ಟಿ.ನರಸೀಪುರ: ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಜನರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಟ್ವೀಟ್ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ, ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕುರುಬೂರು ಬಳಿ (T Narasipura Road) ಸಂಭವಿಸಿದ ಅಪಘಾತದಲ್ಲಿ (Road Accident) ಮೃತಪಟ್ಟ 10 ಜನರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ (CM siddaramaiah) ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಜನರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಟ್ವೀಟ್ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ, ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಕೊಳ್ಳೆಗಾಲದಿಂದ ಬರುತ್ತಿರುವಾಗ ಖಾಸಗಿ ಬಸ್ಗೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ. ಡಿಸಿ ಮತ್ತು ಮಹದೇವಪ್ಪನ ಬಳಿ ಮಾತನಾಡಿದ್ದೇನೆ ಸ್ಥಳಕ್ಕೆ ಭೇಟಿ ನೀಡಿ ಎಂದು ಸೂಚಿಸಿದ್ದೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೋಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಮಹದೇವಪ್ಪ. ಈ ಘಟನೆ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಸಿಎಂ ಸಹಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ನಾನು ಸಹ ಆಸ್ಪತ್ರೆಗೆ ಭೇಟಿ ನೀಡುತ್ತೇನೆ.ಈ ಸಂಬಂಧ ಅಧಿಕಾರಿಗಳ ಬಳಿ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ಕೊಳ್ಳೇಗಾಲ – ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಅಪಘಾತ ಸಂಭವಿಸಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಮಗು ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ಬಳಿ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾದ ಸುದ್ದಿ ಕೇಳಿ ಸಂಕಟವಾಯಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ… pic.twitter.com/xSUD80kNro
— CM of Karnataka (@CMofKarnataka) May 29, 2023
ಅಪಘಾತದಲ್ಲಿ ಮೃತಪಟ್ಟವರು ಪೈಕಿ ಕೆಲವರು ಬಳ್ಳಾರಿ ಸಂಗನಕಲ್ ನಿವಾಸಿಗಳಾಗಿದ್ದಾರೆ. ಇವರು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸಂಗನಕಲ್ ನಿಂದ ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಮೃತರಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳಾಗಿದ್ದಾರೆ. 16 ಮಂದಿ ಗಾಯಾಳುಗಳಿಗೆ ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಉಚಿತ ಬಸ್ ಪ್ರಯಾಣ ಗ್ಯಾರಂಟಿಗೆ ಕಿಮೀ ಮಿತಿ ನಿಗದಿಗೆ ಚಿಂತನೆ; ಫಲಾನುಭವಿಗಳ ಪಟ್ಟಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ
ಮೃತಪಟ್ಟವರು ಯಾರೆಲ್ಲ?
ಬಿಳ್ಯಾಳ ಮಂಜುನಾಥ್ (35), ಇವರ ಪತ್ನಿ ಪೂರ್ಣಿಮಾ (30), ಮಗ ಪವನ (10), ಕಾರ್ತಿಕ (08), ಸಂದೀಪ (24), ತಾಯಿ ಸುಜಾತ ( 40), ತಂದೆ ಕೊಟ್ರೇಶ್ (45), ಪತ್ನಿ ಗಾಯತ್ರಿ (35), ಮಗಳು ಶ್ರಾವ್ಯ ( 03) ಹಾಗೂ ಇನೋವಾ ಚಾಲಕ ಮೈಸೂರಿನ ಆದಿತ್ಯ (26) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದೆ. ಮೂವರು ಗಾಯಾಳುಗಳನ್ನು ಬಳ್ಳಾರಿ ಮೂಲದ ಜನಾರ್ದನ್ (45), ಪುನೀತ್ (4), ಶಶಿಕುಮಾರ್(24) ಎಂದು ಗುರುತಿಸಲಾಗಿದ್ದು, ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರಗೆ ರವಾನಿಸಲು ಸಿದ್ಧತೆ ಮಾಡಲಾಗುತ್ತಿದೆ. ಸದ್ಯ ಚಾಮರಾಜನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವಾಸಕ್ಕೆ ಹೋಗಿದ್ದವರಿಗೆ ಹೊಂಚುಹಾಕಿದ್ದ ಜವರಾಯ
ಒಂದೇ ಕುಟಂಬದವರು ಎಲ್ಲರೂ ಇನೋವಾ ಕಾರಿನಲ್ಲಿ ಪ್ರವಾಸ ತೆರಳಿದ್ದರು. ಶನಿವಾರ ಮೈಸೂರಿಗೆ ಹೊರಟಿದ್ದರು. ಪ್ರವಾಸಕ್ಕೆ ಹೋಗಿದ್ದವರು ಮರಳಿ ಬರುವುದಿಲ್ಲ ಎಂದು ತಿಳಿದು ಸಂಗನಕಲ್ನಲ್ಲಿ ಸ್ಮಶಾನ ಮೌನ ಆವರಿಸಿದೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಡಿಕ್ಕಿಯ ರಭಸಕ್ಕೆ ಇನ್ನೋವಾ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರನ್ನು ಹೊರ ತೆಗೆಯಲು ಸ್ಥಳೀಯರು ಪರದಾಡುವಂತಾಯಿತು. ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಲೋಹದ ಕಟರ್ ಬಳಸಿ ಕಾರಿನಿಂದ ಶವಗಳನ್ನು ಹೊರತೆಗೆದರು.
ಇದನ್ನೂ ಓದಿ: Mysore News: ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ
ಇನೋವಾದಲ್ಲಿ 13 ಜನರು ಇದ್ದರು ಮತ್ತು ಆ ಪೈಕಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
“ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಮಂದಿ ರಜೆಯಲ್ಲಿ ಬಂದಿದ್ದರು. ಚಾಮುಂಡಿ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗ ಬೆಟ್ಟಗಳಿಗೆ ಭೇಟಿ ನೀಡಿ ಮೈಸೂರಿಗೆ ಹಿಂತಿರುಗುತ್ತಿದ್ದರು. ಇವರೆಲ್ಲರೂ ಬಳ್ಳಾರಿ ಸಮೀಪದ ಸಂಗನಕಲ್ ಗ್ರಾಮದಿಂದ ಬಂದಿದ್ದರು. ಸೋಮವಾರ ಸಂಜೆ 5 ಗಂಟೆಗೆ ರೈಲಿನಲ್ಲಿ ಬಳ್ಳಾರಿಗೆ ತೆರಳಬೇಕಿತ್ತು. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Mon, 29 May 23