Save Lakshadweep ಲಕ್ಷದ್ವೀಪದಲ್ಲಿ ಬೀಫ್ ನಿಷೇಧ, ಗೂಂಡಾ ಕಾಯ್ದೆ, ಮದ್ಯ ಮಾರಾಟಕ್ಕೆ ಅನುಮತಿ: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಜನರ ಆಕ್ರೋಶ

ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಫುಲ್ ಪಟೇಲ್ ದ್ವೀಪದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅವರು ಅನುಮತಿ ನೀಡಿದ್ದಾರೆ. ಗೋಮಾಂಸ ನಿಷೇಧ ಮತ್ತು ಅಂಗನವಾಡಿ ಮಕ್ಕಳ ಮೆನುವಿನಿಂದ ಮಾಂಸಾಹಾರವನ್ನು ತೆಗೆದುಹಾಕುವುದು ಕೂಡಾ ಪ್ರಫುಲ್ ಪಟೇಲ್ ನಿರ್ಧಾರಗಳಲ್ಲೊಂದು.

Save Lakshadweep ಲಕ್ಷದ್ವೀಪದಲ್ಲಿ ಬೀಫ್ ನಿಷೇಧ, ಗೂಂಡಾ ಕಾಯ್ದೆ, ಮದ್ಯ ಮಾರಾಟಕ್ಕೆ ಅನುಮತಿ: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಜನರ ಆಕ್ರೋಶ
ಪ್ರಫುಲ್ ಪಟೇಲ್ ( ಕೃಪೆ: ಫೇಸ್​ಬುಕ್ ಖಾತೆ)
Follow us
ರಶ್ಮಿ ಕಲ್ಲಕಟ್ಟ
|

Updated on:May 25, 2021 | 4:06 PM

ದೆಹಲಿ: ಬಿಜೆಪಿಯ ಪ್ರಫುಲ್ ಪಟೇಲ್ ನೇತೃತ್ವದ ಹೊಸ ಆಡಳಿತವು ಘೋಷಿಸಿದ ಸುಧಾರಣೆ ಕ್ರಮಗಳ ಬಗ್ಗೆ ಲಕ್ಷದ್ವೀಪದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2020 ರ ಡಿಸೆಂಬರ್‌ನಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಿಜೆಪಿ ನಾಯಕ ಪ್ರಫುಲ್ ಪಟೇಲ್ ಅವರ ಹೊಸ ನೀತಿಗಳ ಬಗ್ಗೆ ,ಕೇಂದ್ರಾಡಳಿತ ಪ್ರದೇಶದ ಜನರು ಮತ್ತು ರಾಜಕಾರಣಿಗಳಿಂದ ಸೇರಿದಂತೆ ನೆರೆಯ ರಾಜ್ಯವಾದ ಕೇರಳದ ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ.ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಪಟೇಲ್ ಸ್ಥಳೀಯ ಆಡಳಿತದಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಆದಾಗ್ಯೂ, ಸ್ಥಳೀಯರು ಈ ಸುಧಾರಣೆಗಳನ್ನು ಜನ ವಿರೋಧಿ ಎಂದು ಕರೆದಿದ್ದಾರೆ. ಲಕ್ಷದ್ವೀದಲ್ಲಿ ಹೆಚ್ಚಾಗಿ ಮುಸ್ಲಿಂ ಸಮುದಾಯದ ಜನರು ವಾಸಿಸುತ್ತಿದ್ದು ಇವರು ಮೀನುಗಾರಿಕೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಪಟೇಲ್ ಅವರ ಸುಧಾರಣೆ ಕ್ರಮಗಳು  ಏನೇನು? ಅಪರಾಧ ಪ್ರಮಾಣ ಈಗಾಗಲೇ ತೀರಾ ಕಡಿಮೆ ಇರುವ ದ್ವೀಪ ಪ್ರದೇಶದಲ್ಲಿ ಸಾಮಾಜಿಕ ವಿರೋಧಿ ಚಟುವಟಿಕೆಗಳ ನಿಯಂತ್ರಣ ಮಸೂದೆ 2021 ಅಥವಾ ಗೂಂಡಾ ಕಾಯ್ದೆಯನ್ನು ಜಾರಿಗೆ ತರುವ ಪ್ರಸ್ತಾಪವನ್ನು ಪಟೇಲ್ ಮುಂದಿಟ್ಟಿದ್ದಾರೆ . ವಿಚಾರಣೆಯಿಲ್ಲದೆ ಬಂಧಿಸಲು ಈ ಮಸೂದೆ ದಾರಿ ಮಾಡಿಕೊಡುತ್ತದೆ. ಆದರೆ ಅಂತಹ ಕಠಿಣ ಕಾನೂನುಗಳ ಅಗತ್ಯವಿಲ್ಲ ಎಂದು ಸ್ಥಳೀಯರು ಭಾವಿಸುತ್ತಾರೆ. ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದಂತೆ ಚುನಾಯಿತ ಜಿಲ್ಲಾ ಪಂಚಾಯತ್‌ನ ಸ್ಥಳೀಯ ಆಡಳಿತ ಅಧಿಕಾರಗಳ ನಿಯಂತ್ರಣವನ್ನೂ ಸರ್ಕಾರ ವಹಿಸಿಕೊಂಡಿದೆ.

