ವಿಜಯಪುರ: ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಜನರಲ್ಲಿ ಸೈಕ್ಲಿಂಗ್ ಜಾಗೃತಿ ಮೂಡಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪದವಿ ಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳನ್ನು ಆಯೋಜನೆ ಮಾಡಿದೆ. ಸೈಕ್ಲಿಸ್ಟ್ ಗಳ ತವರೂರು ಎಂಬ ಗರಿಮೆಗೆ ಪಾತ್ರವಾದ ವಿಜಯಪುರ ಜಿಲ್ಲೆ ಸೈಕ್ಲಿಂಗ್ಗೆ ಸಾಕ್ಷಿಯಾಗಿತ್ತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು.
ಮೈಕೊರೆಯೋ ಚಳಿಯೇ ಇರಲಿ. ಬಿರು ಬಿಸಿಲೇ ಇರಲಿ. ಯಾವುದೂ ಲೆಕ್ಕಕ್ಕಿಲ್ಲ. ಕಣ್ಮುಂದೆ ಕಾಣೋದು ಗುರಿ ಒಂದೆ. ಆ ಗುರಿ ಬೆನ್ನತ್ತಿರೋ ಸೈಕ್ಲಿಸ್ಟ್ಗಳು ನಾ ಮುಂದು ತಾ ಮುಂದು ಅಂತಾ ಸೈಕಲ್ ತುಳಿಯುತ್ತಿದ್ದದ್ದು ನೋಡುಗರ ದಿಲ್ ಖುಷ್ ಆಗಿತ್ತು.
ಮಿಂಚಿನಂತೆ ಸೈಕಲ್ ತುಳಿದ ಸ್ಪರ್ಧಾಳುಗಳು:
ವಿಜಯಪುರ ತಾಲೂಕಿನ ಖತಿಜಾಪುರ ಬಳಿ ಸೈಕ್ಲಿಸ್ಟ್ಗಳ ಅಬ್ಬರ ಜೋರಾಗಿತ್ತು. ಪದವಿ ಪೂರ್ವ ಸ್ಟೂಡೆಂಟ್ಸ್ಗಾಗಿ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಪದವಿ ಪೂರ್ವ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆ ನಡೆಯಿತು. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಉತ್ತರ, ತುಮಕೂರು ಹಾಗೂ ಮೈಸೂರು ಜಿಲ್ಲೆಯ ಸೈಕ್ಲಿಸ್ಟ್ಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಟೈಮ್ ಟ್ರಯಲ್ ಹಾಗೂ ಮಾಸ್ ಸ್ಟಾರ್ಟ್ ಎಂಬ 2 ವಿಧಗಳಲ್ಲಿ ಸೈಕಲ್ ಸ್ಪರ್ಧೆಗಳು ನಡೆದ್ವು. ಈ ವೇಳೆ ಸ್ಪರ್ಧಾಳುಗಳು ಮಿಂಚಿನಂತೆ ಸೈಕಲ್ ತುಳಿದ್ರು.
ಯುವಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಲ್ಲಿ ಸೈಕ್ಲಿಂಗ್ ಅಭಿವೃದ್ಧಿ ಜೊತೆಗೆ ಕ್ರೀಡಾ ಆಸಕ್ತಿ ಬೆಳೆಸಲು ಇದೊಂದು ಉತ್ತಮ ವೇದಿಕೆಯಾಗಿತ್ತು. ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದ ಸೈಕ್ಲಿಸ್ಟ್ಗಳು ಚಳಿಯಲ್ಲೂ ಸೈಕಲ್ ಸವಾರಿ ಮಾಡಿದ್ರು. ವಿನ್ನರ್ಸ್ ಪ್ರಶಸ್ತಿಗೆ ಮುತ್ತಿಕ್ಕಿ ಸಂತಸ ವ್ಯಕ್ತಪಡಿಸಿದ್ರು.