AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದ್ದು ಮುಚ್ಚಿ ಗಂಡನ ಫೋನ್ ಪರಿಶೀಲಿಸಿದ ಹೆಂಡತಿಗೆ ಒಂದು ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

ಎರಡೂ ಕಡೆಯ ದೂರನ್ನು ಪರಿಶೀಲಿಸಿದ ನ್ಯಾಯಾಲಯ ಪತ್ನಿಯು ಪತಿಯ ಗೌಪ್ಯತೆಗೆ ಭಂಗ ಉಂಟು ಮಾಡಿರುವುದಕ್ಕೆ ಸಾಕ್ಷ್ಯಾಧಾರ ಲಭಿಸಿದೆ. ಹೀಗಾಗಿ ಆಕೆ ಪತಿಗೆ 1,07,585.02 ರೂಪಾಯಿ (Dh 5431) ಪರಿಹಾರ ನೀಡಬೇಕಿದೆ ಎಂದು ತಿಳಿಸಿದೆ.

ಕದ್ದು ಮುಚ್ಚಿ ಗಂಡನ ಫೋನ್ ಪರಿಶೀಲಿಸಿದ ಹೆಂಡತಿಗೆ ಒಂದು ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ
ಸಾಂದರ್ಭಿಕ ಚಿತ್ರ
Skanda
|

