Ranga Bhoomi ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿರುವ ರಂಗಭೂಮಿ: ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೇಕಲ್​ನಲ್ಲಿ ಜನರಿಲ್ಲದೆ ಪರದಾಟ

| Updated By: ಸಾಧು ಶ್ರೀನಾಥ್​

Updated on: Feb 06, 2021 | 12:04 PM

Ranga Bhoomi ಯಾವಾಗ ದೂರದರ್ಶನಗಳು ಮನೆಮನೆಗೆ ಬಂದು ಬಿಟ್ಟವೊ ಅಂದಿನಿಂದ ಹವ್ಯಾಸಿ ರಂಗಭೂಮಿ ಕಲಾವಿದರ ಬದುಕು ಡೋಲಾಯಮಾನವಾಯಿತು. ಅದರಲ್ಲೂ ಇತ್ತೀಚೆಗಂತೂ ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ಮೊಬೈಲ್‌ನಲ್ಲೆ ನಾಟಕಗಳನ್ನು ವೀಕ್ಷಣೆ ಮಾಡುತ್ತಿರುವುದರಿಂದ ಕಲಾವಿದರ ಬದುಕು ಚಿಂತಾಜನಕ ಸ್ಥಿತಿ ತಲುಪಿದಂತಾಗಿದೆ.

Ranga Bhoomi ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿರುವ ರಂಗಭೂಮಿ: ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೇಕಲ್​ನಲ್ಲಿ ಜನರಿಲ್ಲದೆ ಪರದಾಟ
ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೇಕಲ್​ನ ಚಿತ್ರಣ
Follow us on

ಕಲಬುರಗಿ: ದೂರದರ್ಶನ, ಮೂಖಿ ಮತ್ತು ವಾಕಿ ಚಿತ್ರಗಳು ಬರುವ ಮುನ್ನ ಹೆಚ್ಚಿನ ಜನರ ಮನಂರಜನೆಯ ಕೇಂದ್ರವಾಗಿದ್ದು ರಂಗಭೂಮಿ ನಾಟಕಗಳು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜಾತ್ರೆ ಮತ್ತು ವಿವಿಧ ಧಾರ್ಮಿಕ ಸಮಾರಂಭಗಳ ಸಮಯದಲ್ಲಿ ನಡೆಯುತ್ತಿದ್ದ ನಾಟಕಗಳಿಗೆ ಬಹುಬೇಡಿಕೆಯಿತ್ತು. ಎಲ್ಲಿಯಾದರು ನಾಟಕ ಪ್ರದರ್ಶನವಿತ್ತೆಂದರೆ ಸಾಗರೋಪಾದಿಯಲ್ಲಿ ಜನರು ಬಂದು ನಾಟಕಗಳನ್ನು ನೋಡಿ ಆನಂದಿಸುತ್ತಿದ್ದರು.

ಹಿಂದೆ ರಂಗಭೂಮಿ ಕಲಾವಿದರೆಂದರೆ ಅವರನ್ನು ಪೂಜ್ಯನೀಯ ಮನೋಭಾವನೆಯಿಂದ ಕಾಣಲಾಗುತ್ತಿತ್ತು. ಡಾ. ರಾಜ್‌ಕುಮಾರ್, ಅಶ್ವಥ್, ತೂಗುದೀಪ್ ಶ್ರೀನಿವಾಸ್, ಉಮಾಶ್ರೀ, ಸುಧೀರ, ಲೋಕೇಶ್ ಹೀಗೆ ಮುಂತಾದ ದಿಗ್ಗಜರು ರಂಗಭೂಮಿಯ ಬಣ್ಣದ ಬದುಕಿನಿಂದ ಬೆಳೆದು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ ಇತ್ತೀಚೆಗೆ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಅದರಲ್ಲೂ ಕೊರೊನಾ ಬಂದ ಮೇಲೆ ನಾಟಕದ ಟೆಂಟ್​ಗಳು ಬಿಕೋ ಎನ್ನುವ ಸ್ಥಿತಿಗೆ ಬಂದು ನಿಂತಿವೆ.

