ವಿಜಯಪುರ: ಬ್ಲ್ಯಾಕ್‌ಮೇಲ್ ಮಾಡಿದವರಿಗೆ, ಹಣ ಕೊಟ್ಟವರಿಗೆ ಸಚಿವ ಸ್ಥಾನ ಸಿಕ್ಕಿದೆ. ಅಲ್ಲದೆ ಕೆಲವರು ಸಿಡಿ ತೋರಿಸಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನ ಹೆದರಿಸಿ ಸಚಿವರಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಯತ್ನಾಳ್.. ” 3 ಸಚಿವ ಸ್ಥಾನ ಬ್ಲ್ಯಾಕ್‌ಮೇಲ್ ಮಾಡಿ ಪಡೆದುಕೊಂಡಿದ್ದಾರೆ. ಇದೇ ಮೂವರು ಈ ಹಿಂದೆ ನನ್ನನ್ನು ಭೇಟಿಯಾಗಿದ್ದರು. ನಾವೆಲ್ಲಾ ಸೇರಿ ಬಿಎಸ್‌ವೈರನ್ನು ಕೆಳಗಿಳಿಸೋಣ ಎಂದಿದ್ದರು. ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು” ಎಂದ್ರು.
ನೈತಿಕತೆ ಇದ್ದರೆ ಸಿಎಂ ರಾಜೀನಾಮೆ ನೀಡಿ ಹೊರಬರಲಿ
ಬ್ಲ್ಯಾಕ್‌ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಕೆಲವರು ಸಿಡಿ ತೋರಿಸಿ ಯಡಿಯೂರಪ್ಪರನ್ನ ಹೆದರಿಸಿ ಸಚಿವರಾಗಿದ್ದಾರೆ. ಇನ್ನೂ ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ. ಈ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಸಮಸ್ತ ಲಿಂಗಾಯತ ಸಮುದಾಯದ ಮರ್ಯಾದೆ ತೆಗೆದಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ಈ ವೇಳೆ ಯತ್ನಾಳ್ ಸಿಎಂಗೆ ಸವಾಲು ಹಾಕಿದ್ದಾರೆ.
ವೀರಶೈವ ಲಿಂಗಾಯತ ಮಠಗಳಿಗೆ ಹಣ ನೀಡಿ ನನ್ನ ಕೆಳಗಿಳಿಸಿದರೆ ಕೇಂದ್ರದ ವಿರುದ್ಧ ಬಂಡೇಳುವಂತೆ ಯಡಿಯೂರಪ್ಪ ಯೋಜನೆ ಮಾಡಿದ್ದಾರೆ. ಸಂಕ್ರಮಣದ ಉತ್ತರಾಯಣದ ಬಳಿಕ ಸಿಎಂ ಯಡಿಯೂರಪ್ಪ ಅಧಃಪತನ ಆರಂಭ ಎಂದು ಸಿಎಂ ವಿರುದ್ಧ ಪ್ರಹಾರ ಬೀಸುವ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
Published On - 3:20 pm, Wed, 13 January 21