ಕರ್ನಾಟಕಕ್ಕೆ ದೊರೆಯುತ್ತಿದ್ದ ರೆಮ್​ಡೆಸಿವಿರ್ ಔಷಧ, ಆಕ್ಸಿಜನ್ ಪೂರೈಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ

|

Updated on: Apr 25, 2021 | 12:15 AM

ಜತೆಗೆ ಈವರೆಗೆ ಪ್ರತಿದಿನ ಕರ್ನಾಟಕಕ್ಕೆ ದೊರೆಯುತ್ತಿದ್ದ 300 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕದಪ್ರಮಾಣವೂ  ಹೆಚ್ಚಳವಾಗಲಿದ್ದು ಇನ್ನುಮುಂದೆ  800 ಮೆಟ್ರಿಕ್ ಟನ್​ ದೊರೆಯಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಕರ್ನಾಟಕಕ್ಕೆ ದೊರೆಯುತ್ತಿದ್ದ ರೆಮ್​ಡೆಸಿವಿರ್ ಔಷಧ, ಆಕ್ಸಿಜನ್ ಪೂರೈಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
Follow us on

ಬೆಂಗಳೂರು: ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೆಮ್​ಡೆಸಿವಿರ್ ಔಷಧ ಮತ್ತು ಆಕ್ಸಿಜನ್ನ್ನು ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಈವರೆಗೆ ಪ್ರತಿದಿನ ಪೂರೈಕೆಯಾಗುತ್ತಿದ್ದ 50 ಸಾವಿರ ರೆಮ್​ಡೆಸಿವಿರ್ ಔಷಧವನ್ನು 1,22,000ಕ್ಕೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದು ಏಪ್ರಿಲ್ 30ರವರೆಗೂ ಮುಂದುವರೆಯಲಿದೆ. ಜತೆಗೆ ಈವರೆಗೆ ಪ್ರತಿದಿನ ಕರ್ನಾಟಕಕ್ಕೆ ದೊರೆಯುತ್ತಿದ್ದ 300 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕದ ಪ್ರಮಾಣವೂ  ಹೆಚ್ಚಳವಾಗಲಿದ್ದು ಇನ್ನುಮುಂದೆ  800 ಮೆಟ್ರಿಕ್ ಟನ್​ ದೊರೆಯಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಹೆಚ್ಚುವರಿ ರೆಮ್‌ಡೆಸಿವಿರ್‌ ಔಷಧ ಮತ್ತು ವೈದ್ಯಕೀಯ ಆಮ್ಲಜನಕವನ್ನು ಕರ್ನಾಟಕಕ್ಕೆ ನೀಡಿದ್ದಕ್ಕೆ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ‌ಶಾ, ಮತ್ತು ಸಚಿವ ಸದಾನಂದಗೌಡ ಅವರುಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 50 ಸಾವಿರ ಬದಲು 1.22 ಲಕ್ಷ ರೆಮ್‌ಡಿಸಿವಿರ್‌ ವಯಲ್‌ ಪೂರೈಕೆ ಮಾಡಲು ಒಪ್ಪಿರುವದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಇದು ಕರ್ನಾಟಕ ನಡೆಸುತ್ತಿರುವ ಕೊವಿಡ್ ವಿರುದ್ಧದ ಹೋರಾಟಕ್ಕೆ ಬಲ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸಹ ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
‘ರಾಜ್ಯದ ಮನವಿಗೆ ಸ್ಪಂದಿಸಿದ ಕೇಂದ್ರಕ್ಕೆ ಧನ್ಯವಾದ’.ಸಹಕರಿಸಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮತ್ತು ಡಿ.ವಿ.ಸದಾನಂದ ಗೌಡರಿಗೆ ಧನ್ಯವಾದ ಎಂದು ಅವರು ಬರೆದುಕೊಂಡಿದ್ದಾರೆ.

ಕಳೆದ ಬುಧವಾರ ಕೇಂದ್ರವು ಕರ್ನಾಟಕಕ್ಕೆ ಏಪ್ರಿಲ್ 30ರವರೆಗಿನ ಬಳಕೆಗಾಗಿ 25,352 ರೆಮ್​ಡೆಸಿವಿರ್ ಬಾಟಲಿಗಳನ್ನು ಹಂಚಿಕೆ ಮಾಡಿತ್ತು. ಆದರೆ ರಾಜ್ಯವು ಹೆಚ್ಚುವರಿ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಔಷಧ ಇಲಾಖೆಯನ್ನೂ ನಿರ್ವಹಿಸುವ ಸದಾನಂದ ಗೌಡರು ಮಧ್ಯಪ್ರವೇಶಿಸಬೇಕಾಗಿ ಬಂದಿತ್ತು.

Published On - 9:47 pm, Sat, 24 April 21