ಎಷ್ಟೇ ವಿರೋಧ ಬರಲಿ, ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯ ನಿಲ್ಲುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶದಲ್ಲಿ ಮೊದಲ ಆದ್ಯತೆ ನೀಡಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಎಲ್ಲರೂ ಸಹಕಾರ ನೀಡಿದರೆ ನಿರಂತರ ತೆರವು ಕಾರ್ಯಾಚರಣೆ ನಡೆಯಲಿದೆ ಎಂದರು.
ಒಂದೊಮ್ಮೆ ತೆರವು ಕಾರ್ಯಾಚರಣೆ ನಿಲ್ಲಿಸಿದರೆ, ಮುಂದಿನ ಮಳೆಗಾಲದಲ್ಲಿ ಈ ವರ್ಷದ ರೀತಿಯೇ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಎಷ್ಟೇ ಪ್ರತಿರೋಧ ಎದುರಾದರೂ ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
ಕೆಲವು ದಿನಗಳಿಂದ ನಿಂತುಹೋಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಅಕ್ಟೋಬರ್ 10ರಿಂದ ಮತ್ತೆ ಆರಂಭವಾಗಿದ್ದು, ಒತ್ತುವರಿ ಮಾಡಿಕೊಂಡವರಲ್ಲಿ ಮತ್ತೆ ನಡುಕ ಶುರುವಾಗಿದೆ. ಅಕ್ಟೋಬರ್ 10ರಂದು ಮಹದೇವಪುರ ಭಾಗದಲ್ಲಿ ಬುಲ್ಡೋಜರ್ ಸದ್ದು ಮಾಡಿದ್ದು, ಈಗಾಗಲೇ ಕಂದಾಯ ಇಲಾಖೆ (Revenue Department) ಮತ್ತು ಬಿಬಿಎಂಪಿ (BBMP)ಯಿಂದ ಸರ್ವೆ ಕಾರ್ಯ ನಡೆಸಲಾಗಿದೆ.
ಪೂರ್ವ ಪಾರ್ಕ್ ರಿಡ್ಜ್ನ ಎರಡು ಐಷಾರಾಮಿ ವಿಲ್ಲಾ, ಸಭಾಂಗಣವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ರಾಜಕಾಲುವೆ ಒತ್ತುವರಿ ವಿಚಾರ ಸಂಬಂಧ ಮಾತನಾಡಿದ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ, ಇಂದು ಕಾಂಪೌಡ್ ವಾಲ್, ಖಾಲಿಜಾಗ, ಶೆಡ್ ಮಾತ್ರ ತೆರವು ಮಾಡುತ್ತೇವೆ. ದೊಡ್ಡ ಸ್ಟ್ರಕ್ಚರ್ಗಳಿಗೆ ಸ್ಟೇ ಆರ್ಡರ್ ಇದೆ.
ಹೀಗಾಗಿ ತಹಶೀಲ್ದಾರ್ ನೋಟಿಸ್ ಕೊಟ್ಟು ರಿ ಸರ್ವೆ ಆಗಬೇಕು. ಇದಕ್ಕೆ ಎರಡರಿಂದ ಮೂರು ದಿನ ಹಿಡಿಯಬಹುದು. ತಹಶೀಲ್ದಾರ್ ನಮಗೆ ಆದೇಶ ನೀಡಿದ ತಕ್ಷಣ ದೊಡ್ಡ ಕಟ್ಟಡಗಳನ್ನೂ ತೆರವು ಮಾಡುತ್ತೇವೆ. ಇದಕ್ಕೆ ಮೂರು ದಿನಗಳಾಗಬಹುದು. ಅದು ಬಿಟ್ಟು ನಾವು ಏಕಾಏಕಿ ಒಡೆದುಹಾಕಲು ಸಾಧ್ಯವಿಲ್ಲ. ಎಲ್ಲೆಲ್ಲಿ ಅಡ್ಡಿ ಇಲ್ಲವೋ ಅಲ್ಲೆಲ್ಲಾ ತೆರವು ಮಾಡುತ್ತೇವೆ ಎಂದು ಹೇಳಿದ್ದರು.
ಸರ್ಕಾರಕ್ಕೆ ಹೊರೆಯಾಗಿರುವ ಹೆಚ್ಚುವರಿ ಹುದ್ದೆಗಳನ್ನು ರದ್ದು ಮಾಡಲು ಶಿಫಾರಸು ಬಂದಿದೆ, ಅರಣ್ಯ ಇಲಾಖೆಯಲ್ಲಿ ಒಂದು ಜಿಲ್ಲೆಯಲ್ಲೇ ಇಬ್ಬರು ಮೂವರು ಡಿಸಿಎಫ್ಗಳಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ ಇಬ್ಬರು, ಮೂವರು ಎಸಿಎಫ್ ಗಳಿದ್ದಾರೆ, ಈ ಹೆಚ್ಚುವರಿ ಹುದ್ದೆಗಳು ಸರ್ಕಾರಕ್ಕೆ ಹೊರೆಯಾಗಿವೆ. ಇದೇ ರೀತಿ ಕೃಷಿ, ತೋಟಗಾರಿಕೆ ಸೇರಿ ಕೆಲವು ಇಲಾಖೆಗಳಲ್ಲಿನ ಹೆಚ್ಚುವರಿ, ಅನಗತ್ಯ ಹುದ್ದೆಗಳನ್ನು ರದ್ದು ಮಾಡುತ್ತೇವೆ.
ಇದರ ಜೊತೆಗೆ ಬೆಂಗಳೂರು ಸುತ್ತಮುತ್ತ ಹತ್ತು ಅಭಿವೃದ್ಧಿ ಪ್ರಾಧಿಕಾರಗಳಿವೆ, 7 ತಾಲ್ಲೂಕು ಅಭಿವೃದ್ಧಿ ಪ್ರಾಧಿಕಾರಗಳನ್ನು ರದ್ದು ಮಾಡುತ್ತೇವೆ.
ಜಿಲ್ಲೆಗೆ ಒಂದೇ ಅಭಿವೃದ್ಧಿ ಪ್ರಾಧಿಕಾರ ಸಾಕು ಈ ಸಂಬಂಧ ಮುಂದಿನ ಸಭೆಯಲ್ಲಿ ನಿರ್ಧಾರ ತಗೆದುಕೊಳ್ಳುತ್ತೇವೆ ಎಂದರು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Tue, 11 October 22