ಹೊಸ ಪ್ರಸ್ತಾಪವು ಪಂಚಾಯತ್ ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತದೆ. ಅಷ್ಟೇ ಅಲ್ಲದೆ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಯಾವುದೇ ವ್ಯಕ್ತಿಯು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುವಂತೆ ಮಾಡುತ್ತದೆ. ಮುಸ್ಲಿಂ ಜನರೇ ಜಾಸ್ತಿ ಇರುವುದರಿಂದ ಮದ್ಯದಂಗಡಿಗಳಿಲ್ಲದ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಫುಲ್ ಪಟೇಲ್ ದ್ವೀಪದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅವರು ಅನುಮತಿ ನೀಡಿದ್ದಾರೆ. ಗೋಮಾಂಸ ನಿಷೇಧ ಮತ್ತು ಅಂಗನವಾಡಿ ಮಕ್ಕಳ ಮೆನುವಿನಿಂದ ಮಾಂಸಾಹಾರವನ್ನು ತೆಗೆದುಹಾಕುವುದು ಕೂಡಾ ಪ್ರಫುಲ್ ಪಟೇಲ್ ನಿರ್ಧಾರಗಳಲ್ಲೊಂದು.

ಕೇರಳದ ಶಾಸಕ ಹೈಬಿ ಈಡನ್ ಅವರು ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅನೇಕ ಸರ್ಕಾರಿ ಗುತ್ತಿಗೆ ನೌಕರರನ್ನು ಯಾವುದೇ ಕಾರಣವಿಲ್ಲದೆ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ. “ಈ ದ್ವೀಪದಲ್ಲಿ 70000ಕ್ಕಿಂತಲೂ ಹೆಚ್ಚು ಜನರು ಮೀನುಗಾರಿಕೆ ಮತ್ತು ಸರ್ಕಾರಿ ಸೇವೆಗಳನ್ನು ಅವಲಂಬಿಸಿದ್ದಾರೆ. ಆದರೆ ಹೊಸ ಆಡಳಿತವು ಕರಾವಳಿ ನಿಯಂತ್ರಣ ವಲಯ (CRZ) ಉಲ್ಲಂಘನೆ ಆರೋಪಿಸಿ ಮೀನುಗಾರರ ಗುಡಿಸಲುಗಳನ್ನು ನೆಲಸಮ ಮಾಡಿದೆ” ಎಂದು ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಲಕ್ಷದ್ವೀಪ ಮತ್ತು ನೆರೆಯ ರಾಜ್ಯವಾದ ಕೇರಳದ ಬೇಪೋರ್ ಬಂದರಿನ ನಡುವಿನ ದೀರ್ಘಕಾಲದ ವ್ಯಾಪಾರ ಸಂಬಂಧವನ್ನು ಕೊನೆಗೊಳಿಸುವ ಮೂಲಕ ಪಟೇಲ್ ಎಲ್ಲಾ ಸರಕು ಹಡಗುಗಳನ್ನು ಮಂಗಳೂರಿಗೆ ತಿರುಗಿಸಿದ್ದಾರೆ.

