾರ್ಯಶೈಲಿ, ಧೋರಣೆಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ತನ್ನಂತೆ ದೇಶದ ಪುರುಷರು ಹಾಗೂ ತನ್ನ ಪತ್ನಿಯಂತೆ ದೇಶದ ಮಹಿಳೆಯರು ಕೇಶ ವಿನ್ಯಾಸ ಮಾಡಿಕೊಳ್ಳಬೇಕು, ಉತ್ತರ ಕೊರಿಯಾದ ಪ್ರಜೆಗಳು ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವಂತಿಲ್ಲ, ಹೊರ ದೇಶದ ಸಂಗೀತ ಕೇಳುವಂತಿಲ್ಲ, ಚಲನಚಿತ್ರ ನೋಡುವಂತಿಲ್ಲ, ನೀಲಿ ಬಣ್ಣದ ಜೀನ್ಸ್ ಧರಿಸುವಂತಿಲ್ಲ, ಅಧ್ಯಕ್ಷರ ಹೆಸರನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ ಎಂಬ ವಿಚಿತ್ರ ನಿಯಮಗಳನ್ನೆಲ್ಲಾ ಜಾರಿಗೆ ತಂದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದೀಗ ಕೊರೊನಾ ವಿಚಾರದಲ್ಲೂ ಅಂತಹದ್ದೇ ಒಂದು ನಿಯಮ ಜಾರಿಗೆ ತಂದಿದ್ದು, ಕೊವಿಡ್-19 ತಡೆಗಟ್ಟುವುದಕ್ಕಾಗಿ ಬೆಕ್ಕು ಮತ್ತು ಪಾರಿವಾಳಗಳನ್ನು ನಿರ್ಮೂಲನೆ ಮಾಡಲು ಆದೇಶ ಹೊರಡಿಸಿದ್ದಾರೆ.

ಬೆಕ್ಕು ಮತ್ತು ಪಾರಿವಾಳಗಳು ಕೊರೊನಾ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಚೀನಾದಿಂದ ಉತ್ತರ ಕೊರಿಯಾಕ್ಕೆ ಕೊರೊನಾ ವೈರಾಣುಗಳನ್ನು ಹೊತ್ತು ತರುತ್ತಿವೆ ಎಂಬ ಸಂದೇಹದ ಮೇರೆಗೆ 37 ವರ್ಷದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವುಗಳನ್ನು ಸಾಯಿಸುವಂತೆ ಆದೇಶಿಸಿದ್ದಾರೆ. ಸದರಿ ಆದೇಶದನ್ವಯ ಅಲ್ಲಿನ ಅಧಿಕಾರಿಗಳು ಪಾರಿವಾಳಗಳಿಗೆ ಗುಂಡಿಕ್ಕುತ್ತಿದ್ದು, ಬೆಕ್ಕುಗಳಿಗಾಗಿ ಹುಡುಕಾಡುತ್ತಿದ್ದಾರೆ ಹಾಗೂ ಬೆಕ್ಕುಗಳನ್ನು ವಶಕ್ಕೆ ನೀಡಲು ನಿರಾಕರಿಸುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸುತ್ತಿದ್ದಾರೆ. ಹೈಸನ್​ ಪ್ರದೇಶದಲ್ಲಿ ಬೆಕ್ಕುಗಳನ್ನು ಸಾಕಿದ್ದಕ್ಕಾಗಿ ಒಂದು ಕುಟುಂಬವನ್ನು 20ದಿನಗಳ ಕಾಲ ಐಸೋಲೇಷನ್​ನಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ.

ದೇಶದಲ್ಲಿ ಕೊರೊನಾ ಔಷಧಿಯೊಂದನ್ನು ಪಡೆದು ಅಧಿಕಾರಿಯೊಬ್ಬರು ಮೃತಪಟ್ಟ ಬಳಿಕ ಈ ತಿಂಗಳ ಆರಂಭದಿಂದ ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ಚೀನಾ ಮೂಲದ ಔಷಧಿಗಳನ್ನು ನಿಷೇಧಿಸಲಾಗಿದೆ. ಕಿಮ್ ಜಾಂಗ್ ಉನ್​ ಏನೇ ಹೇಳಿದರೂ ಉತ್ತರ ಕೊರಿಯಾ ಪ್ರಜೆಗಳು ಚಾಚೂ ತಪ್ಪದೆ ಪಾಲಿಸಬೇಕಾಗಿರುವುದರಿಂದ ಈಗ ಅಲ್ಲಿ ಪಾರಿವಾಳ ಮತ್ತು ಬೆಕ್ಕುಗಳನ್ನು ಹಿಡಿಯುವುದೇ ಸದ್ಯದ ಮಟ್ಟಿಗೆ ದೊಡ್ಡ ಸುದ್ದಿಯಾಗಿದೆ.

ಕಳೆದ ವಾರವಷ್ಟೇ ನಿಯಮ ಉಲ್ಲಂಘಿಸಿ ಸಂಗೀತ ಹಾಗೂ ಸಿನಿಮಾಗಳನ್ನು ಜನರಿಗೆ ಹಂಚುತ್ತಿದ್ದ ವ್ಯಕ್ತಿಯೊಬ್ಬನನ್ನು ಐನೂರು ಜನರ ಸಮ್ಮುಖದಲ್ಲಿ ಹತ್ಯೆ ಮಾಡಲಾಗಿದೆ. ಆತನನ್ನು ಲೀ ಎಂದು ಗುರುತಿಸಲಾಗಿದ್ದು, ಆತ ಮಾಡುತ್ತಿದ್ದ ಕೃತ್ಯ ಸಮಾಜ ಘಾತುಕ ಎಂದು ಬಣ್ಣಿಸಲಾಗಿದೆ. ಅಲ್ಲದೇ ಆತನನ್ನು ಕೊಲ್ಲುವಾಗ ಅವನ ಕುಟುಂಬದ ಸದಸ್ಯರನ್ನು ಗುಂಪಿನ ಮುಂಭಾಗದಲ್ಲಿ ನಿಲ್ಲುವಂತೆ ಒತ್ತಾಯಿಸಿ ಹತ್ಯೆಯನ್ನು ನೇರವಾಗಿ ತೋರಿಸಲಾಗಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಬರೋಬ್ಬರಿ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್​ ಜಾಂಗ್​ ಉನ್​ ಪತ್ನಿ; ಎಲ್ಲಿ ಹೋಗಿದ್ದರು ರಿ ಸೋಲ್​ ಜು? 

Save Lakshadweep ಲಕ್ಷದ್ವೀಪದಲ್ಲಿ ಬೀಫ್ ನಿಷೇಧ, ಗೂಂಡಾ ಕಾಯ್ದೆ, ಮದ್ಯ ಮಾರಾಟಕ್ಕೆ ಅನುಮತಿ: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಜನರ ಆಕ್ರೋಶ