ಭಾರತ ಮತ್ತು ಬ್ರಿಟನ್ ದೇಶಗಳ ರೂಪಾಂತರಿ ಕೊರೊನಾ ವೈರಾಣು ಸಮ್ಮಿಶ್ರಣದಿಂದ ಸಂಕಷ್ಟಕ್ಕೆ ಸಿಲುಕಿದ ವಿಯೆಟ್ನಾಂ
ಸೋಂಕಿತರನ್ನು ಜೀನ್ ಸೀಕ್ವೆನ್ಸಿಂಗ್ಗೆ ಒಳಪಡಿಸಿದಾಗ ಭಾರತ ಮತ್ತು ಬ್ರಿಟನ್ ತಳಿಯ ಮಿಶ್ರಣವಾಗಿರುವ ಹೊಸ ಕೊರೊನಾ ವೈರಾಣು ಪತ್ತೆಯಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಮೊದಲು ಬ್ರಿಟನ್ನಲ್ಲಿ ಕಾಣಿಸಿಕೊಂಡು ನಂತರ ಭಾರತದಲ್ಲಿ ಮರು ರೂಪಾಂತರಗೊಂಡ ಮಾದರಿ ಎನ್ನಬಹುದಾಗಿದೆ ಎಂದು ಎನ್ಗುಯೆನ್ ಥನ್ಹ್ ಲಾಂಗ್ ತಿಳಿಸಿದ್ದಾರೆ.
ಭಾರತದಲ್ಲಿ ಎರಡನೇ ಅಲೆ ಮೂಲಕ ಅವಾಂತರ ಸೃಷ್ಟಿಸಿರುವ ಕೊರೊನಾ ವೈರಾಣುವಿನ ರೂಪಾಂತರಿ ಮಾದರಿ ಈಗ ಮತ್ತೊಂದು ಹಂತದ ಬದಲಾವಣೆಗೆ ಒಳಗಾಗಿ ವಿದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ. ಈ ಬಗ್ಗೆ ಇಂದು (ಮೇ 29) ವಿಯೆಟ್ನಾಂ ದೇಶದ ಆರೋಗ್ಯ ಸಚಿವ ಎನ್ಗುಯೆನ್ ಥನ್ಹ್ ಲಾಂಗ್ ಮಾಹಿತಿ ನೀಡಿದ್ದು ವಿಯೆಟ್ನಾಂನಲ್ಲಿ ಹೊಸ ಮಾದರಿಯ ಕೊರೊನಾ ವೈರಾಣು ಪತ್ತೆಯಾಗಿದೆ. ಭಾರತ ಮತ್ತು ಬ್ರಿಟನ್ ದೇಶಗಳ ರೂಪಾಂತರಿಯ ಸಮ್ಮಿಶ್ರಿತ ಮಾದರಿಯಾಗಿರುವ ಹೊಸ ತಳಿ ಹಿಂದಿನದ್ದಕ್ಕಿಂತಲೂ ಅಪಾಯಕಾರಿಯಾಗಿ ತೋರುತ್ತಿದ್ದು, ಅತ್ಯಂತ ವೇಗವಾಗಿ ಗಾಳಿಯಲ್ಲಿ ಹರಡುತ್ತಿದೆ ಎಂದು ತಿಳಿಸಿರುವುದಾಗಿ ಆನ್ಲೈನ್ ಸುದ್ದಿಪತ್ರಿಕೆ ವಿಎನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕಳೆದ ಬಾರಿ ಯಶಸ್ವಿಯಾಗಿ ಕೊರೊನಾ ನಿಯಂತ್ರಿಸುವ ಮೂಲಕ ವಿಯೆಟ್ನಾಂ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡಿತ್ತು. ಆದರೆ, ಈಗ ಕಾಣಿಸಿಕೊಂಡಿರುವ ರೂಪಾಂತರಿ ವೈರಾಣುವಿನಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ದೇಶದಲ್ಲಿ ಕೊರೊನಾ ಏಕಾಏಕಿ ಸ್ಪೋಟಗೊಂಡಂತೆ ಹರಡುತ್ತಿದೆ. ಏಪ್ರಿಲ್ ಅಂತ್ಯದಿಂದ ಇಲ್ಲಿಯ ತನಕ ವಿಯೆಟ್ನಾಂನ 63 ನಗರಗಳ ಪೈಕಿ 31 ನಗರಗಳು ಹಾಗೂ ಇತರ ಪ್ರಾಂತ್ಯಗಳ ಸುಮಾರು 3,600 ಜನ ಸೋಂಕಿಗೆ ತುತ್ತಾಗಿರುವುದು ವರದಿಯಾಗಿದೆ.