ಕೊರೊನಾ ಅನೇಕ ಕ್ಷೇತ್ರಗಳ ಜನರಿಗೆ ದೊಡ್ಡ ಪೆಟ್ಟನ್ನು ನೀಡಿದೆ. ಆದರೆ ಇತ್ತೀಚೆಗೆ ಕೊರೊನಾದ ಹೊಡೆತದಿಂದ ಅನೇಕರು ಪಾರಾಗಲು ಹೊಸ ಹೊಸ ವಿಧಾನಗಳ ಮೊರೆ ಹೋಗಿದ್ದಾರೆ. ಇನ್ನು ಸಿನಿಮಾ ಥಿಯೇಟರ್ ಓಪನ್ ಮಾಡುವುದರ ಜೊತೆಗೆ ಎಲ್ಲಾ ಸೀಟ್​ಗಳನ್ನು ಭರ್ತಿ ಮಾಡಲು ಕೂಡ ಅವಕಾಶ ನೀಡಿದೆ. ಹೀಗಾಗಿ ಅನೇಕ ದಿನಗಳಿಂದ ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿದ್ದ ಥಿಯೇಟರ್​ಗಳು ಈಗ ಮತ್ತೆ ಜನರಿಗೆ ಮನರಂಜನೆಯನ್ನು ಒದಗಿಸಲು ಮುಂದಾಗಿವೆ.

ರಂಗಭೂಮಿಯಲ್ಲಿನ ನಾಟಕ ಪ್ರದರ್ಶನ

ಆದರೆ ಇದಕ್ಕೆ ವ್ಯತಿರಿಕ್ತವಾದ ಸ್ಥಿತಿ ನಾಟಕ ಕಂಪನಿಯ ಮಾಲೀಕರು ಅನುಭವಿಸುತ್ತಿದ್ದಾರೆ. ಏಕೆಂದರೆ ನಾಟಕಗಳು ಪ್ರಾರಂಭವಾದರು ಕೂಡ ಪ್ರೇಕ್ಷಕರ ಕೊರತೆ ಮಾತ್ರ ಕಾಡುತ್ತಿದೆ. ಹೌದು ಮೊದಲೇ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದ ನಾಟಕ ಕಂಪನಿಗಳು, ಕೊರೊನಾದಿಂದ ಅನೇಕ ದಿನಗಳ ಕಾಲ ನಾಟಕ ಪ್ರದರ್ಶನವೇ ಇಲ್ಲದಂತೆ ಆಗಿತ್ತು.

ನಾಟಕಗಳನ್ನೇ ನೆಚ್ಚಿಕೊಂಡಿದ್ದ ಕಲಾವಿದರು ಕೊರೊನಾ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದರು. ಆದರೆ ಇದೀಗ ನಾಟಕಗಳ ಪ್ರದರ್ಶನಕ್ಕೆ ಸರ್ಕಾರ ಅವಕಾಶ ನೀಡಿದೆ. ಇನ್ನಾದರೂ ನಮ್ಮ ಬದಕು ಸರಿಹೋಗುತ್ತದೆ ಎಂದು ತಿಳಿದಿದ್ದ ನಾಟಕ ಕಂಪನಿ ಮಾಲೀಕರು ಮತ್ತು ಕಲಾವಿದರಿಗೆ ನಿರಾಸೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬಾರದೇ ಇರುವುದರಿಂದ ನಾಟಕ ಕಂಪನಿ ಮಾಲೀಕರು ಮತ್ತು ಕಲಾವಿದರು ಪರದಾಡುವಂತಹ ಸ್ಥಿತಿ ಮುಂದುವರಿದಿದೆ.

ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೇಕಲ್​ನ ನಾಟಕ

ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ಘತ್ತರಗಾ ಮುಖ್ಯರಸ್ತೆಗೆ ಹೊಂದಿಕೊ೦ಡಿರುವ ಲಕ್ಮಿ ದೇವಸ್ಥಾನದ ಮುಂಭಾಗದಲ್ಲಿ ನಾಟ್ಯ ಸಂಘವೊ೦ದು ಠಿಕಾಣಿ ಹೂಡಿದ್ದು ಹವ್ಯಾಸಿ, ಸಾಂಸಾರಿಕ ಹಾಗೂ ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯುತಿದ್ದಾರೆ. ಆದರೆ ಕೋವಿಡ್-19ನಿಂದ ಜನರ ಆಗಮನ ಕಡಿಮೆಯಾದ ನೋವಿನಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಕಂಪನಿಯ ಮಾಲೀಕರು ಕಂಗಾಲಾಗಿದ್ದಾರೆ. ದೈನಂದಿನ ಖರ್ಚು ವೆಚ್ಚವನ್ನು ಕೂಡ ಸರಿದೂಗಿಸಲಿಕ್ಕಾಗದೇ ಕಂಪನಿ ಮಾಲೀಕರು ಪರದಾಡುತ್ತಿದ್ದಾರೆ.

ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೇಕಲ್:
ಮೂಲತಃ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ವಿಠ್ಠಲಪುರ ಗ್ರಾಮದ ಬಸವರಾಜ ಎಸ್. ಕಟ್ಟಿಮನಿಯವರು ತಮ್ಮ ತಂದೆಯವರಾದ ಸಿದ್ರಾಮಪ್ಪ ಕಟ್ಟಿಮನಿ, ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಹಾರ್ಮೊನಿಯಂ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರಂತೆ. ಬಳಿಕ ತಂದೆಯ ಮಾರ್ಗದರ್ಶನದಲ್ಲಿ 1985ರಲ್ಲಿ ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೇಕಲ್ ಎಂಬ ನಾಟಕ ಕಂಪನಿಯನ್ನು ಸ್ಥಾಪಿಸಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಳ್ಳಿಹಳ್ಳಿಗಳಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಪ್ರದರ್ಶಿಸುತ್ತಾ ಸುಮಾರು 36 ವರ್ಷಗಳಿಂದ ನಾಡಿನ ಉದ್ದಗಲ್ಲಕ್ಕೂ ಸಂಚರಿಸುತ್ತಾ ಅಲೆಮಾರಿ ಜೀವನ ಸಾಗಿಸುತ್ತಿದ್ದಾರೆ

ಬಸವರಾಜ ಕಟ್ಟಿಮನಿಯವರ ಇಡೀ ಕುಟುಂಬವೇ ರಂಗಭೂಮಿ ಕಲೆಗೆ ಜೀವನ ಮುಡಿಪಾಗಿಟ್ಟಿದೆ. ಈ ಕಂಪನಿಯಲ್ಲಿ 25 ಜನ ಕೆಲಸಗಾರರಿದ್ದು, ಅದರಲ್ಲಿ 15ಜನ ಕಲಾವಿದರಿದ್ದಾರೆ. ಬಸವರಾಜ ಕಟ್ಟಿಮನಿ ದಂಪತಿ ಸೇರಿದಂತೆ ಇಬ್ಬರು ಮಕ್ಕಳು ಇಬ್ಬರು ಸೊಸೆಯಂದಿರು ಒಬ್ಬ ಮಗಳು ಹಾಗೂ ಅಳಿಯ ಜೊತೆಗೆ ಹೊರಗಿನ 8 ಕಲಾವಿದರನ್ನು ಸೇರಿಸಿಕೊಂಡು ನಾಟಕ ಪ್ರದರ್ಶನ ಮಾಡಲಾಗುತ್ತಿದೆ. ಇವರೆಲ್ಲರ ಊಟ, ವಸತಿ ಹಾಗೂ ಸಂಬಳ ನೀಡಲು ಆರ್ಥಿಕ ದುಃಸ್ಥಿತಿ ಎದುರಾಗಿದ್ದು, ಸಾಲ ಸೋಲ ಮಾಡಿ ನಾಟಕ ಕಂಪನಿಯನ್ನು ಉಳಿಸಿಕೊಂಡು ಬಂದಿದ್ದಾರೆ.

ನಾಟಕದ ಪೋಸ್ಟರ್​ನ ಚಿತ್ರಣ

ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ನೀಡಲಾಗುವ ಅನುದಾನದಲ್ಲಿ ದಕ್ಷಿಣ ಭಾಗದ ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಉತ್ತರ ಕರ್ನಾಟಕದ ಕಲಾವಿದರಿಗೆ ಅತೀ ಕಡಿಮೆ ಅನುದಾನ ನೀಡಲಾಗುತ್ತಿದೆ. ಮಲತಾಯಿ ಧೋರಣೆ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೂಡ ಇದೆ.