Updated on: May 28, 2021 | 1:39 PM

Share

ದುಬೈ: ಸ್ಮಾರ್ಟ್​ಫೋನ್​ ಕೈಗೆ ಸಿಕ್ಕು, ತಂತ್ರಜ್ಞಾನ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾದ ನಂತರ ಗೌಪ್ಯತೆ ಎನ್ನುವುದೇ ಭ್ರಮೆ ಎನ್ನುವಂತಾಗಿದೆ. ನಿತ್ಯದ ವಹಿವಾಟುಗಳಿಂದ ಹಿಡಿದು, ಬದುಕಿನ ಪ್ರತಿ ಕ್ಷಣಗಳನ್ನೂ ಮೊಬೈಲಿನಲ್ಲಿ ದಾಖಲಿಸಿಡುವ ಹುಕಿಯಲ್ಲಿ ನಾವು ನಮ್ಮ ವೈಯಕ್ತಿಕ ವಿವರಗಳನ್ನೆಲ್ಲಾ ತಂತ್ರಜ್ಞಾನದ ಕೈಗೆ ಒಪ್ಪಿಸುತ್ತಿದ್ದೇವೆ. ಒಂದೊಮ್ಮೆ ಆ ಮೊಬೈಲ್ ಕಳೆದು ಹೋದರೆ ಅಥವಾ ಬೇರೆಯವರ ಕೈವಶವಾದರೆ ನಮ್ಮ ಜಾತಕ ಪೂರ್ತಿ ಬೀದಿಗೆ ಬಿದ್ದಂತೆಯೇ ಸರಿ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ನಡೆದ ಘಟನೆಯೊಂದರಲ್ಲಿ ಕದ್ದುಮುಚ್ಚಿ ಪತಿಯ ಮೊಬೈಲ್ ಪರಿಶೀಲಿಸಿದ ಪತ್ನಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಈ ಸುದ್ದಿ ಕೇಳಲು ವಿಚಿತ್ರವೆನಿಸಿದರೂ ಸತ್ಯವಾಗಿದೆ. ದುಬೈನ ರಾಸ್ ಅಲ್ ಖೈಮಾದಲ್ಲಿನ ಸಿವಿಲ್ ಕೋರ್ಟ್​ ಇಂಥದ್ದೊಂದು ತೀರ್ಪು ನೀಡಿದೆ. ಅನುಮತಿ ಇಲ್ಲದೇ ಪತಿಯ ಮೊಬೈಲ್ ಪರಿಶೀಲಿಸಿ ಅದರಲ್ಲಿದ್ದ ಮೆಸೇಜ್​ಗಳನ್ನು ನೋಡಿ, ಫೋಟೋ ಹಾಗೂ ಕೆಲ ರೆಕಾಂರ್ಡಿಂಗ್​ಗಳನ್ನು ಬೇರೆಡೆಗೆ ಕಳುಹಿಸುವ ಮೂಲಕ ಆತನ ಗೌಪ್ಯತೆಗೆ ಭಂಗ ತಂದಿದ್ದಕ್ಕಾಗಿ ನ್ಯಾಯಾಲಯ ದಂಡ ವಿಧಿಸಿದೆ. ಈ ರೀತಿಯ ನಡೆವಳಿಕೆ ಪತಿಯ ವ್ಯಕ್ತಿತ್ವಕ್ಕೆ ಧಕ್ಕೆ ಉಂಟುಮಾಡುವುದಲ್ಲದೇ ಆತನ ಖಾಸಗಿ ಮಾಹಿತಿಗಳ ಸುರಕ್ಷತೆಗೂ ಹಾನಿ ಉಂಟುಮಾಡುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹೆಂಡತಿಯ ವರ್ತನೆಯಿಂದ ಬೇಸತ್ತಿದ್ದ ಗಂಡ ತನಗೆ ನ್ಯಾಯ ಬೇಕೆಂದು ದೂರು ದಾಖಲಿಸಿದ್ದ. ತನ್ನ ಮೊಬೈಲಿನಲ್ಲಿರುವ ಫೋಟೋಗಳನ್ನು ಕುಟುಂಬದ ಇತರರಿಗೆ ಕಳುಹಿಸಿ ನನಗೆ ಅವಮಾನಿಸಿದ್ದಾಳೆಂದು ಆರೋಪಿಸಿದ್ದ. ಹೆಂಡತಿ ಹೀಗೆ ಮಾಡುತ್ತಿರುವುದು ತನಗೆ ಮಾನಸಿಕವಾಗಿ ನೋವುಂಟು ಮಾಡಿದ್ದು, ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದು ನನ್ನ ಸಂಬಂಳದಲ್ಲಿ ಕಡಿತವಾಗಲು ಕಾರಣವಾಗಿದೆ. ಅಲ್ಲದೇ ದಾವೆ ಹೂಡಲು ಕೂಡ ಖರ್ಚಾಗುತ್ತಿದ್ದು, ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಇದಕ್ಕೆ ಪ್ರತಿಯಾಗಿ ಪತ್ನಿಯೂ ದೂರು ದಾಖಲಿಸಿದ್ದು, ಪತಿಯಿಂದ ನನಗೆ ಕಿರುಕುಳವಾಗುತ್ತಿದೆ. ಆತ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಾನೆ. ಅಲ್ಲದೇ ತನ್ನನ್ನೂ ತನ್ನ ಮಕ್ಕಳನ್ನೂ ಮನೆಯಿಂದ ಆಚೆಗಟ್ಟಿದ್ದಾನೆ ಎಂದು ಹೇಳಿದ್ದಳು. ಎರಡೂ ಕಡೆಯ ದೂರನ್ನು ಪರಿಶೀಲಿಸಿದ ನ್ಯಾಯಾಲಯ ಪತ್ನಿಯು ಪತಿಯ ಗೌಪ್ಯತೆಗೆ ಭಂಗ ಉಂಟು ಮಾಡಿರುವುದಕ್ಕೆ ಸಾಕ್ಷ್ಯಾಧಾರ ಲಭಿಸಿದೆ. ಹೀಗಾಗಿ ಆಕೆ ಪತಿಗೆ 1,07,585.02 ರೂಪಾಯಿ (Dh 5431) ಪರಿಹಾರ ನೀಡಬೇಕಿದೆ ಎಂದು ತಿಳಿಸಿದೆ. ಇದೇ ವೇಳೆ ಮಾನಸಿಕ ಹಿಂಸೆಯಿಂದಾಗಿ ಕೆಲಸ ಮಾಡಲಾಗದೇ ಸಂಬಳ ಕಡಿತವಾಗುತ್ತಿದೆ ಎನ್ನುವ ಆಕೆಯ ಪತಿಯ ಆರೋಪವನ್ನು ಪುರಸ್ಕರಿಸಿಲ್ಲ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

ಇದನ್ನೂ ಓದಿ: ಭಾರತವು ‘ಪ್ರತಿಯೊಬ್ಬ ನಾಗರಿಕನ ಗೌಪ್ಯತೆ ಹಕ್ಕನ್ನು’ ಗೌರವಿಸುತ್ತದೆ, ಅದನ್ನು ಉಲ್ಲಂಘಿಸುವ ಉದ್ದೇಶವಿಲ್ಲ: ವಾಟ್ಸ್‌ಆ್ಯಪ್ ಸಂಸ್ಥೆಗೆ ಕೇಂದ್ರ ಪ್ರತಿಕ್ರಿಯೆ 

ವಾಟ್ಸ್​ಆ್ಯಪ್​ ಹೂಡಿದ ಮೊಕದ್ದಮೆಗೆ ಕೇಂದ್ರ ಸರ್ಕಾರದ ಉತ್ತರ; ಬಳಕೆದಾರರಿಗೆ ತೊಂದರೆ ಕೊಡೋದಿಲ್ಲವೆಂದು ಹೇಳಿಕೆ ಬಿಡುಗಡೆ