ಏಪ್ರಿಲ್ ಅಂತ್ಯದಿಂದ ಇಲ್ಲಿಯ ತನಕ ಕಾಣಿಸಿಕೊಂಡಿರುವ ಹೊಸ ಪ್ರಕರಣಗಳು ವಿಯೆಟ್ನಾಂನಲ್ಲಿ ಈವರೆಗೆ ಪತ್ತೆಯಾಗಿರುವ ಸೋಂಕಿನ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದ್ದಾಗಿದ್ದು, ಇದು ಹೀಗೆಯೇ ಮುಂದುವರೆದಲ್ಲಿ ಅಪಾಯಕಾರಿ ಸ್ಥಿತಿಗೆ ದೇಶ ತಲುಪಲಿದೆ ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ. ವಿಯೆಟ್ನಾಂನಲ್ಲಿ ಈ ಸಮ್ಮಿಶ್ರಿತ ಮಾದರಿ ಪತ್ತೆಯಾಗುವುದಕ್ಕೂ ಮೊದಲು B.1.222, B.1.619, D614G, B.1.1.7 (ಬ್ರಿಟನ್ ಮಾದರಿ), B.1.351, A.23.1 and B.1.617.2 (ಭಾರತೀಯ ಮಾದರಿ) ಎಂಬ ಏಳು ಮಾದರಿಗಳು ಕಂಡುಬಂದಿದ್ದವು.
ಸದ್ಯ ಸೋಂಕಿತರನ್ನು ಜೀನ್ ಸೀಕ್ವೆನ್ಸಿಂಗ್ಗೆ ಒಳಪಡಿಸಿದಾಗ ಭಾರತ ಮತ್ತು ಬ್ರಿಟನ್ ತಳಿಯ ಮಿಶ್ರಣವಾಗಿರುವ ಹೊಸ ಕೊರೊನಾ ವೈರಾಣು ಪತ್ತೆಯಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಮೊದಲು ಬ್ರಿಟನ್ನಲ್ಲಿ ಕಾಣಿಸಿಕೊಂಡು ನಂತರ ಭಾರತದಲ್ಲಿ ಮರು ರೂಪಾಂತರಗೊಂಡ ಮಾದರಿ ಎನ್ನಬಹುದಾಗಿದೆ ಎಂದು ಎನ್ಗುಯೆನ್ ಥನ್ಹ್ ಲಾಂಗ್ ತಿಳಿಸಿದ್ದಾರೆ. ಆನ್ಲೈನ್ ಸುದ್ದಿಪತ್ರಿಕೆ ವಿಎನ್ ಎಕ್ಸ್ಪ್ರೆಸ್ ಪ್ರಕಾರ ಅತಿ ಶೀಘ್ರದಲ್ಲಿ ವಿಯೆಟ್ನಾಂ ಈ ಬಗ್ಗೆ ವಿಸ್ತೃತ ಮಾಹಿತಿ ನೀಡುವ ಸಾಧ್ಯತೆ ಇದೆ.
ಹೊಸ ಮಾದರಿಯ ಬಗ್ಗೆ ಪ್ರಯೋಗಾಲಯಗಳು ಪರೀಕ್ಷೆ ನಡೆಸಿದ್ದು, ಈ ವೈರಾಣು ಅತ್ಯಂತ ಕ್ಷಿಪ್ರವಾಗಿ ದ್ವಿಗುಣಗೊಳ್ಳುವ ಸಾಮರ್ಥ್ಯ ಹೊಂದಿರುವ ಕಾರಣದಿಂದಲೇ ಇಷ್ಟು ಪ್ರಕರಣಗಳು ಏಕಾಏಕಿ ಕಂಡುಬರುತ್ತಿವೆ ಎಂದು ತಜ್ಞರು ಹೇಳಿದ್ದಾರೆ. ಇಲ್ಲಿಯವರೆಗೆ ವಿಯೆಟ್ನಾಂನಲ್ಲಿ ಒಟ್ಟು 6,396 ಪ್ರಕರಣಗಳು ದಾಖಲಾಗಿ ಒಟ್ಟು 47 ಸಾವು ಸಂಭವಿಸಿತ್ತು ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ.
ಇದನ್ನೂ ಓದಿ: ಕೊರೊನಾ ಹೊಸ ರೂಪಾಂತರಿ ವಿರುದ್ಧ ನಮ್ಮ ಲಸಿಕೆ ಪರಿಣಾಮಕಾರಿ, ಭಾರತೀಯರಿಗೆ ಉಪಯುಕ್ತ: ಫೈಜರ್
ಭಾರತದ ರೂಪಾಂತರಿ ಕೊರೊನಾ ಚಿಂತೆಗೀಡುಮಾಡುವ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