ದಶಕಗಳ ಹಿಂದೆ ಅದೊಂದು ಕಾಲವಿತ್ತು ನಾಟಕ ಕಂಪನಿಗಳು ಟೆಂಟ್ ಹಾಕಿದ್ದಾರೆ ಎಂದರೆ ಸುತ್ತ ಹತ್ತು ಹಳ್ಳಿಗಳಿಂದ ಪ್ರೇಕ್ಷಕರು ಎತ್ತಿನ ಬಂಡಿ ಕಟ್ಟಿಕೊಂಡು ನಾಟಕ ನೋಡಲು ನಡುರಾತ್ರಿಯಲ್ಲೇ ಲಗ್ಗೆ ಇಡುತ್ತಿದ್ದರು. ಬಳಿಕ ನಾಟಕ ಪಾತ್ರ ಧಾರಿಗಳ ಸನ್ನಿವೇಶಗಳನ್ನು ಮೆಲುಕು ಹಾಕುತ್ತಾ ವಾರಗಟ್ಟಲೇ ಕಟ್ಟೆಗಳ ಮೇಲೆ ಕೂತು ಹರಟೆ ಹೊಡೆಯುತ್ತಾ ಸಮಯ ಕಳೆಯುತ್ತಿದ್ದರು.

ಬಸವರಾಜ ಎಸ್. ಕಟ್ಟಿಮನಿ ಕುಟುಂಬ

ಯಾವಾಗ ದೂರದರ್ಶನಗಳು ಮನೆಮನೆಗೆ ಬಂದು ಬಿಟ್ಟವೋ ಅಂದಿನಿಂದ ಹವ್ಯಾಸಿ ರಂಗಭೂಮಿ ಕಲಾವಿದರ ಬದುಕು ಡೋಲಾಯಮಾನವಾಯಿತು. ಅದರಲ್ಲೂ ಇತ್ತೀಚೆಗಂತೂ ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ಮೊಬೈಲ್‌ನಲ್ಲೆ ನಾಟಕಗಳನ್ನು ವೀಕ್ಷಣೆ ಮಾಡುತ್ತಿರುವುದರಿಂದ ಕಲಾವಿದರ ಬದುಕು ಚಿಂತಾಜನಕ ಸ್ಥಿತಿ ತಲುಪಿದಂತಾಗಿದೆ.

ಬದಲಾದ ದಿನಗಳಲ್ಲಿ ರಂಗಭೂಮಿಯನ್ನೇ ನಂಬಿದ ಕಲಾವಿದರು ನಿರೀಕ್ಷಿತ ಪ್ರೇಕ್ಷಕರಿಲ್ಲದೆ ನಾಟಕದ ಟೆಂಟ್‌ಹೌಸ್‌ಗಳು ಭಣಗುಡುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸುಮಾರು 2 ತಿಂಗಳುಗಳಿಂದ ಪಟ್ಟಣದಲ್ಲಿ ಬೀಡು ಬಿಟ್ಟಿರುವ ಶಿರಡಿ ಸಾಯಿಬಾಬಾ ನಾಟ್ಯ ಸಂಘದಲ್ಲಿ ಹಲವು ಸುಂದರ ಸಾಮಾಜಿಕ ಹಾಸ್ಯಮಯ ನಾಟಗಳು ಪ್ರದರ್ಶನಗೊಳ್ಳುತ್ತಿದ್ದರೂ ನಿರೀಕ್ಷಿತ ಪ್ರೇಕ್ಷಕರ ಕೊರತೆ ಕಾಡುತ್ತಿದೆ.

ರಂಗಭೂಮಿ ಮತ್ತು ನಾಟಕ ಕಲಾವಿದರು ಕೋವಿಡ್​ನಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ರಂಗಭೂಮಿಯ ಉಳಿವಿಗಾಗಿ ಜನರ ಪ್ರೋತ್ಸಾಹದ ಜೊತೆಗೆ ಸರ್ಕಾರವು ಸಹ ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ನಾಟಕ ಕಂಪನಿಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೇಕಲ್​ನ ಮಾಲೀಕರು ಬಸವರಾಜ ಎಸ್. ಕಟ್ಟಿಮನಿ ಹೇಳಿದ್ದಾರೆ.

ಜಗದೀಶ್ವರ ನಾಟಕರಂಗದಲ್ಲಿ ಏನುಳಿದು ಏನಳಿದು ಇನ್ನೇನೇನು ಮೊಳೆಯುವುದೋ?

Published On - 11:49 am, Sat, 6 February 21