ಕೊವಿಡ್ ಮಾರ್ಗಸೂಚಿ ಪ್ರಫುಲ್ ಪಟೇಲ್ ವಿರುದ್ಧದ ದನಿಗೆ ಮಸೂದೆ ಮಾತ್ರ ಕಾರಣವಲ್ಲ. ಲಕ್ಷದ್ವೀಪದ ಕೊವಿಡ್ ಮಾರ್ಗಸೂಚಿಗಳನ್ನು ದುರ್ಬಲಗೊಳಿಸುವುದು ಸೇರಿದಂತೆ ಪಟೇಲ್ ತಂದ ಇತರ ನೀತಿಗಳೂ ಇದಕ್ಕೆ ಕಾರಣವಾಗಿದೆ. ಈ ಹಿಂದೆ ಲಕ್ಷದ್ವೀಪಕ್ಕೆ ಪ್ರವೇಶಿಸಬೇಕಿದ್ದರೆ ಪ್ರಯಾಣಿಕರು 14 ದಿನ ಕ್ವಾರಂಟೈನ್​ನಲ್ಲಿರಬೇಕಿತ್ತು. ಹಾಗಾಗಿ ಲಕ್ಷದ್ವೀಪದಲ್ಲಿ ಕೊವಿಡ್ ಇರಲಿಲ್ಲ. ಆದರೆ ಪಟೇಲ್ ಈ ನಿಯಮಗಳನ್ನು ದುರ್ಬಲಗೊಳಿಸಿದರು. ಲಕ್ಷದ್ವೀಪವನ್ನು ಪ್ರವೇಶಿಸಲು ಆರ್​ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಸಾಕು ಎಂದು ಹೇಳಿದ್ದು ದ್ವೀಪವಾಸಿಗಳಲ್ಲಿ ಆತಂಕವನ್ನು ಉಂಟುಮಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ #SaveLakshadweep ಅಭಿಯಾನ ದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಘೋಷಿಸಿದ ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ಕೇಂದ್ರಾಡಳಿತ ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರಫುಲ್ ಪಟೇಲ್ ನೀತಿಯನ್ನು ಪ್ರತಿಭಟನಾಕಾರರು ಜನ ವಿರೋಧಿ ಎಂದು ಬಣ್ಣಿಸುತ್ತಾರೆ. #SaveLakshadweep ಅಭಿಯಾನ ಅಡಿಯಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಅಭಿಯಾನವನ್ನು ರಾಜಕೀಯ,ಕಲೆ ಸಾಂಸ್ಕೃತಿಕ ನಾಯಕರು ಸೆಲೆಬ್ರಿಟಿಗಳೂ ಬೆಂಬಲಿಸಿದ್ದಾರೆ.

ಪಟೇಲ್ ಅವರನ್ನು ವಾಪಸ್ ಕರೆಸಿ ಪಟೇಲ್ ಅವರ ಸುಧಾರಣಾ ನೀತಿಗಳನ್ನು ವಿರೋಧಿಸಿ ಲಕ್ಷದ್ವೀಪ ಮತ್ತು ಕೇರಳದ ವಿವಿಧ ರಾಜಕೀಯ ಪಕ್ಷಗಳು ಮತ್ತು ನೆಟ್ಟಿಗರು ದನಿಯೆತ್ತಿದ್ದಾರೆ. ಲಕ್ಷದ್ವೀಪ ಶಾಸಕ ಮತ್ತು ಎನ್‌ಸಿಪಿಯ ಮೊಹಮ್ಮದ್ ಫೈಜಲ್ ಮತ್ತು ನೆರೆಯ ಕೇರಳದ ಅವರ ಸಹೋದ್ಯೋಗಿಗಳಾದ ಟಿ.ಎನ್.ಪ್ರತಾಪನ್ (ಕಾಂಗ್ರೆಸ್), ಎಳಮರ ಕರೀಮ್ (ಸಿಪಿಐ-ಎಂ) ಮತ್ತು ಇಟಿ ಮೊಹಮ್ಮದ್ ಬಶೀರ್ (ಮುಸ್ಲಿಂ ಲೀಗ್) ಕೂಡ ಪಟೇಲ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಸೋಮವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ರಾಷ್ಟ್ರಪತಿಗೆ ಪತ್ರವೊಂದನ್ನು ಬರೆದಿದ್ದು, ಪ್ರಸ್ತುತ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಸರ್ವಾಧಿಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಅವರನ್ನು ವಾಪಸ್ ಕರೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಕೈಗೊಂಡ ಸರ್ವಾಧಿಕಾರಿ ಕ್ರಮಗಳಿಂದಾಗಿ ಲಕ್ಷದ್ವೀಪದ ಜನರಲ್ಲಿ ಆತಂಕವಿದೆ ಮತ್ತು ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ ಎಂದು ವೇಣುಗೋಪಾಲ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಆದಾಗ್ಯೂ, ಸ್ಥಳೀಯ ರಾಜಕಾರಣಿಗಳನ್ನು ಒಳಗೊಂಡ ಭ್ರಷ್ಟಾಚಾರಗಳನ್ನು ಕೊನೆಗೊಳಿಸಲು ಪಟೇಲ್ ಮಾಡಿದ ಪ್ರಯತ್ನಗಳಿವು, ಅವರು ಅಲ್ಲಿ ಅಭಿವೃದ್ಧಿ ಬಯಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.

ಯಾರು ಈ ಪ್ರಫುಲ್  ಪಟೇಲ್? ಈ  ಹಿಂದೆ ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿದ್ದ  ದಿನೇಶ್ವರ್ ಶರ್ಮಾ ಅವರ ನಿಧನ ನಂತರ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ನಾಗರ್ ಹವೇಲಿ, ದಾಮನ್ ದಿಯು ಆಡಳಿತಾಧಿಕಾರಿಯಾಗಿದ್ದ ಪ್ರಫುಲ್ ಖೋಡಾ ಪಟೇಲ್ ಅವರಿಗೆ ಕೇಂದ್ರ ಸರ್ಕಾರ ಲಕ್ಷದ್ವೀಪದ ಜವಾಬ್ದಾರಿಯನ್ನು ನೀಡಿತ್ತು. ಇವರು 2020 ಡಿಸೆಂಬರ್ 5ರಂದು ಲಕ್ಷದ್ವೀಪ ಆಡಳಿತಾಧಿಕಾರಿಯಾಗಿ ಅಧಿಕಾರವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಫುಲ್ ಪಟೇಲ್ ಅವರು ಗೃಹ ಇಲಾಖೆಯ ಉಸ್ತುವಾರಿ ವಹಿಸಿದ್ದರು. 2010 ರಿಂದ 2012 ರವರೆಗೆ ಗುಜರಾತ್‌ನ ಗೃಹ ಸಚಿವರಾಗಿದ್ದರು. ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಜೈಲುವಾಸ ಅನುಭವಿಸಿದಾಗ ಅವರ ಬದಲಿಗೆ ಬಂದ ವ್ಯಕ್ತಿಯಾಗಿದ್ದರು ಪ್ರಫುಲ್ ಪಟೇಲ್.

ಪ್ರಫುಲ್ ಪಟೇಲ್ ಪ್ರಧಾನಿ  ನರೇಂದ್ರ ಮೋದಿಯ ಆಪ್ತ. ನರೇಂದ್ರ ಮೋದಿ ಅವರ ಮಾರ್ಗದರ್ಶಕರಾಗಿದ್ದ ಗುಜರಾತ್ ಆರ್​ಎಸ್ಎಸ್ ನಾಯಕ ರಂಜೋದ್ಭಾಯ್ ಪಟೇಲ್ ಪುತ್ರ ಈ ಪ್ರಫುಲ್ ಪಟೇಲ್. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರುವ ಪ್ರಫುಲ್ ಪಟೇಲ್ ಅವರು ರಸ್ತೆ ಗುತ್ತಿಗೆದಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಪಾಲುದಾರ ಸಬಾರ್ ಕನ್ಸ್ಟ್ರಕ್ಷನ್ಸ್ ಗೆ ಗುಜರಾತ್ ಸರ್ಕಾರವು ಹಲವಾರು ಪ್ರಮುಖ ಯೋಜನೆಗಳಿಗೆ ಗುತ್ತಿಗೆ ನೀಡಿತ್ತು.

2007 ರ ವಿಧಾನಸಭಾ ಚುನಾವಣೆಯಲ್ಲಿ ಹಿಮಾತ್‌ನಗರದಿಂದ ಪ್ರಫುಲ್ ಪಟೇಲ್ ಜಯಗಳಿಸಿದರು. ಮೂರು ವರ್ಷಗಳ ನಂತರ ಸಚಿವ ಸಂಪುಟ ಸೇರಿದರೆ. 2012 ರ ಹಿಮಾತ್‌ನಗರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪ್ರಫುಲ್ ಪಟೇಲ್ ಕೆಲವು ಸಮಯ ರಾಜಕೀಯ ವನವಾಸದಲ್ಲಿದ್ದರು. ಆದರೆ 2014 ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದಾಗ ಪ್ರಫುಲ್ ಪಟೇಲ್ ಮತ್ತೆ ಸಕ್ರಿಯರಾದರು.

ಇದನ್ನೂ ಓದಿ: New CBI Chief: ಅಂತಿಮ ಪಟ್ಟಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಿಂದ ಮೂವರ ಹೆಸರು

(Public outcry was sparked in Lakshwadweep over reforms announced by new administration led by BJP’s Praful Patel)

Published On - 4:02 pm, Tue, 25 May 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್